ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಜಪಾನ್ ಒಂದು ವಿಭಿನ್ನ ಮತ್ತು ವಿಶೇಷ ಸಂಸ್ಕೃತಿ ಹೊಂದಿರುವ ದೇಶ. ಅಲ್ಲಿನ ಸಂಸ್ಕೃತಿಯ ಅನನ್ಯತೆಯನ್ನು ಅಮೆರಿಕ ಅಥವಾ ಭಾರತ
ದೊಂದಿಗೆ ಹೋಲಿಸಿದರೆ ಬೇರೆಯ ರೀತಿಯ ಕಾಣಿಸುತ್ತದೆ. ಜಪಾನ್ಗೆ ಭೇಟಿ ನೀಡಿದವರಿಗೆ ಕೆಲವು ಆಶ್ಚರ್ಯಕಾರಿ ಸಂಸ್ಕೃತಿಯ ಆಘಾತಗಳು
ಉಂಟಾಗುವುದರಲ್ಲಿ ಸಂದೇಹವಿಲ್ಲ. ಅಮೆರಿಕ ಅತ್ಯಂತ ಸ್ವಚ್ಛ ದೇಶ. ಹೀಗಿರುವಾಗ ಅಮೆರಿಕನ್ನರಿಗೂ ಜಪಾನಿನ ಸ್ವಚ್ಛತೆ ಅಚ್ಚರಿಯಾಗಿ ಕಾಣುವುದಂತೆ.
ಏಷ್ಯಾದ ದೇಶಗಳ ಪೈಕಿ ಜಪಾನ್ ಸಮಯ ಪಾಲನೆಯಲ್ಲಿ ಅತಿಯೆನಿಸುವಷ್ಟು ಕಟ್ಟುನಿಟ್ಟು. ನೀವು ಜಪಾನಿಯರನ್ನು ಊಟಕ್ಕೆ ಕರೆದರೆ ಕನಿಷ್ಠ ಹತ್ತು ನಿಮಿಷ ಮೊದಲೇ ಆಗಮಿಸಿರುತ್ತಾರೆ. ಮನೆಯ, ಆಫೀಸಿನ ಮಾಡಬೇಕಾದ ಕೆಲಸವನ್ನು ಬೇಗನೆ ಆಗಮಿಸಿ ಮಾಡುತ್ತಾರೆ. ಅವರ ದೃಷ್ಟಿಯಲ್ಲಿ ಸಮಯಪಾಲನೆ ಅಂದರೆ ಮತ್ತೊಬ್ಬರಿಗೆ ನೀಡುವ ಗರಿಷ್ಠ ಗೌರವ.
ಅಪ್ಪಿತಪ್ಪಿ ತಡವಾದರೆ, ಅವರು ತೀವ್ರ ಚಡಪಡಿಸಿ ವೇದನೆಪಡುತ್ತಾರೆ. ಆಗಬಾರದ ಅನಾಹುತ ಆದವರಂತೆ ವರ್ತಿಸುತ್ತಾರೆ. ಆಫೀಸಿನಲ್ಲಿ ಕೆಲಸ ಮುಗಿಸಿ ಹೋಗುವಾಗ ಕನಿಷ್ಠ ಐದು ನಿಮಿಷ ವಾದರೂ ತಡವಾಗಿ ನಿರ್ಗಮಿಸುತ್ತಾರೆ. ಸಮಯ ಪಾಲನೆ ಜಪಾನೀಯರ ರಕ್ತಗುಣ. ತಡವಾಗಿ ಆಗಮಿಸಿದಾಗ ಅವರು ಕುಂಟು ನೆಪ ಹೇಳುವುದಿಲ್ಲ. ತಮ್ಮಿಂದ ಪರಮ ಅಪರಾಧವಾಗಿದೆ ಎಂದು ಧಾರಾಳವಾಗಿ ಕ್ಷಮೆಯಾಚಿಸುತ್ತಾರೆ. ಜಪಾನಿಯರು ಸಮಯದ ಕಾಳಜಿಗೆ ತುಂಬಾ ಮಹತ್ವ ನೀಡುತ್ತಾರೆ. ರೈಲುಗಳು ಹೆಚ್ಚಾಗಿ ಸೆಕುಂಡುಗಳಲ್ಲಷ್ಟೇ ತಡವಾಗಬಹುದು. ಪ್ರಯಾಣಿಕರು ಸರಿಯಾದ ಸಮಯಕ್ಕಿಂತ ಮೊದಲೇ ಆಗಮಿಸುವುದು ಸಂಪ್ರದಾಯ.
ಆದರೆ ನೀವು ಗಡಿಬಿಡಿಯಲ್ಲಿದ್ದರೆ ಅಥವಾ ತಡವಾಗಿ ಆಗಮಿಸಿದರೆ ಅದನ್ನು ಹೀನಾಯವಾಗಿ ನೋಡಬಹುದು. ಜಪಾನ್ನಲ್ಲಿ ಜನರು ಅತ್ಯಂತ ಆದರದಿಂದ ಮಾತನಾಡುವುದನ್ನು ಗಮನಿಸಬಹುದು. ಜಗಳ, ವಾಗ್ವಾದವನ್ನು ಕೇಳುವುದು ಅಪರೂಪ. ಅರಿಗಾತೋ (ಧನ್ಯವಾದಗಳು), ಸುಮಿಮಾಸೆನ್ (ಕ್ಷಮಿಸಿ) ಅಂಥ ಪದಗಳನ್ನು ಪದೇ ಪದೆ ಬಳಕೆ ಮಾಡುವುದನ್ನು ಗಮನಿಸ ಬಹುದು. ಶೀರ್ಷ ವಂದನೆ (ಬೋವಿಂಗ್) ಇಲ್ಲಿ ಸಾಮಾನ್ಯ.
ಎಲ್ಲರೂ ಬಾಗಿ ನಮಸ್ಕರಿಸುವುದನ್ನು ಕಾಣಬಹುದು. ಭಾರತದಲ್ಲಿ ಅಥವಾ ಪಾಶ್ಚಿಮಾತ್ಯ ದೇಶಗಳಲ್ಲಿ ಹಸ್ತಲಾಘವ ಸಾಮಾನ್ಯ. ಆದರೆ
ಜಪಾನಿನಲ್ಲಿ ದೇಹವನ್ನು ಎರಡೆ ರಡು ಸಲ ಬಗ್ಗಿಸಿ ಗೌರವ ಸೂಚಿಸುತ್ತಾರೆ. ವಯಸ್ಸಾದವರೂ ಕಿರಿಯರಿಗೆ ಬಾಗಿ ನಮಸ್ಕಾರಿಸುತ್ತಾರೆ. ಸಾಮೂಹಿಕ ಶಿಸ್ತು ಜಪಾನಿಯರ ಜೀವನಶೈಲಿಯ ಅವಿಭಾಜ್ಯ ಅಂಗ. ಸಮೂಹ ಪ್ರಜ್ಞೆಯನ್ನು ಅಲ್ಲಿ ಒಂದು ಆದರ್ಶವಾಗಿ ಪರಿಗಣಿಸುತ್ತಾರೆ. ಜನರು ತಮ್ಮ ವೈಯಕ್ತಿಕ ಹಿತವನ್ನೂ ಸಮೂಹದ ಪ್ರಾಧಾನ್ಯಕ್ಕಾಗಿ ತ್ಯಜಿಸುತ್ತಾರೆ.
ಒಬ್ಬರಿಗೆ ಆಗದ್ದು ಇಡೀ ಸಮೂಹಕ್ಕೂ ಆಗು ವುದಿಲ್ಲ. ಹಾಗೆ ಇಡೀ ಸಮೂಹಕ್ಕೆ ಆಗದಿರುವುದು ಒಬ್ಬನಿಗೂ ಆಗುವುದಿಲ್ಲ. ಜಪಾನಿನಲ್ಲಿ ಎಲ್ಲೂ ‘ಈ ಜಾಗದಲ್ಲಿ ಸ್ವಚ್ಛತೆ ಕಾಪಾಡಿ’ ಎಂಬ ಬೋರ್ಡ್ ನೋಡಲು ಸಾಧ್ಯ ವಿಲ್ಲ. ಸ್ವಚ್ಛತೆಯನ್ನು ಆ ಜಾಗದಂದೇ ಅಲ್ಲ, ಎಡೆಯೂ ಕಾಪಾಡಬೇಕು ಎಂದು ಅವರು ಭಾವಿಸಿದ್ದಾರೆ. ಹೀಗಾಗಿ ಎಡೆ ಕಸದಬುಟ್ಟಿಗಳನ್ನು ಇಟ್ಟಿಲ್ಲ. ಯಾಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಕಸಕ್ಕಿಂತ ಕಸದ ಬುಟ್ಟಿಗಳೇ ಅಸಹ್ಯವಾಗಿ ಕಾಣಿಸಬಾರದಲ್ಲ. ಇದು ಜಪಾನಿಯರ ಸ್ವಚ್ಛತಾ ಪ್ರಜ್ಞೆಯ ಪ್ರತಿಫಲ.
ಜಪಾನ್ ತಾಂತ್ರಿಕವಾಗಿ ಅದೆಷ್ಟು ಅಭಿವೃದ್ಧಿ ಹೊಂದಿದೆ ಎಂಬುದನ್ನು ಅಲ್ಲಿನ ಸಾರ್ವಜನಿಕ ಶೌಚಾಲಯಗಳಲ್ಲಿಯೇ ನೋಡಬಹುದು. ಜಪಾನಿ ನಲ್ಲಿ ವ್ಯಕ್ತಿಗಳ ಖಾಸಗಿತನಕ್ಕೆ ಹೆಚ್ಚಿನ ಆದ್ಯತೆ ನೀಡ ಲಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಓದಿನಲ್ಲಿ ತಲ್ಲೀನನಾಗಿದ್ದರೆ, ಅವನ ಓದು ಮತ್ತು ಶಾಂತತೆಗೆ ಯಾರೂ ಭಂಗ ತರುವುದಿಲ್ಲ. ಜಪಾನಿನಲ್ಲಿ ಅಪರಾಧ ಪ್ರಮಾಣ ತೀರಾ ಕಡಿಮೆ. ಅಷ್ಟೇ ಅಲ್ಲ, ಜಪಾನ್ ತುಂಬಾ ಸುರಕ್ಷಿತ ರಾಷ್ಟ್ರ. ಜನರು ತಮ್ಮ ಸಾಮಾನುಗಳನ್ನು ಸ್ಟೇಷನ್ನಲ್ಲಿ ಬಿಟ್ಟು ಬಂದರೂ ಯಾರೂ ಎತ್ತಿಕೊಂಡು ಹೋಗುವುದಿಲ್ಲ. ತಮ್ಮದಲ್ಲದ ವಸ್ತುಗಳನ್ನು ಯಾರೂ ಮುಟ್ಟುವುದಿಲ್ಲ. ಇದು ಅವರ ಉತ್ತಮ ನೈತಿಕ ಪ್ರಜ್ಞೆಯನ್ನು ತೋರಿಸುತ್ತದೆ. ಜಪಾನ್ನ ಈ ವಿಶಿಷ್ಟ ಲಕ್ಷಣಗಳು ಪ್ರವಾಸಿಗರಿಗೆ ಒಂದು ಹೊಸ, ವಿಶಿಷ್ಟ ಮತ್ತು ಹಿತವಾದ ಅನುಭವವನ್ನು ನೀಡುತ್ತದೆ. ಇನ್ನು ಕೆಲವರಿಗೆ ಇದು ಸಣ್ಣ ಶಾಕ್ ಕೂಡ ನೀಡಬಹುದು.
ಇದನ್ನೂ ಓದಿ: @vishweshwarbhat