ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಚತುರ್ದಾನ ಪರಂಪರೆಗೆ ಅನಾದಿ ಕಾಲದಿಂದಲೂ ಹೆಸರುವಾಸಿಯಾಗಿದೆ. ಇದನ್ನು ಹೊರತುಪಡಿಸಿ ಪದ್ಮವಿಭೂಷಣ ಡಾ. ಡಿ ವಿರೇಂದ್ರ ಹೆಗ್ಗಡೆಯವರು (Dr DVH) ಧರ್ಮಾಧಿಕಾರಿಗಳಾಗಿ ಶ್ರೀ ಕ್ಷೇತ್ರದ ಆಡಳಿತ ಜವಾಬ್ದಾರಿ ವಹಿಸಿಕೊಂಡ ಬಳಿಕ ಶ್ರೀ ಕ್ಷೇತ್ರದ ವತಿಯಿಂದ ಇನ್ನೂ ಹತ್ತು ಹಲವು ಸಾಮಾಜಿಕ ಕಾರ್ಯಗಳು ರಾಜ್ಯಾದ್ಯಂತ ಮಾತ್ರವಲ್ಲದೇ ದೇಶದ ವಿವಿಧ ಕಡೆಗಳಲ್ಲಿ ನಡೆಯುತ್ತಿದೆ.
ಇದೇ ರೀತಿಯಲ್ಲಿ ಡಾ. ಹೆಗ್ಗಡೆಯವರು ಪ್ರತೀವರ್ಷ ತಮ್ಮ ಜನ್ಮದಿನದ ಸಂದರ್ಭದಲ್ಲಿ ಹೊಸ ಸಾಮಾಜಿಕ ಯೋಜನೆಯೊಂದನ್ನು ಘೋಷಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆದರೆ ಈ ಬಾರಿ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನದ ವೇದಿಕೆಯಲ್ಲಿ ಡಾ ಡಿ ವೀರೆಂದ್ರ ಹೆಗ್ಗಡೆಯವರು ನೂತನ ಆರೋಗ್ಯ ಯೋಜನೆಯೊಂದನ್ನು ಘೋಷಿಸಿದ್ದಾರೆ.
ಅದರಂತೆ, 2025ರ ಜ.01ರಿಂದ ಉಜಿರೆಯಲ್ಲಿರುವ ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಗೊಳ್ಳಲಿದೆ. ಇದರಿಂದಾಗಿ ಉಜಿರೆ ಸುತ್ತಮುತ್ತಲಿನ ನೂರಾರು ಡಯಾಲಿಸಿಸ್ ರೋಗಿಗಳಿಗೆ ಈ ಯೋಜನೆಯ ಪ್ರಯೋಜನ ಲಭಿಸಲಿದೆ.