Sunday, 11th May 2025

Bangla Journalist: ಭಾರತದ ಏಜೆಂಟ್‌ ಎಂದು ಆರೋಪಿಸಿ ಬಾಂಗ್ಲಾದೇಶದಲ್ಲಿ ಪತ್ರಕರ್ತೆ ಮೇಲೆ ಅಟ್ಯಾಕ್‌! ವಿಡಿಯೊ ಇದೆ

ಢಾಕಾ: ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಂದೂ ಮುಖಂಡರನ್ನು ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರದ ನಡುವೆಯೇ ಇದೀಗ ಬಾಂಗ್ಲಾದೇಶದ ಪ್ರಮುಖ ಮಹಿಳಾ ಪತ್ರಕರ್ತೆಯೊಬ್ಬರನ್ನು(Bangla Journalist) ದುಷ್ಕರ್ಮಿಗಳ ತಂಡವೊಂದು ಗುಂಪೊಂದು ಅಡ್ಡಗಟ್ಟಿ ಹಲ್ಲೆ ನಡೆಸಲು ಯತ್ನಿಸಿದ್ದು, ಪತ್ರಕರ್ತೆಯನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾರತೀಯ ಏಜೆಂಟ್(Indian Agent) ಮತ್ತು ಶೇಖ್ ಹಸೀನಾ(Sheikh Hasina) ಸರ್ಕಾರದ ಬೆಂಬಲಿಗರು ಎಂದು ಆರೋಪಿಸಿ ಢಾಕಾದಲ್ಲಿ(Dhaka) ಬಾಂಗ್ಲಾದೇಶದ ಟಿವಿ ಪತ್ರಕರ್ತೆ ಮುನ್ನಿ ಸಹಾ ಅವರ ಕಾರನ್ನು ಜನರ ಗುಂಪೊಂದು ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆಯೊಂದು ಶನಿವಾರ(ನ.30) ನಡೆದಿದೆ(Woman Journalist).

ಖ್ಯಾತ ಟಿವಿ ನಿರೂಪಕಿ ಮುನ್ನಿ ಸಹಾ ಅವರು ಮಾಧ್ಯಮ ಕಚೇರಿಯಿಂದ ಹೊರಬರುತ್ತಿದ್ದಾಗ ರಾಜಧಾನಿಯ ಕರ್ವಾನ್ ಬಜಾರ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಜನರ ಗುಂಪೊಂದು ಸಹಾ ಅವರು ಭಾರತೀಯ ಏಜೆಂಟ್ ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಬೆಂಬಲಿಗರು ಎಂದು ಆರೋಪಿಸಿ ಅವರ ಕಾರನ್ನು ಸುತ್ತುವರೆದಿದೆ.

ಸ್ಥಳೀಯ ವರದಿಗಳ ಪ್ರಕಾರ, ಪತ್ರಕರ್ತೆಯ ಕಾರನ್ನು ಜನರ ಗುಂಪು ಅಡ್ಡಗಟ್ಟಿದ್ದು, ಆಕೆಯನ್ನು ನಿಂದಿಸುತ್ತಾ ಆರೋಪಗಳನ್ನು ಹೊರಿಸಿದ್ದಾರೆ. ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಢಾಕಾ ಮೆಟ್ರೋಪಾಲಿಟನ್ ಪೊಲೀಸರು ಘಟನೆ ನಡೆದ ಸ್ಥಳದಿಂದ ಸಹಾ ಅವರನ್ನು ಪೊಲೀಸ್ ಕಾರಿನಲ್ಲಿಯೇ ಕೊಂಡೊಯ್ದಿದ್ದಾರೆ. ಆದರೆ ಸೋಶಿಯಲ್‌ ಮಿಡೀಯಾಗಳಲ್ಲಿ ಢಾಕಾ ಮೆಟ್ರೋಪಾಲಿಟನ್ ಡಿಟೆಕ್ಟಿವ್ ಬ್ರಾಂಚ್ (ಡಿಬಿ) ಕಚೇರಿಗೆ ಕರೆದೊಯ್ಯುವ ಮೊದಲು ಸಹಾ ಅವರನ್ನು ಪೊಲೀಸರು ಬಂಧಿಸಿ ತೇಜಗಾಂವ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂಬ ಊಹಾಪೋಹದ ಪೋಸ್ಟ್‌ ಗಳು ಹರಿದಾಡುತ್ತಿವೆ.

ಪತ್ರಕರ್ತೆಯನ್ನು ಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಅವರಿಗೆ ರಕ್ಷಣೆಯನ್ನು ಒದಗಿಸಲಾಗಿತ್ತು. ಭಾನುವಾರ ಬೆಳಗ್ಗೆ ಕಳುಹಿಸಿ ಕೊಟ್ಟಿದ್ದೇವೆ ಎಂದಿದ್ದಾರೆ. ಜನರು ಏಕಾಏಕಿ ಸುತ್ತುವರೆದು ಘೋಷಣೆ ಕೂಗಿರುವುದರಿಂದ ಅವರಿಗೆ ತೀರಾ ಕಷ್ಟವಾಗಿದೆ. ಗಾಬರಿಗೊಂಡ ಕಾರಣ ಸ್ವಲ್ಪ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಪೊಲೀಸರು ಮುನ್ನಿ ಸಹಾ ಅವರನ್ನು ಬಂಧಿಸಲಿಲ್ಲ. ಆಕೆಯ ಕಚೇರಿಯ ಹೊರಗಿನ ಕವ್ರಾನ್ ಬಜಾರ್‌ನಲ್ಲಿ ಜನರ ಗುಂಪೊಂದು ಇದ್ದಕ್ಕಿದ್ದಂತೆ ಅವರನ್ನು ಸುತ್ತುವರೆದಿದೆ. ಭದ್ರತಾ ಕಾರಣಗಳಿಗಾಗಿ ತೇಜಗಾಂವ್ ಠಾಣಾ ಪೊಲೀಸರು ಅವರನ್ನು ಡಿಬಿ ಕಚೇರಿಗೆ ಕರೆದೊಯ್ದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತ್ರಕರ್ತೆ ಸಹಾ ಈಗಾಗಲೇ ನಾಲ್ಕು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಜಾಮೀನು ಪಡೆಯಲು ಮತ್ತು ಸಮನ್ಸ್‌ಗೆ ಅನುಗುಣವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಅಧಿಕಾರಿ ಹೇಳಿದ್ದಾರೆ. ಸಹಾ ಅವರಿಗೆ ಕಿರುಕುಳ ನೀಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ ಎಂದು ವರದಿಯಾಗಿದೆ. ಈ ಘಟನೆಯು ಶೇಖ್ ಹಸೀನಾ ಸರ್ಕಾರದ ಪತನದ ನಂತರ ಬಾಂಗ್ಲಾದೇಶದಲ್ಲಿ ಪತ್ರಕರ್ತರ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆಯ ಒಂದು ಭಾಗವಾಗಿದೆ. ಬಾಂಗ್ಲಾದಲ್ಲಿ ಹತ್ತಾರು ಪತ್ರಕರ್ತರು ಪಕ್ಷಪಾತದ ಆರೋಪ ಮತ್ತು ಕಾನೂನು ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ಮುಹಮ್ಮದ್ ಯೂನಸ್ ನೇತೃತ್ವದ ಸರ್ಕಾರವು ಹಲವಾರು ಪತ್ರಕರ್ತರ ಮಾನ್ಯತೆಯನ್ನು ರದ್ದುಗೊಳಿಸಿದ್ದು, ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ಬಾಂಗ್ಲಾದ ಪ್ರಮುಖ ಪತ್ರಿಕೆಗಳಾದ ಪ್ರಥಮ್ ಅಲೋ ಮತ್ತು ಡೈಲಿ ಸ್ಟಾರ್ ಕಚೇರಿಗಳ ಹೊರಗೆ ಪ್ರತಿಭಟನೆಗಳು ನಡೆದಿದ್ದವು.

ಈ ಸುದ್ದಿಯನ್ನೂ ಓದಿ:ISKCON: ʻಬಾಂಗ್ಲಾದೇಶದಲ್ಲಿ ಇಸ್ಕಾನ್‌ ಅನ್ನು ಬ್ಯಾನ್‌ ಮಾಡಿ, ಇಲ್ಲ ಭಕ್ತರನ್ನು ಕೊಲ್ಲುತ್ತೇವೆʼ-ಇಸ್ಲಾಂ ಸಂಘಟನೆಗಳಿಂದ ಎಚ್ಚರಿಕೆ!