Saturday, 10th May 2025

Arvind Kejriwal: ಪಾದಯಾತ್ರೆ ವೇಳೆ ಕೇಜ್ರಿವಾಲ್ ಮೇಲೆ ಲಿಕ್ವಿಡ್‌ ದಾಳಿ…. ಜೀವಂತ ದಹನಕ್ಕೆ ಬಿಜೆಪಿ ಸಂಚು ಎಂದು ಆಪ್‌ ಕಿಡಿ

Delhi CM Atishi

ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್(Arvind Kejriwal) ಮೇಲೆ ವ್ಯಕ್ತಿಯೊಬ್ಬರು ದ್ರವವನ್ನು ಎಸೆಯುವ ಮೂಲಕ ದಾಳಿಗೆ ಯತ್ನಿಸಿದ ಘಟನೆ ಶನಿವಾರ ಸಂಜೆ ನಡೆದಿದೆ. ದೆಹಲಿಯ ಗ್ರೇಟರ್ ಕೈಲಾಶ್‌ನ ಸಾವಿತ್ರಿ ನಗರದಲ್ಲಿ ಶನಿವಾರ ಸಂಜೆ ನಡೆದ ಪಾದಯಾತ್ರೆಯಲ್ಲಿ ಕೇಜ್ರಿವಾರನ್ನು ಜೀವಂತವಾಗಿ ಸುಡುವ ಪ್ರಯತ್ನ ನಡೆದಿದೆ ಎಂದು ಎಎಪಿ ಪಕ್ಷ ಆರೋಪಿಸಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶನಿವಾರ ಅರವಿಂದ್ ಕೇಜ್ರಿವಾಲ್ ಅವರ ಪಾದಯಾತ್ರೆಯಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದ ಲಿಕ್ವಿಡ್ ದಾಳಿ ನಡೆಸಿದ್ದಾರೆ. ದಾಳಿಕೋರ ಅರವಿಂದ್ ಕೇಜ್ರಿವಾಲ್ ಬಳಿಗೆ ಬಂದು ಕೈಕುಲುಕುವ ನೆಪದಲ್ಲಿ ಕೇಜ್ರಿವಾಲ್ ಮೇಲೆ ಲಿಕ್ವಿಡ್ ಎಸೆದಿದ್ದಾನೆ. ಲಿಕ್ವಿಡನ್ನು ಸ್ಪಿರಿಟ್‌ ಎಂದು ಊಹಿಸಲಾಗಿದ್ದು, ಆರೋಪಿ ದ್ರವ ಎಸೆದ ನಂತರ ಬೆಂಕಿಕಡ್ಡಿ ಮೂಲಕ ಬೆಂಕಿ ಹೊತ್ತಿಸಲು ಪ್ರಯತ್ನಿಸಿದ್ದ. ತಕ್ಷಣ ಎಚ್ಚೆತ್ತ ಭದ್ರತಾಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.

ಈ ಕುರಿತು ಇದೀಗ ಈ ದಾಳಿಯನ್ನು ಖಂಡಿಸಿ ದೆಹಲಿ ಮುಖ್ಯಮಂತ್ರಿ ಅತಿಶಿ (Delhi CM Atishi) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ದಾಳಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ (Amit Shah) ವಿರುದ್ಧ ವಾಗ್ದಾಳಿ ನಡೆಸಿದರು. ದಾಳಿಕೋರರು ಬಿಜೆಪಿಯೊಂದಿಗೆ ನಂಟು ಹೊಂದಿದ್ದಾರೆ ಮತ್ತು ದಾಳಿಯ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದ್ದಾರೆ ಎಂದು ಎಎಪಿ ಆರೋಪಿಸಿದೆ. ದಾಳಿ ಮಾಡಿದ ಆರೋಪಿ ಬಿಜೆಪಿಯ ಸದಸ್ಯ ಎಂದು ಹೇಳುವ ಮೂಲಕ ಅತಿಶಿ ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಯು ಬಿಜೆಪಿ ಸದಸ್ಯತ್ವ ಹೊಂದಿರುವ ಗುರುತಿನ ಚೀಟಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ತಮ್ಮ ಮೇಲಿನ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಅರವಿಂದ್‌ ಕೇಜ್ರಿವಾಲ್‌ ಭದ್ರತಾ ವಿಷಯದ ಬಗ್ಗೆ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೃಹ ಸಚಿವರು ರಾಷ್ಟ್ರ ರಾಜಧಾನಿಯಲ್ಲಿ ಅಪರಾಧಗಳನ್ನು ನಿಲ್ಲಿಸಬೇಕು, ವಿರೋಧ ಪಕ್ಷದ ನಾಯಕರನಲ್ಲ ಎಂದು ಕುಟುಕಿದರು. ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ “ಅಮಿತ್ ಶಾ ಜೀ, ದೆಹಲಿಯಲ್ಲಾಗುತ್ತಿರುವ ಅಪರಾಧಗಳನ್ನು ನಿಲ್ಲಿಸಿ, ನೀವು ನನ್ನನ್ನು ತಡೆದರೆ ದೆಹಲಿಯಲ್ಲಿ ಅಪರಾಧಗಳು ಕಡಿಮೆಯಾಗುತ್ತವೆಯೇ? ದೆಹಲಿಯಲ್ಲಿ ನಡೆಯುತ್ತಿರುವ ಓಪನ್ ಶೂಟ್-ಔಟ್‌ಗಳು ನಿಲ್ಲುತ್ತವೆಯೆ? ದೆಹಲಿಯ ಮಹಿಳೆಯರು ಸುರಕ್ಷಿತರಾಗುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : PM degree row: ಪ್ರಧಾನಿ ಮೋದಿ ಪದವಿ ವಿವಾದ; ಸುಪ್ರೀಂನಿಂದ ಮಹತ್ವದ ಆದೇಶ-ಕೇಜ್ರಿವಾಲ್‌ಗೆ ಭಾರೀ ಹಿನ್ನಡೆ