Monday, 19th May 2025

Champions Trophy: 3 ಷರತ್ತುಗಳನ್ನು ಮುಂದಿಟ್ಟು ಹೈಬ್ರಿಡ್‌ ಮಾಡೆಲ್‌ಗೆ ಒಪ್ಪಿದ ಪಾಕಿಸ್ತಾನ! ವರದಿ

Pakistan Cricket Board ready to accept Hybrid Model, but places this condition before ICC

ನವದೆಹಲಿ: ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy) ಟೂರ್ನಿಯ ಆಯೋಜನೆಗೆ ಸಂಬಂಧಿಸಿದಂತೆ ತಿಕ್ಕಾಟ ಮುಂದುವರಿದಿದೆ. ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವನ್ನು ಪಾಕಿಸ್ತಾನಕ್ಕೆನೀಡಲಾಗಿದೆ. ಅಂದಹಾಗೆ ಇದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದಿಂದಾಗಿ ಟೂರ್ನಿಯ ಅಂತಿಮ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಈ ಸಂಬಂಧ ನ. 29ರಂದು ಸಭೆ ನಡೆಯಬೇಕಿದ್ದರೂ ಮುಂದೂಡಲಾಗಿತ್ತು. ಇದೀಗ ವರದಿಯೊಂದರ ಪ್ರಕಾರ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ನಡೆದ ಐಸಿಸಿ ಸಭೆಯಲ್ಲಿ ಪಾಕಿಸ್ತಾನ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ನಡೆಸಲು ಒಪ್ಪಿಗೆ ಸೂಚಿಸಿದೆ ಹಾಗೂ ಐಸಿಸಿಗೆ ಪಿಸಿಬಿ ಮೂರು ದೊಡ್ಡ ಷರತ್ತುಗಳನ್ನು ಹಾಕಿದೆ.

ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ತೆರಳದ ಕಾರಣ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವಾದ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಟೀಮ್‌ ಇಂಡಿಯಾ, ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಅಥವಾ ಹೈಬ್ರಿಡ್ ಮಾದರಿಯಲ್ಲಿ ನಡೆಸುವಂತೆ ಬಿಸಿಸಿಐ ಆಗ್ರಹಿಸಿದೆ. ಆದರೆ ಬಿಸಿಸಿಐನ ಈ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿದ್ಧವಿಲ್ಲ. ಆದರೆ, ಇದೀಗ ಒಲ್ಲದ ಮನಸಿನಲ್ಲಿ ಪಿಸಿಬಿ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

Champions Trophy: ಚಾಂಪಿಯನ್ಸ್​ ಟ್ರೋಫಿ ಆತಿಥ್ಯ ಕೈ ತಪ್ಪಿದರೆ ಪಾಕ್‌ಗೆ 548 ಕೋಟಿ ರೂ. ನಷ್ಟ

ಐಸಿಸಿಗೆ ಪಾಕಿಸ್ತಾನ ಹಾಕಿದ ಮೂರು ಷರತ್ತುಗಳು ಯಾವುವು?

ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೂರು ದೊಡ್ಡ ಷರತ್ತುಗಳನ್ನು ಹಾಕಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಂಡಿದೆ, ಆದರೆ ಅದಕ್ಕೆ ಕೆಲವು ಷರತ್ತುಗಳನ್ನು ವಿಧಿಸಿದೆ.

ಮೊದಲನೇ ಷರತ್ತು

ಭಾರತ ಕ್ರಿಕೆಟ್ ತಂಡ ತನ್ನ ಎಲ್ಲಾ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ದುಬೈನಲ್ಲಿ ಆಡಬೇಕೆಂದು ಪಿಸಿಬಿ ಆಗ್ರಹಿಸಿದೆ. ಟೀಮ್‌ ಇಂಡಿಯಾ ದುಬೈಗೆ ತಲುಪಿದರೆ ಗುಂಪು ಹಂತ, ಸೆಮಿಫೈನಲ್ ಮತ್ತು ಫೈನಲ್ ಅನ್ನು ಒಳಗೊಂಡಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ನಾಕೌಟ್ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.

Champions Trophy Schedule: ಇನ್ನೆರಡು ದಿನದಲ್ಲಿ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಪ್ರಕಟ

ಎರಡನೇ ಷರತ್ತು

ಲಾಹೋರ್ ಅನ್ನು ತನ್ನ ಎರಡನೇ ಬ್ಯಾಕಪ್ ಆತಿಥ್ಯ ಸ್ಥಳವನ್ನಾಗಿ ಪಾಕಿಸ್ತಾನ ಇಟ್ಟುಕೊಂಡಿದೆ. ಭಾರತ ತಂಡವು ಗುಂಪು ಹಂತದಿಂದ ಹೊರಗಿದ್ದು ನಾಕೌಟ್ ಸುತ್ತಿಗೆ ತಲುಪಲು ಸಾಧ್ಯವಾಗದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಯಬೇಕೆಂಬ ಎರಡನೇ ಷರತ್ತನ್ನು ಪಿಸಿಬಿ ಐಸಿಸಿಗೆ ಹಾಕಿದೆ.

ಮೂರನೇ ಷರತ್ತು

ಇನ್ನು ಪಾಕಿಸ್ತಾನದ ಮೂರನೇ ಷರತ್ತು ಕಠಿಣವಾಗಿದೆ ಎಂದು ಹೇಳಲಾಗುತ್ತಿದೆ. ಭವಿಷ್ಯದಲ್ಲಿ ಭಾರತದಲ್ಲಿ ನಡೆಯುವ ಐಸಿಸಿ ಟೂರ್ನಿಗಳಲ್ಲಿ ಆಡಲು ಪಾಕಿಸ್ತಾನ ತಂಡ ಭಾಗವಹಿಸುವುದಿಲ್ಲ. ಇದರ ಬದಲಿಗೆ ಪಾಕಿಸ್ತಾನ ತಂಡಕ್ಕೂ ಕೂಡ ಹೈಬ್ರಿಡ್‌ ಮಾಡೆಲ್‌ ಅನ್ನು ಅಳವಡಿಸಿಕೊಳ್ಳಬೇಕೆಂದು ಐಸಿಸಿಗೆ ಷರತ್ತು ಹಾಕಿದೆ. ಈ ಎಲ್ಲಾ ಷರತ್ತುಗಳನ್ನು ಐಸಿಸಿ ಒಪ್ಪಿಕೊಂಡರೆ ಮಾತ್ರ ಪಾಕಿಸ್ತಾನ, ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಹೈಬ್ರಿಡ್‌ ಮಾದರಲ್ಲಿ ಆಯೋಜಿಸಲಿದೆ.