ಊಟ – ಪಾಠ
ರಮಾನಂದ ಶರ್ಮಾ
ಶಾಲಾ ಮಕ್ಕಳಿಗೆ ಬಿಸಿಯೂಟ ನೀಡಲು ಪ್ರತ್ಯೇಕ ವಿಭಾಗ ಬೇಕು ಎನ್ನುವ ಚಿಂತನೆ ಮುನ್ನೆಲೆಗೆ ಬಂದಂತೆ ಕಾಣುತ್ತದೆ. ಈ ಕುರಿತು ಆರ್ಥಿಕ
ಸಮಿತಿ ರಚನೆ ಮಾಡಿ, ಸಾಧಕ-ಬಾಧಕಗಳನ್ನು ವಿಸ್ತೃತವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಭರವಸೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಬಿಸಿಯೂಟದ ವ್ಯವಸ್ಥೆಯಲ್ಲಿನ ಸವಾಲುಗಳು, ಇದನ್ನು ವ್ಯವಸ್ಥಿತವಾಗಿ ನಿಭಾಯಿಸುವಲ್ಲಿ ಶಿಕ್ಷಕರು ಎದುರಿಸುತ್ತಿರುವ ಸಂಕಷ್ಟಗಳನ್ನು ಹೊರಟ್ಟಿ ಯವರು ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದು “ಸದ್ಯದ ಪರಿಸ್ಥಿತಿ ಮುಂದುವರಿದರೆ ಶಿಕ್ಷಕರು ಗುಣಾತ್ಮಕ ಶಿಕ್ಷಣವನ್ನು ನೀಡಲಾಗದು, ಶಾಲೆ ಗಳಿಂದ ಉತ್ತಮ ಪರಿಣಾಮವನ್ನು ನಿರೀಕ್ಷಿಸಲಾಗದು; ಶಿಕ್ಷಣ ವ್ಯವಸ್ಥೆ ಯನ್ನೂ ನಿರ್ವಹಿಸುತ್ತಾ, ಸರಕಾರ ಹಾಕಿಕೊಂಡಿರುವ ಕಾರ್ಯಕ್ರಮಗಳ ಅನುಷ್ಠಾನ, ಗುಣಮಟ್ಟದ ಬಿಸಿಯೂಟ ತಯಾರಿಕೆ ಎಲ್ಲವನ್ನೂ ನೋಡಿಕೊಳ್ಳುವುದು ಕಷ್ಟಸಾಧ್ಯ” ಎಂಬುದನ್ನು ಅವರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿಗಳು ಈ ವಿಷಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬುದು ಲಭ್ಯಮಾಹಿತಿ.
1956ರಲ್ಲಿ, ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಕೆ.ಕಾಮರಾಜರು, ಮಕ್ಕಳನ್ನು ಶಾಲೆಗಳಿಗೆ ಸೆಳೆಯಲು ಮತ್ತು ಆರ್ಥಿಕವಾಗಿ ದುರ್ಬಲರಾದವರು ಶಿಕ್ಷಣದಿಂದ ವಂಚಿತರಾಗ ದಂತೆ ನೋಡಿಕೊಳ್ಳಲು ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು. ಇದರ ಹಿಂದಿನ ಘನೋದ್ದೇಶ ಮತ್ತು ಅದು ಅನುಷ್ಠಾನಗೊಂಡ ಪರಿಯನ್ನು ನೋಡಿದ ಸುಪ್ರೀಂಕೋರ್ಟ್ 2001ರ ನವೆಂಬರ್ 28ರಂದು, “ದೇಶದ
ಎಲ್ಲಾ ಶಾಲೆಗಳಲ್ಲಿ ಈ ಯೋಜನೆಯನ್ನು 6 ತಿಂಗಳೊಳಗಾಗಿ ಜಾರಿಗೊಳಿಸಬೇಕು” ಎಂದು ಆದೇಶಿಸಿತು. ಕರ್ನಾಟಕದಲ್ಲಿ ಈ ಯೋಜನೆ ೨೦೦೨-೦೩ರಲ್ಲಿ ಪ್ರಾರಂಭವಾಯಿತು. ಮೊದಲ ಹಂತದಲ್ಲಿ ರಾಜ್ಯದ ಈಶಾನ್ಯ ಭಾಗದ 7 ಜಿಲ್ಲೆಗಳಲ್ಲಿ ಬಿಸಿಯೂಟ ಶುರುವಾಗಿ ಕ್ರಮೇಣ ರಾಜ್ಯಾದ್ಯಂತ ವಿಸ್ತರಿಸಿತು.
ಉದ್ದೇಶ ಘನವಾಗಿದ್ದರೂ, ಸರಿಯಾದ ಸಿದ್ಧತೆಯಿಲ್ಲದೆ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದ್ದರಿಂದ ಸಾಕಷ್ಟು ಗೊಂದಲಗಳು ಮತ್ತು ಎರಡು-ತೊಡರುಗಳು ಶುರುವಿನಿಂದಲೇ ಗೋಚರಿಸತೊಡಗಿದವು ಎನ್ನಲಾಗುತ್ತದೆ. ಮಕ್ಕಳಿಗೆ ಗುಣಮಟ್ಟದ ಬಿಸಿಯೂಟ ನೀಡುವ ಮಹತ್ವದ ಜವಾಬ್ದಾ
ರಿಯ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿಯನ್ನು ನೀಡಲಿಲ್ಲ.
ಹೆಚ್ಚುವರಿ ಹೊರೆಯಾಗಿರುವ ಈ ಕೆಲಸಕ್ಕೆ ಹೆಚ್ಚಿನ ವೇತನವನ್ನು ನೀಡಲಿಲ್ಲ. ಪ್ರತಿ ಶಾಲೆಯಲ್ಲಿ ಕನಿಷ್ಠ ಒಬ್ಬರು ಶಿಕ್ಷಕರಿಗೆ ಬಿಸಿಯೂಟ ನಿರ್ವಹಣೆಯ ಕೆಲಸವೇ ಆಗುತ್ತಿದ್ದು, ಅವರು ಇದರೊಂದಿಗೆ ತಮ್ಮ ನಿಗದಿತ ಶೈಕ್ಷಣಿಕ ಕರ್ತವ್ಯಗಳನ್ನೂ ನಿಭಾಯಿಸಬೇಕಾಗುತ್ತದೆ. ಪ್ರತಿ ಶಾಲೆಯಲ್ಲಿನ ನೂರಾರುಮಕ್ಕಳಿಗೆ ಅಡುಗೆ ಮಾಡಲು ಜನರಿದ್ದರೂ, ಊಟ ತಯಾರಿಯ ಮೇಲ್ವಿಚಾರಣೆ, ಬಡಿಸುವಿಕೆ, ಗುಣಮಟ್ಟ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಿಕೆ, ಲೆಕ್ಕಪತ್ರ ಇಡುವಿಕೆ, ಆಹಾರವು ಅಪವ್ಯಯವಾಗದಂತೆ ನೋಡಿಕೊಳ್ಳುವಿಕೆ ಇವೆಲ್ಲಾ ಶಿಕ್ಷಕರ ಪಾಲಿಗೆ ‘ಮ್ಯಾರಥಾನ್’ ಕೆಲಸವಾಗಿ ಬಿಡುತ್ತದೆ. ಇದರೊಂದಿಗೆ ಚೆಕಿಂಗ್, ಆಟಿಡಿಂಗ್ ಬೇರೆ!
ಸಿಯೂಟಕ್ಕೆ ತರಕಾರಿ, ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿಗಳ ಖರೀದಿ, ಧಾನ್ಯಗಳು ಮತ್ತು ಸಾಂಬಾರ ಪದಾರ್ಥಗಳ ಶೇಖರಣೆ ಹಾಗೂ ಲೆಕ್ಕ ನಿರ್ವಹಣೆ ಹೀಗೆ ಬಹುತೇಕ ಮದುವೆಮನೆಯ ವಾತಾವರಣವನ್ನು ನಿಭಾಯಿಸಬೇಕಾದ ಹೊಣೆ ಶಿಕ್ಷಕರದ್ದು. ಇಂಥ ಪರಿಸ್ಥಿತಿಯಲ್ಲಿ ಅವರು ಮಕ್ಕಳಿಗೆ ಬೋಧಿಸಲು ಸಜ್ಜುಗೊಳ್ಳುವುದು ಹೇಗೆ? ಆಂಧ್ರಪ್ರದೇಶದಲ್ಲಿ ಸದರಿ ಬಿಸಿಯೂಟದ ಯೋಜನೆಯ ಉಸ್ತುವಾರಿಯನ್ನು ಶಿಕ್ಷಕರಿಂದ ಆಯಾ ಪ್ರದೇಶದ ವಾರ್ಡ್ ಕಾರ್ಯದರ್ಶಿಗಳಿಗೆ ವರ್ಗಾಯಿಸಬೇಕು ಎಂಬ ಕೂಗು ಕೇಳಿಬಂದಿತ್ತು; ಇದರಿಂದಾಗಿ ಶಿಕ್ಷಕರು ಬೋಧನೆ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಯತ್ತ ಗಮನ ಹರಿಸಬಹುದು ಎಂಬುದು ಅಲ್ಲಿನವರ ವಾದವಾಗಿತ್ತಂತೆ.
ಮತ್ತೊಂದೆಡೆ, “ಪ್ರತಿ ಶಾಲೆಯಲ್ಲೂ ಅಡುಗೆ ಮಾಡುವುದಕ್ಕಿಂತ ನಿರ್ದಿಷ್ಟ ಅಂತರದಲ್ಲಿರುವ ಶಾಲೆಗಳನ್ನು ಸೇರಿಸಿ ಒಂದು ಕ್ಲಸ್ಟರ್ ಮಾಡಿ, ಅವೆಲ್ಲಕ್ಕೂ ಪ್ಯಾಕೆಟ್ನಲ್ಲಿ ಬಿಸಿಯೂಟವನ್ನು ಪೂರೈಸುವ ಜವಾಬ್ದಾರಿಯನ್ನು ಇಸ್ಕಾನ್ನಂಥ ಸಂಸ್ಥೆಗಳಿಗೆ ವಹಿಸಬೇಕು; ಇದರಿಂದಾಗಿ ಶಿಕ್ಷಕರ ಮೇಲಿನ ಒತ್ತಡ ಕಡಿಮೆಯಾಗಿ ಅವರು ತಮ್ಮ ಆದ್ಯಕರ್ತವ್ಯವಾದ ಬೋಧನೆಯಲ್ಲಿ ತೊಡಗಿಸಿಕೊಳ್ಳಲು ಸಮಯ ಸಿಗುತ್ತದೆ” ಎಂಬ ಚಿಂತನೆ ಒಮ್ಮೆ ಕೇಳಿಬಂದಿತ್ತು. ಆದರೆ ಅದೇಕೋ ಗಟ್ಟಿದನಿಯಾಗದೆ, ಹಳೆಯ ವ್ಯವಸ್ಥೆಯೇ ಮುಂದುವರಿದಿದೆ.
ಮಕ್ಕಳ ಶಿಕ್ಷಣಕ್ಕೆ ಮತ್ತು ಭವಿಷ್ಯಕ್ಕೆ ಭದ್ರಬುನಾದಿ ಬೀಳುವುದು ಪ್ರಾಥಮಿಕ ಶಾಲಾ ಮಟ್ಟದಲ್ಲಿ, ಹಾಗೂ ಈ ಘಟ್ಟದಲ್ಲಿ ಶಿಕ್ಷಕರು ಎಷ್ಟು ಸಮರ್ಥವಾಗಿ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾರೆ ಎನ್ನುವುದರ ಮೇಲೆ. ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದಿದ್ದರೆ ಅದಕ್ಕೆ ಶಿಕ್ಷಕರನ್ನು ಹೊಣೆಯಾಗಿಸುವುದು, ದೂರುವುದು ಸಾಮಾನ್ಯ; ಆದರೆ ಶಿಕ್ಷಕರು ಅಪೇಕ್ಷಿತ ಕಾರ್ಯಕ್ಷಮತೆಯನ್ನು ಏಕೆ ತೋರುತ್ತಿಲ್ಲ? ಅವರ ಎದುರಿಸುತ್ತಿರುವ ಸವಾಲು ಮತ್ತು ತೊಂದರೆಗಳೇನು? ಎನ್ನುವುದರ ಬಗ್ಗೆ ‘ರಿಯಾಲಿಟಿ ಚೆಕ್’ ನಡೆಯುವುದಿಲ್ಲ. ಬಿಸಿಯೂಟ ವ್ಯವಸ್ಥೆಯು ಮಕ್ಕಳಿಗೆ ಅನುಕೂಲಕರವಾಗಿದ್ದರೂ ಅದು ಶಿಕ್ಷಕರನ್ನು ಹೈರಾಣು ಮಾಡುತ್ತಿರುವುದಂತೂ ಖರೆ; ಆದ್ದರಿಂದ, ಅದನ್ನು ವ್ಯವಸ್ಥಿತವಾಗಿ ನಿರ್ವಹಿಸಿ
ಉದ್ದೇಶವನ್ನು ಸಫಲಗೊಳಿಸಲು ಆ ವ್ಯವಸ್ಥೆಯನ್ನು ಪ್ರತ್ಯೇಕ ಇಲಾಖೆಯ ಅಡಿಯಲ್ಲಿ ತರಬೇಕು ಎನ್ನುವುದು ಶ್ಲಾಘನೀಯ ಸಲಹೆ.
ಶಿಕ್ಷಕರನ್ನು ಬೋಧಕೇತರ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ಶಿಕ್ಷಣದ ಮೇಲಾದ ಪರಿಣಾಮದ ಬಗ್ಗೆ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆ- ಎಜುಕೇಷನ್ ಆಂಡ್ ಅಡ್ಮಿನಿಸ್ಟ್ರೇಷನ್’ ಒಂದು ರಾಷ್ಟ್ರೀಯ ಸಮೀಕ್ಷೆಯನ್ನು ನಡೆಸಿದೆ. ಇದರ ಪ್ರಕಾರ, ಶಿಕ್ಷಕರು ಮಕ್ಕಳಿಗೆ ಕಲಿಸುವುದಕ್ಕೆ ವಿನಿ
ಯೋಗಿಸುತ್ತಿರುವ ಸಮಯ ಕೇವಲ ಶೇ.19.1ರಷ್ಟು; ಅವರ ಮಿಕ್ಕ ಸಮಯವೆಲ್ಲಾ ಬೋಧಕೇತರ ಚಟುವಟಿಕೆಗಳಲ್ಲೇ (ಶಾಲಾ ಮತ್ತು ಇಲಾಖಾ ಚಟುವಟಿಕೆ) ವಿನಿಯೋಗಿಸಲ್ಪಡುತ್ತದೆ. ಪಲ್ಸ್ ಪೋಲಿಯೋ ಅಭಿಯಾನ, ಬಿಸಿಯೂಟದ ಸಿದ್ಧತೆ, ಅದರ ಲೆಕ್ಕಪತ್ರಗಳ ತಯಾರಿ, ಆಡಿಟ್ ಮಾಡಿಸುವಿಕೆ, ಜಯಂತಿಗಳ ಆಚರಣೆ ಹೀಗೆ ಸಾಗುತ್ತದೆ ಅವರ ಚಟುವಟಿಕೆಗಳ ಸಾಲು. ಇಷ್ಟು ಸಾಲದೆಂಬಂತೆ, ಜನಗಣತಿ, ಜಾತಿ, ಗಣತಿ, ವೃಕ್ಷಗಣತಿ, ಸಾಕ್ಷರತಾ ಗಣತಿಯಂಥ ಯಾವುದೇ ‘ಗಣತಿ’ಗಳಿಗೂ ಶಿಕ್ಷಕರೇ ಬೇಕು. ಇನ್ನು ಚುನಾವಣೆಗಳು ಬಂದರಂತೂ ಕೇಳುವುದೇ ಬೇಡ! ಒಂದು ಕಾಲಕ್ಕೆ 5 ವರ್ಷಕ್ಕೊಮ್ಮೆ ಚುನಾವಣೆಗಳು ನಡೆಯುತ್ತಿದ್ದವು; ಆದರೀಗ ಒಂದೇ ವರ್ಷದಲ್ಲಿ ೫ ಚುನಾವಣೆಗಳು ನಡೆಯುವುದನ್ನು
ತಳ್ಳಿಹಾಕಲಾಗದು! ಲೋಕಸಭೆ, ವಿಧಾನಸಭೆ ಚುನಾವಣೆಗಳಿಗೆ ಮಾತ್ರವಲ್ಲದೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೂ ಶಿಕ್ಷಕರ ಸೇವೆಯನ್ನು ಎರವಲು ಪಡೆಯುವುದು ಲಾಗಾಯ್ತಿ ನಿಂದಲೂ ಇರುವ ಪರಿಪಾಠ.
ಈ ರೀತಿಯ ಬೋಧಕೇತರ ಕೆಲಸ ಮತ್ತು ಒತ್ತಡದಲ್ಲಿರುವ ಶಿಕ್ಷಕರು ನಿರೀಕ್ಷಿತ ಮಟ್ಟದಲ್ಲಿ ಬೋಧನೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವೇ? ಎಂಬುದು ಪ್ರಶ್ನೆ. ಕಲಿಕೆ ಮತ್ತು ಕಲಿಸುವಿಕೆ ಎಂಬುದು ಒಂದು ನಿರಂತರ ಪ್ರಕ್ರಿಯೆ. ಮಧ್ಯ ದಲ್ಲಿ ‘ಕೊಂಡಿ’ ತಪ್ಪಿದರೆ, ‘ನಿರಂತರತೆ’ ಕಾಯ್ದು ಕೊಳ್ಳುವುದು ಕಷ್ಟ. ಸಂಬಂಧಪಟ್ಟವರು ಈ ಸೂಕ್ಷ್ಮಗಳನ್ನು ಇನ್ನಾದರೂ ಅರಿತುಕೊಂಡು ಬೋಧಕೇತರ ಹೊಣೆಗಾರಿಕೆಗಳ ನೊಗವನ್ನು
ಶಿಕ್ಷಕರ ಹೆಗಲ ಮೇಲಿಂದ ಇಳಿಸಲಿ. ಮಕ್ಕಳ ಬದುಕು ಮತ್ತು ಭವಿಷ್ಯ ರೂಪಿಸುವುದರ ಕಡೆಗಷ್ಟೇ ಅವರನ್ನು ನಿಯೋಜಿಸಲಿ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)
ಇದನ್ನೂ ಓದಿ: Ramanand Sharma Column: ಬೆಂಗಳೂರು ವರುಣಾಘಾತ: ಅದೇ ರಾಗ, ಅದೇ ಹಾಡು