Sunday, 11th May 2025

Bangladesh Unrest: ಬಾಂಗ್ಲಾದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ; ಹಿಂದೂಗಳ ಮೇಲಿನ ದಾಳಿಗೆ ತಿರುಗೇಟು ನೀಡಿದ ಕೋಲ್ಕತಾ ಆಸ್ಪತ್ರೆ

Bangladesh Unrest

ಕೋಲ್ಕತಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಮುಂದುವರಿದೆ. ಜತೆಗೆ ಹಿಂದೂ ದೇವಸ್ಥಾನಗಳ ಮೇಲೆ ಆಕ್ರಮಣ ನಡೆಯುತ್ತಿದೆ. ಇದನ್ನು ಖಂಡಿಸಿರುವ ಕೋಲ್ಕತಾದ ಜೆ.ಎನ್‌.ರಾಯ್‌ ಆಸ್ಪತ್ರೆ (Kolkata’s JN Ray Hospital) ಇನ್ನು ಮುಂದೆ ಬಾಂಗ್ಲಾ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಘೋಷಿಸಿ, ತಿರುಗೇಟು ನೀಡಿದೆ (Bangladesh Unrest).

ಕೋಲ್ಕತಾದ ಮಾಣಿಕ್ತಾಲಾದಲ್ಲಿರುವ ಜೆ.ಎನ್‌.ಆಸ್ಪತ್ರೆ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಭಾರತವನ್ನು ಅವಮಾನಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ. ಆಸ್ಪತ್ರೆಯ ಅಧಿಕಾರಿ ಸುಭ್ರಾಂಶು ಭಕ್ತ ಮಾತನಾಡಿ, ʼʼಇಂದಿನಿಂದ ಅನಿರ್ದಿಷ್ಟ ಸಮಯದವರೆಗೆ ಬಾಂಗ್ಲಾದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸುತ್ತಿದ್ದೇವೆ. ಈ ಬಗ್ಗೆ ನಮ್ಮ ಸಿಬ್ಬಂದಿಗೆ ಅಧಿಸೂಚನೆಯನ್ನು ನೀಡಿದ್ದೇನೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ಖಂಡಿಸಿ ಈ ನಿರ್ಧಾರಕ್ಕೆ ಬರಲಾಗಿದೆʼʼ ಎಂದು ಅವರು ವಿವರಿಸಿದ್ದಾರೆ.

ʼʼಭಾರತದ ತ್ರಿವರ್ಣ ಧ್ವಜವನ್ನೂ ಬಾಂಗ್ಲಾದೇಶದಲ್ಲ ಅವಮಾನಿಸಲಾಗಿದೆ. ಈ ಎಲ್ಲ ಕಾರಣಗಳಿಂದ ನಾವು ಬಾಂಗ್ಲಾದೇಶಿಯರಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ. ಇತರ ಆಸ್ಪತ್ರೆಗಳು ಕೂಡ ಈ ಕ್ರಮವನ್ನು ಅನುಸರಿಸುತ್ತದೆ ಎಂದು ಹೇಳಿದ್ದಾರೆ.

ಛಟ್ಟೋಗ್ರಾಮದಲ್ಲಿ ಹಿಂದೂ ದೇಗುಲಗಳ ಮೇಲೆ ದಾಳಿ

ಚಟ್ಟೋಗ್ರಾಮ್‌ನಲ್ಲಿ ಶುಕ್ರವಾರ (ನ. 29) ಘೋಷಣೆ ಕೂಗುತ್ತ ಬಂದ ಗುಂಪೊಂದು 3 ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ ಬಳಿಕ ಈ ನಿರ್ಧಾರ ಹೊರಬಿದ್ದಿದೆ. ಬಂದರು ನಗರದ ಹರೀಶ್ ಚಂದ್ರ ಮುನ್ಸೆಫ್ ಲೇನ್‌ನಲ್ಲಿ ಮಧ್ಯಾಹ್ನ 2:30ರ ಸುಮಾರಿಗೆ ದಾಳಿ ನಡೆದಿದ್ದು, ಶಾಂತೇಶ್ವರಿ ಮಾತ್ರಿ ದೇವಸ್ಥಾನ, ಸಮೀಪದ ಶೋನಿ ದೇವಸ್ಥಾನ ಮತ್ತು ಶಾಂತನೇಶ್ವರಿ ಕಾಳಿ ದೇವಸ್ಥಾನವನ್ನು ಗುರಿಯಾಗಿರಿಸಿಕೊಂಡು ಉದ್ರಿಕ್ತರ ಗುಂಪು ಆಕ್ರಮಣ ನಡೆಸಿದೆ.

ಈ ಗುಂಪು ದೇವಸ್ಥಾನಗಳ ಮೇಲೆ ಇಟ್ಟಿಗೆ, ಕಲ್ಲುಗಳನ್ನು ಎಸೆದಿದೆ ಎಂದು ವರದಿಯೊಂದು ತಿಳಿಸಿದೆ. ಕೋಟ್ವಾಲಿ ಪೊಲೀಸ್‌ ಠಾಣೆಯ ಅಬ್ದುಲ್‌ ಕರೀಂ ಈ ಘಟನೆಯನ್ನು ದೃಢಪಡಿಸಿದ್ದಾರೆ. ದಾಳಿಯಿಂದ ದೇಗುಲಕ್ಕೆ ಚಿಕ್ಕ-ಪುಟ್ಟ ಹಾನಿಯಾಗಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಎಂದಿದ್ದಾರೆ.

ದೇಶದ್ರೋಹದ ಆರೋಪ ಹೊರಿಸಿ ಇಸ್ಕಾನ್‌ನ ಮಾಜಿ ಸದಸ್ಯ, ಹಿಂದೂ ಮುಖಂಡ ಚಿನ್ಮಯ್‌ ಕೃಷ್ಣ ದಾಸ್‌ ಅವರನ್ನು ಬಂಧಿಸಲಾಗಿದ್ದು, ಅದಾದ ಬಳಿಕ ಅಲ್ಪ ಸಂಖ್ಯಾತರ ಮೇಲೆ ಮತ್ತೆ ದಾಳಿ ನಡೆಯುತ್ತಿದೆ. ಚಿನ್ಮಯ್‌ ಕೃಷ್ಣ ದಾಸ್‌ ಅವರಿಗೆ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಹಿಂದೂಗಳು ಢಾಕಾ, ಚಟ್ಟೋಗ್ರಾಮ್‌ ಮತ್ತು ಬಾಂಗ್ಲಾದೇಸದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಎಸ್‌.ಜೈಶಂಕರ್‌ ಹೇಳಿದ್ದೇನು?

ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಭಾರತ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಆಗ್ರಹಿಸಿದ್ದಾರೆ. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ. ಈತನ್ಮಧ್ಯೆ ಕೋಲ್ಕತಾದಲ್ಲಿನ ತನ್ನ ಉಪ ಹೈಕಮಿಷನ್ ಹೊರಗೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಬಾಂಗ್ಲಾದೇಶ ಕಳವಳ ವ್ಯಕ್ತಪಡಿಸಿದೆ ಮತ್ತು ತನ್ನ ರಾಜತಾಂತ್ರಿಕ ಅಧಿಕಾರಿಗಳಿಗೆ ಸುರಕ್ಷತೆ ಒದಗಿಸುವಂತೆ ಕೋರಿದೆ.

ಈ ಸುದ್ದಿಯನ್ನೂ ಓದಿ: Bangladesh Unrest: ಬಾಂಗ್ಲಾದಲ್ಲಿ ನಿಲ್ಲದ ಹಿಂಸಾಚಾರ; 3 ಹಿಂದೂ ದೇವಾಲಯಗಳ ಮೇಲೆ ದಾಳಿ