ಮೂರ್ತಿಪೂಜೆ
ಆರ್.ಟಿ.ವಿಠ್ಠಲಮೂರ್ತಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ಶನಿವಾರ ಯಡಿಯೂರಪ್ಪ ಅವರಿಗೆ ಫೋನು ಮಾಡಿದ್ದಾರೆ. ಹೀಗೆ ಫೋನು ಮಾಡಿದವರು “ಇದೇನು ಯಡಿಯೂರಪ್ಪಾಜೀ? ನಿಮ್ಮ ಬೆಂಬಲಿಗರು ಪಕ್ಷದ ನಾಯಕರ ವಿರುದ್ಧವೇ ಬೀದಿಗಿಳಿದಿದ್ದಾರೆ?” ಅಂತ ಪ್ರಶ್ನಿಸಿದ್ದಾರೆ. ಈ ಮಾತಿಗೆ ಪ್ರತ್ಯುತ್ತರಿಸಿದ
ಯಡಿಯೂರಪ್ಪ ಅವರು, “ಸರ್, ಇಲ್ಲಿ ನನ್ನ ಬೆಂಬಲಿಗರ‍್ಯಾರೂ ಪಕ್ಷದ ನಾಯಕರ ವಿರುದ್ಧ ಬೀದಿಗಿಳಿದಿಲ್ಲ. ಬೀದಿ ಗಿಳಿದವರೆಲ್ಲ ಪಕ್ಷನಿಷ್ಠರು. ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಯಾರು ಧ್ವನಿ ಎತ್ತುತ್ತಿzರೋ ಅವರ ವಿರುದ್ಧ ಆಕ್ರೋಶ ಗೊಂಡವರು.
ಇವತ್ತು ಪಕ್ಷದ ಅಧ್ಯಕ್ಷರ ವಿರುದ್ಧ ಧ್ವನಿ ಎತ್ತುತ್ತಿರುವ ಯತ್ನಾಳ್ ಮತ್ತಿತರರ ಉದ್ದೇಶ ಏನು? ಒಂದು ವೇಳೆ ಅವರಿಗೆ ಭಿನ್ನಾಭಿಪ್ರಾಯವಿದ್ದರೆ ವರಿಷ್ಠರಿಗೆ ದೂರು ಕೊಡಲಿ. ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ಆರೋಪ ಮಾಡುತ್ತಾ ಕುಳಿತರೆ ರಾಜ್ಯದ ಜನರಿಗೆ ಹೋಗುವ ಸಂದೇಶ
ಏನು? ಮೊದಲೇ ನಾವು ಅಧಿಕಾರದಲ್ಲಿಲ್ಲ. ಹೀಗಿರುವಾಗ ನಮ್ಮವರು ಸರಿ ಇಲ್ಲ ಅಂತ ಇವರೇ ದೂರುತ್ತಾ ಹೋದರೆ ಯಾರಿಗೆ ಲಾಭ? ಸಿದ್ದರಾಮಯ್ಯ ಅವರ ಸರಕಾರಕ್ಕೆ ತಾನೇ? ಹೀಗಾಗಿ ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರ ವಿರುದ್ಧ ಪಕ್ಷ ನಿಷ್ಠರು ಸಿಡಿದೆದ್ದಾರೆ. ವರಿಷ್ಠರು ತಕ್ಷಣವೇ ಭಿನ್ನರ ಬಾಯಿ ಮುಚ್ಚಿಸದಿದ್ದರೆ ಪಕ್ಷ ನಿಷ್ಠರ ನಿಯೋಗ ನಾಳೆ ದಿಲ್ಲಿಗೆ ಬಂದು ನಿಮಗೆ ದೂರು ಕೊಡುತ್ತದೆ. ಹೀಗಾಗಿ
ಯತ್ನಾಳ್ ಮತ್ತಿತರರು ಮೌನವಾಗಿರಲು ನೀವು ಸೂಚನೆ ಕೊಡಿ. ಇಲ್ಲದಿದ್ದರೆ ಪಕ್ಷ ನಿಷ್ಠರ ಬಾಯಿ ಮುಚ್ಚಿಸುವ ವಿಷಯದಲ್ಲಿ ನಾನು ಅಸಹಾಯಕ” ಎಂದಿದ್ದಾರೆ.
ತಾವು ಎತ್ತಿದ ಮಾತಿಗೆ ಯಾವಾಗ ಯಡಿಯೂರಪ್ಪ ಇಷ್ಟು ಡಿಟೈಲ್ ಆದ ಕಂಪ್ಲೇಂಟು ಕೊಟ್ಟರೋ, ಆಗ ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನೇ ಸಮಾಧಾನ ಮಾಡಿದ್ದಾರೆ. “ಡೋಂಟ್ ವರಿ ಯಡಿಯೂರಪ್ಪಾಜೀ. ಇನ್ನೊಂದು ವಾರದಲ್ಲಿ ಯತ್ನಾಳ್ ಮತ್ತಿತರರ ಬಾಯಿ ಮುಚ್ಚಿಸುತ್ತೇವೆ. ಆದರೆ ಯಾವ ಕಾರಣಕ್ಕೂ ಬೀದಿಗಿಳಿಯದಂತೆ ನಿಮ್ಮ ಬೆಂಬಲಿಗರಿಗೆ ಸೂಚನೆ ಕೊಡಿ” ಎಂದಿದ್ದಾರೆ. ಆದರೆ ಆಗಲೂ ತಮ್ಮ ವರಸೆ ಬದಲಿಸದ ಯಡಿಯೂರಪ್ಪ ಅವರು, “ಸರ್, ನಾನು ನಿಮಗೆ ಮುಂಚೆಯೇ ಹೇಳಿದ್ದೇನೆ.
ಅವರ‍್ಯಾರೂ ನನ್ನ ಬೆಂಬಲಿಗರಾಗಿ ಬೀದಿಗಿಳಿದಿಲ್ಲ. ಬದಲಿಗೆ ಪಕ್ಷದ ಕಟ್ಟಾ ಬೆಂಬಲಿಗರಾಗಿ ಬೀದಿಗಿಳಿದಿದ್ದಾರೆ. ಯತ್ನಾಳ್ ಮತ್ತಿತರರು ಸುಮ್ಮನಿದ್ದರೆ ಅವರೂ ಸುಮ್ಮನಿರುತ್ತಾರೆ. ಇಲ್ಲದಿದ್ದರೆ ಅವರ ಪಾಡಿಗೆ ಅವರು ಬೀದಿ ಹೋರಾಟ ಮುಂದುವರಿಸುತ್ತಾರೆ. ಇದು ತುಂಬ ದಿನ ಮುಂದುವರಿದರೆ ಡ್ಯಾಮೇಜು ನಮಗೋ, ಯತ್ನಾಳ್ ಅವರಿಗೋ ಆಗುವುದಿಲ್ಲ. ಬದಲಿಗೆ ಪಕ್ಷಕ್ಕಾಗುತ್ತದೆ” ಅಂತ ಹೇಳಿದ್ದಾರೆ. ಯಾವಾಗ ಯಡಿಯೂರಪ್ಪ ತಮ್ಮ ಟೋನು ಬದಲಿಸದೆ ಮಾತನಾಡಿದರೋ ಆಗ ಅಮಿತ್ ಶಾ ಅವರು, “ಇಲ್ಲ, ಇಲ್ಲ, ಎರಡೂ ಕಡೆಯಿಂದ ಧ್ವನಿ ಬರಬಾರದು. ಹಾಗಾಗ ದಂತೆ ನಾನು ನೋಡಿಕೊಳ್ಳುತ್ತೇನೆ” ಅಂದರಂತೆ.
ಯತಾಳರಿಗೆ ನಡ್ಡಾ ಹೇಳಿದ್ದೇನು? ಯಾವಾಗ ಅಮಿತ್ ಶಾ ಮತ್ತು ಯಡಿಯೂರಪ್ಪ ಮಧ್ಯೆ ಈ ಮಾತುಕತೆ ನಡೆಯಿತೋ, ಇದಾದ ನಂತರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಫೀಲ್ಡಿಗೆ ಎಂಟ್ರಿಯಾಗಿದ್ದಾರೆ. ಹೀಗೆ ಎಂಟ್ರಿ ಆದವರು ಭಿನ್ನಮತೀಯ ನಾಯಕ ಬಸನಗೌಡ ಪಾಟೀಲರಿಗೆ ಫೋನು ಮಾಡಿ, “ಯತ್ನಾಲ್ ಜೀ ನಿಮ್ಮ ಜತೆ ಮಾತನಾಡುವುದಿದೆ. ಹೀಗಾಗಿ ದಿಲ್ಲಿಗೆ ಬಂದುಬಿಡಿ” ಎಂದಿದ್ದಾರೆ. ಆದರೆ ತಮ್ಮನ್ನು ನಡ್ಡಾ ಏಕೆ ದಿಲ್ಲಿಗೆ ಕರೆಯುತ್ತಿzರೆ ಅಂತ ಯತ್ನಾಳ್ ಅವರಿಗೆ ಗೊತ್ತಲ್ಲ? ಹೀಗಾಗಿ ಅವರು, “ದಿಲ್ಲಿಗೆ ಬರುವುದಿದ್ದರೆ ನಾನೊಬ್ಬನೇ ಬರಲು ಸಾಧ್ಯವಿಲ್ಲ ಸರ್.
ಯಾಕೆಂದರೆ ಇವತ್ತು ಯಾವ ಕಾರಣಕ್ಕಾಗಿ ನೀವು ನನ್ನನ್ನು ದಿಲ್ಲಿಗೆ ಕರೆಯುತ್ತಿದ್ದೀರೋ, ಆ ವಿಷಯದ ಬಗ್ಗೆ ನೀವು ಅರವಿಂದ ಲಿಂಬಾವಳಿ,
ರಮೇಶ್ ಜಾರಕಿಹೊಳಿ ಅವರಂಥ ನಾಯಕರ ಜತೆಗೂ ಚರ್ಚಿಸಬೇಕು. ನೀವು ಹೀಗೆ ನಮ್ಮ ನಿಯೋಗದ ಜತೆ ಚರ್ಚಿಸಲು ತಯಾರಿದ್ದರೆ ನಾವೆಲ್ಲ ಒಟ್ಟಿಗೆ ದಿಲ್ಲಿ ಕಡೆ ಬರುತ್ತೇವೆ. ಹೀಗೆ ಬಂದಾಗ ಯಡಿಯೂರಪ್ಪ, ವಿಜಯೇಂದ್ರ ಅವರ ಜತೆ ರಾಜ್ಯ ಬಿಜೆಪಿಯ ಇನ್ನೂ ಕೆಲ ನಾಯಕರ ಬಗ್ಗೆ ಲಿಖಿತ
ರೂಪದ ದೂರು ನೀಡುತ್ತೇವೆ” ಎಂದಿದ್ದಾರೆ.
ಆದರೆ ಯತ್ನಾಳರ ಮಾತು ಕೇಳಿದ ನಡ್ಡಾ ಅವರು, “ಲಿಖಿತ ದೂರು ನೀಡುವುದೇನು ಯತ್ನಾಲ್ ಜೀ. ನಿಮಗೆಲ್ಲ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿಷಯದಲ್ಲಿ ಯಾಕೆ ಸಿಟ್ಟಿದೆ ಅಂತ ನನಗೇ ಗೊತ್ತಲ್ಲ? ಹೀಗಾಗಿ ಆ ಕುರಿತು ನಾವು ನಾವೇ ಚರ್ಚಿಸಿ ಸೆಟ್ಲ್ ಮಾಡೋಣ ಬನ್ನಿ” ಎಂದಿದ್ದಾರೆ. ಆದರೆ ಅದನ್ನೊಪ್ಪದ ಯತ್ನಾಳ್ ಅವರು, “ಅದೆಲ್ಲ ಆಗುವುದಿಲ್ಲ ಸರ್. ಇವತ್ತು ನಮ್ಮ ಪಕ್ಷದ ನಾಯಕರೇ ಕಾಂಗ್ರೆಸ್ ಜತೆ
ಅಂಡರ್‌ಸ್ಟ್ಯಾಂಡಿಂಗ್‌ನಲ್ಲಿರುವಾಗ ನಾವು ಪಕ್ಷ ಸಂಘಟನೆಗಾಗಿ ಹೋರಾಡುವುದು ಹೇಗೆ? ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು ಹೀನಾಯವಾಗಿ ಸೋಲಲು ಏನು ಕಾರಣ ಅಂದು ಕೊಂಡಿದ್ದೀರಿ? ನಮ್ಮ ನಾಯಕರ ಅಂಡರ್ ಸ್ಟ್ಯಾಂಡಿಂಗ್ ಪಾಲಿಟಿಕ್ಸೇ ಕಾರಣ” ಎಂದು ನೇರವಾಗಿ ಹೇಳಿದ್ದಾರೆ.
ಯಾವಾಗ ಅವರು ಈ ಮಾತು ಹೇಳಿದರೋ, ಆಗ ತುಸು ಮೆತ್ತಗಾದ ನಡ್ಡಾ ಅವರು, “ಸರಿ ಯತ್ನಾಲ್ ಜೀ. ಹಾಗೇ ಆಗಲಿ. ನಿಮ್ಮ ಲಿಖಿತ ದೂರೇನಿದೆಯೋ ಅದನ್ನು ತೆಗೆದುಕೊಂಡು ದಿಲ್ಲಿಗೆ ಬನ್ನಿ” ಎಂದಿzರೆ. ಬಿಜೆಪಿ ಮೂಲಗಳ ಪ್ರಕಾರ, ಯತ್ನಾಳ್ ಆಂಡ್ ಗ್ಯಾಂಗು ಈ ವಾರ ದಿಲ್ಲಿಯಾತ್ರೆ ನಡೆಸಲು ಅಣಿಯಾಗುತ್ತಿದೆ.
ಕೆಪಿಸಿಸಿ ಪಟ್ಟ ಯಾರಿಗೂ ಬೇಕಿಲ್ಲ
ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯದಲ್ಲಿ ಕುತೂಹಲಕಾರಿ ಮಾಹಿತಿಗಳು ಹೊರಬರುತ್ತಿವೆ. ಅದರ ಪ್ರಕಾರ, ಈ ಪಟ್ಟಕ್ಕೇರುವ ವಿಷಯದಲ್ಲಿ ತುಂಬ ನಾಯಕರು ಹಿಂದೇಟು ಹೊಡೆಯುತ್ತಿದ್ದಾರೆ. ಕೆಲವೇ ಕಾಲದ ಹಿಂದೆ, ಡಿಕೆಶಿ ನಂತರ ಈ ಪಟ್ಟಕ್ಕೆ ಬರುವವರು ಯಾರು? ಎಂಬ ಪ್ರಶ್ನೆ ಕೇಳಿದಾಗ ಹಲ ನಾಯಕರು ಉತ್ಸಾಹ ತೋರಿಸಿದ್ದರು. ಆದರೆ ಇತ್ತೀಚೆಗೆ ದಿಲ್ಲಿಗೆ ಹೋದ ಡಿಸಿಎಂ ಡಿಕೆಶಿ, “ಇನ್ನು ಕೆಪಿಸಿಸಿ ಅಧ್ಯಕ್ಷ
ಸ್ಥಾನದ ಹೊಣೆಗಾರಿಕೆಯಿಂದ ನನ್ನನ್ನು ಬಿಡುಗಡೆ ಮಾಡಿ” ಅಂತ ವರಿಷ್ಠರಿಗೆ ಹೇಳಿದ್ದರಂತೆ. ಆದರೆ ಯಾವಾಗ ಡಿಕೆಶಿ ಈ ಮಾತು ಹೇಳಿ ಬಂದರೋ, ಇದಾದ ನಂತರ ರಾಜ್ಯ ಕಾಂಗ್ರೆಸ್ ನ ಪ್ರಮುಖ ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ತಾವಿಲ್ಲ ಅಂತ ವರಿಷ್ಠರಿಗೆ ಮೆಸೇಜು ಮುಟ್ಟಿಸುತ್ತಿದ್ದಾರೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಡಿಕೆಶಿ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ನಾಯಕರೊಬ್ಬರು ಬರಬೇಕು ಎಂಬ ಲೆಕ್ಕಾಚಾರ ಇತ್ತು. ಹೀಗೆ ಲಿಂಗಾಯತ ನಾಯಕರನ್ನು ಈ ಹುದ್ದೆಗೆ ತಂದರೆ ಪ್ರತಿಪಕ್ಷ ಬಿಜೆಪಿಗೆ ಕೌಂಟರ್ ಕೊಡಲು ಸಾಧ್ಯವಾಗುತ್ತದೆ ಎಂಬುದು ಈ ಲೆಕ್ಕಾಚಾರದ ಭಾಗ. ಅದರ ಪ್ರಕಾರ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಹೆಸರುಗಳು ರೇಸಿಗೆ ಬಂದಿದ್ದವು. ಆದರೆ ಈ ಹಂತದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಆಸೆ ಈ ಇಬ್ಬರೂ ನಾಯಕರಲ್ಲಿಲ್ಲ. ಕಾರಣ? ಈ ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷರಾದರೆ ಆಗುವ ಪ್ರಯೋಜನವೇನೂ ಇಲ್ಲ. ವಿಧಾನಸಭಾ ಚುನಾವಣೆಗಳು ಹತ್ತಿರವಾದಾಗ ಈ ಪಟ್ಟ ಸಿಕ್ಕರೆ ಮುಖ್ಯಮಂತ್ರಿ ಹುದ್ದೆಗೆ ಟ್ರೈ ಮಾಡಬಹುದೇನೋ ನಿಜ.
ಆದರೆ ಈಗ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದು ಥ್ಯಾಂಕ್‌ಲೆಸ್ ಜಾಬ್ ಆಗಬಹುದು ಎಂಬುದು ಈ ನಾಯಕರ ಆತಂಕ. ಇನ್ನು ಕೆಪಿಸಿಸಿ ಪಟ್ಟದ ರೇಸಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೆಸರು ಕೇಳಿ ಬಂದರೂ, “ಕೆಪಿಸಿಸಿ ಅಧ್ಯಕ್ಷನಾಗಲು ನಾನು ಸಿದ್ಧ.
ಆದರೆ ಈಗಲ್ಲ, ೨೦೨೬ರ ನಂತರ ಈ ಹುದ್ದೆ ಕೊಡುವುದಾರೆ ಓಕೆ ಅಂತ” ಅವರು ಹೇಳಿದ್ದಾರೆ. ಹೀಗೆ ಹಲವು ನಾಯಕರು ಕೆಪಿಸಿಸಿ ಅಧ್ಯಕ್ಷರಾಗಲು ಹಿಂದೇಟು ಹೊಡೆಯುತ್ತಿರುವುದರಿಂದ ಡಿಕೆಶಿ ಬೆನ್ನು ಬಿದ್ದಿರುವ ವರಿಷ್ಠರು, “ಇನ್ನು ಕೆಲ ಕಾಲ ನೀವೇ ಇದ್ದುಬಿಡಿ. ಹೇಗಿದ್ದರೂ ಉಪಚುನಾವಣೆಯಲ್ಲಿ ಪಕ್ಷ ಭರ್ಜರಿ ಯಶಸ್ಸು ಗಳಿಸಿದೆ. ಹೀಗಾಗಿ ಇದೇ ಭರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿ ಬಿಡೋಣ. ಅಲ್ಲಿ ಅಧಿಕಾರ ಹಿಡಿದರೆ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಹೋರಾಡಲು ತಳಮಟ್ಟದ ಯೋಧರು ಸಿಕ್ಕಂತಾಗುತ್ತದೆ” ಎಂದಿದ್ದಾರಂತೆ.
ಸುರ್ಜೇವಾಲ ಬಗ್ಗೆ ಅನುಮಾನ ಏಕೆ?
ರಾಜ್ಯದ ಮದ್ಯ ಮಾರಾಟಗಾರರ ಆಕ್ರೋಶಕ್ಕೆ ಗುರಿಯಾಗಿದ್ದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಈಗ ಸೇಫ್ ಆಗಿದ್ದಾರೆ. ಅಂದ ಹಾಗೆ, ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿದ್ದ ತಿಮ್ಮಾಪುರ್ ಅವರ ಬಗ್ಗೆ ರಾಹುಲ್ ಗಾಂಧಿ ಕಿರಿಕಿರಿ ಮಾಡಿಕೊಂಡಿದ್ದಾರೆ ಅಂತ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಿದ್ದರಾಮಯ್ಯ ಬಳಿ ಹೇಳಿದ್ದರು. ಸ್ವತಃ ರಾಹುಲ್ ಗಾಂಧಿ ಅವರೇ ಕಿರಿಕಿರಿ ಮಾಡಿಕೊಂಡಿದ್ದಾರೆ ಅಂದರೆ ಏನು ಮಾಡುವುದು ಅಂತ ಯೋಚಿಸಿದ್ದ ಸಿದ್ದರಾಮಯ್ಯ ತಮ್ಮ ಸಂಪುಟದ ಸಹೋದ್ಯೋಗಿಗಳ ಬಳಿ ಇದನ್ನು ಹೇಳಿಕೊಂಡಿದ್ದರು. ಹೀಗೆ ಸಿದ್ದರಾಮಯ್ಯ ಅವರು ತಮ್ಮೆದುರು ಈ ವಿಷಯ ಹೇಳಿಕೊಂಡಾಗ, “ಸರ್, ತಿಮ್ಮಾಪುರ್ ಅವರನ್ನು ಸಂಪುಟ ದಿಂದ ಕೈ ಬಿಡುವುದು ಬೇಡ. ಬದಲಿಗೆ ಖಾತೆ ಬದಲಿಸಿದರೆ ಸಾಕು” ಅಂತ ಸಂಪುಟ ಸಹೋದ್ಯೋಗಿಗಳು ಹೇಳಿದ್ದರು.
ಆದರೆ ಕಳೆದ ವಾರ ಸಿದ್ದರಾಮಯ್ಯ ದೆಹಲಿಗೆ ಹೊರಟಾಗ, “ಸರ್, ತಿಮ್ಮಾಪುರ್ ಅವರ ಖಾತೆಯನ್ನೂ ಬದಲಿಸೋದೂ ಬೇಡ. ಅಂದ ಹಾಗೆ ತಿಮ್ಮಾಪುರ್ ವಿಷಯದಲ್ಲಿ ರಾಹುಲ್ ಗಾಂಧಿ ಸಿಟ್ಟು ಮಾಡಿಕೊಂಡಿದ್ದಾರೆ ಅಂತ ಹೇಳಿದವರು ಯಾರು? ಸುರ್ಜೇವಾಲಾ ತಾನೇ? ಆದರೆ ಈ ಕುರಿತು ರಾಹುಲ್ ಗಾಂಧಿ ಅವರೇನೂ ನಿಮ್ಮ ಬಳಿ ಮಾತನಾಡಿಲ್ಲವಲ್ಲ? ಹೇಳಿ ಕೇಳಿ ರಾಹುಲ್ ಗಾಂಧಿ ಅವರು ನಿಮಗೇ ಕ್ಲೋಸು. ಹೀಗಾಗಿ ತಿಮ್ಮಾಪುರ್ ಖಾತೆಯನ್ನು ಬದಲಿಸೋದು ಬೇಡ ಅಂತ ನೀವೇ ಹೇಳಿಬಿಡಿ.
ಯಾಕೆಂದರೆ ಒಂದು ಸಲ ತಿಮ್ಮಾಪುರ್ ಖಾತೆ ಬದಲಿಸಿದರೆ ಪ್ರತಿಪಕ್ಷಗಳಿಗೆ ನಾವೇ ಅಸ್ತ್ರ ಕೊಟ್ಟಂತಾಗುತ್ತದೆ. ತಪ್ಪು ಮಾಡಿಲ್ಲ ಎಂದರೆ
ತಿಮ್ಮಾಪುರ್ ಕೈಯಿಂದ ಅಬಕಾರಿ ಖಾತೆ ಯಾಕೆ ಕಿತ್ತುಕೊಂಡಿರಿ ಅಂತ ಅವು ಕೇಳುತ್ತವೆ. ಹೀಗಾಗಿ ಇದನ್ನೇ ರಾಹುಲ್ ಗಾಂಧಿಯವರಿಗೆ ಹೇಳಿಬಿಡಿ” ಎಂದಿದ್ದಾರೆ.
ಹೀಗೆ ಸಂಪುಟದ ಕೆಲ ಸಹೋದ್ಯೋಗಿಗಳು ನೀಡಿದ ಸಲಹೆಯಂತೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಜತೆ ಮಾತನಾಡಿದಾಗ, “ಆಯ್ತು ಬಿಡಿ ಸಿದ್ರಾಮಯ್ಯಾಜೀ” ಎಂಬ ಉತ್ತರ ಬಂದಿದೆ. ಯಾವಾಗ ರಾಹುಲ್ ಗಾಂಧಿ ಹೀಗೆ ಪ್ರತಿಕ್ರಿಯಿಸಿದರೋ, ಇದಾದ ನಂತರ ಸಿದ್ದರಾಮಯ್ಯ
ಟೀಮಿಗೆ ಸುರ್ಜೇವಾಲ ಅವರ ಬಗ್ಗೆ ಅನುಮಾನ ಬಂದಿದೆ. ಅರ್ಥಾತ್, ತಿಮ್ಮಾಪುರ್ ವಿಷಯದಲ್ಲಿ ರಾಹುಲ್ ಗಾಂಧಿ ಏನೂ ಹೇಳಿರಲಿಲ್ಲ. ಬದಲಿಗೆ ಇಲ್ಲಿನ ನಾಯಕರೊಬ್ಬರು ಸುರ್ಜೇವಾಲ ಮೂಲಕ ಆಟ ಆಡಿದ್ದಾರೆ ಎಂಬುದು ಈ ಅನುಮಾನ.
ಲಾಸ್ಟ್ ಸಿಪ್: ಮೊನ್ನೆ ರಾಜ್ಯ ಸಚಿವ ಸಂಪುಟದ ಹಿರಿಯ ನಾಯಕರೊಬ್ಬರು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದಾರೆ. ತಮ್ಮ ಖಾತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅವರು ವಿವರಿಸಿದ ನಂತರ ರಾಜ್ಯಪಾಲರು ಚಿಂತೆಯ ಮುಖ ಹೊತ್ತು ಮಾತನಾಡಿದರಂತೆ. “ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ನಡೆಸುತ್ತಿರುವ ತನಿಖೆ ಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೊಂದರೆ ಯಾಗಬಹುದು ಅನ್ನಿಸುತ್ತದೆ” ಅಂತ ಅವರು ಹೇಳಿದಾಗ ಈ ಸಚಿವರು “ಅದ್ಹೇಗೆ ಸರ್” ಎಂದಿದ್ದಾರೆ. ಹಾಗೆಯೇ ಮುಂದುವರಿದು, “ಈ ಪ್ರಕರಣದಲ್ಲಿ ಮನಿ ಲಾಂಡರಿಂಗ್ ಏನೂ ನಡೆದಿಲ್ಲ. ಅದೇ ರೀತಿ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇದೆ ಎಂಬುದಕ್ಕೆ ಸಾಕ್ಷ್ಯಗಳೂ ಇಲ್ಲ. ಹೀಗಿದ್ದ ಮೇಲೆ ಇ.ಡಿ. ಏನು ಮಾಡಲು ಸಾಧ್ಯ?” ಅಂತ ಕೇಳಿದ್ದಾರೆ. ಆಗ ಉತ್ತರಿಸಿದ ರಾಜ್ಯಪಾಲರು “ನನಗನ್ನಿಸಿದ್ದನ್ನು ಹೇಳಿದೆ ಅಷ್ಟೇ” ಎಂದರಂತೆ.
ಇದನ್ನೂ ಓದಿ: R T VittalMurthy Column: ಮೂರು ಕ್ಷೇತ್ರಗಳ ಎಫ್‌ಐಆರ್ ಕಾಪಿ