ಗುಬ್ಬಿ: ಧಾರ್ಮಿಕ ಕ್ಷೇತ್ರ ಹೊರತಾಗಿ ಸಾಮಾಜಿಕ ಕಳಕಳಿ ಹೊತ್ತ ಧರ್ಮಸ್ಥಳ ಸಂಸ್ಥೆ ಸಮಾಜದಲ್ಲಿ ನೊಂದವರ ಮನೆಗೆ ಬೆಳಕಾಗಿ ಗುರುತಿಸಿ ಕೊಂಡಿದೆ. ಮಹಿಳಾ ಸಬಲೀಕರಣ ಆರ್ಥಿಕ ಸ್ವಾವಲಂಬಿ ಬದುಕು ಕಟ್ಟಿಕೊಟ್ಟು ಜೊತೆಗೆ ಅನಾರೋಗ್ಯ ಪೀಡಿತರಿಗೆ ಆಸರೆಯಾಗಿ ನಿಂತಿದೆ. ಅವಶ್ಯ ಸಲಕರಣೆ ಒದಗಿಸಿ ವಿಕಲ ಚೇತನರಿಗೆ ಬೆನ್ನೆಲುಬಾಗಿ ಈಗ ತೀವ್ರ ಅನಾರೋಗ್ಯಕ್ಕೆ ತುತ್ತಾದ ಹಾಗೂ ವಯೋವೃದ್ಧರಿಗೆ ವಾಟರ್ ಬೆಡ್ ನೀಡುತ್ತಿರುವುದು ಶ್ಲಾಘನೀಯ ಎಂದು ಪಪಂ ಸದಸ್ಯ ಹಾಗೂ ಜನಜಾಗೃತಿ ವೇದಿಕೆಯ ಸದಸ್ಯ ಜಿ.ಆರ್.ಶಿವಕುಮಾರ್ ತಿಳಿಸಿದರು.
ಪಟ್ಟಣದ ಹೊರ ವಲಯದ ರಾಯವಾರ ಗ್ರಾಮದ ಸೈಯದ್ ಮಹಮದ್ ಎಂಬುವವರಿಗೆ ವಾಟರ್ ಬೆಡ್ ವಿತರಿಸಿ ಮಾತನಾಡಿ ಬಡವರ ಪಾಲಿಗೆ ಆರ್ಥಿಕ ಸದೃಢತೆ ಸಾಧಿಸಲು ಸಹಕಾರ ನೀಡಿದ ಸಂಸ್ಥೆ ಸರ್ಕಾರ ಮಾತ್ರ ಮಾಡಬಹುದಾದ ಹಲವು ಯೋಜನೆ ಸಂಸ್ಥೆ ಮೂಲಕ ಗ್ರಾಮೀಣ ಜನರಿಗೆ ನೀಡುತ್ತಿದೆ ಎಂದರು.
ಸಿಪಿಐ ಗೋಪಿನಾಥ್ ಮಾತನಾಡಿ ರಾಜ್ಯದಲ್ಲಿ ಮಹಿಳಾ ಸಂಘ ರಚಿಸಿ ಸ್ವಯಂ ಉದ್ಯೋಗ ಕಲ್ಪಿಸಿಕೊಟ್ಟ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಳ್ಳಿಗಳಲ್ಲಿ ಮನೆ ಮಾತಾಗಿದೆ. ಶ್ರೀ ವೀರೇಂದ್ರ ಹೆಗಡೆ ಅವರ ದೂರಾಲೋಚನೆ ಇಡೀ ರಾಜ್ಯದ ಅಭಿವೃದ್ಧಿಗೆ ಪೂರಕ ಸಹಕಾರಿಯಾಗಿದೆ. ಈ ಜೊತೆಗೆ ಸಾಮಾಜಿಕ ಸೇವೆಯಲ್ಲಿ ನಿರತವಾಗಿದ್ದು ಮೆಚ್ಚುವಂತಹದ್ದು ಎಂದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಸಾದಿಕ್ ಅಹ್ಮದ್, ಒಕ್ಕೂಟದ ಪದಾಧಿಕಾರಿ ನೀಲಮ್ಮ, ಮೇಲ್ವಿಚಾರಕಿ ದೀಪಿಕಾ, ಸೇವಾ ಪ್ರತಿನಿಧಿ ಚಾರಿತ್ರ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಹಾಜರಿದ್ದರು.
ಇದನ್ನೂ ಓದಿ: #TumkurCongress