Thursday, 15th May 2025

JP Nadda: ಭಾರತದಲ್ಲಿನ ವೈದ್ಯರ ಜನಸಂಖ್ಯೆ ಅನುಪಾತವು WHO ಮಾನದಂಡಕ್ಕಿಂತಲೂ ಉತ್ತಮ; ಸಚಿವ ಜೆ.ಪಿ.ನಡ್ಡಾ ಹೇಳಿಕೆ

ನವದೆಹಲಿ: ಭಾರತದಲ್ಲಿನ ವೈದ್ಯರ ಜನಸಂಖ್ಯೆಯ ಅನುಪಾತವು 1:811ರಷ್ಟಿದೆ. ಇದು ಡಬ್ಲ್ಯುಎಚ್‌ಒ (World Health Organization) ಮಾನದಂಡವಾದ 1:1000ಕ್ಕಿಂತಲೂ ಉತ್ತಮವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ (JP Nadda) ಶುಕ್ರವಾರ (ನ. 29) ಲೋಕಸಭೆಯಲ್ಲಿ ತಿಳಿಸಿದರು (JP Nadda).

“ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ನೀಡಿರುವ ಮಾಹಿತಿಯ ಪ್ರಕಾರ, 2024ರ ನವೆಂಬರ್‌ನಲ್ಲಿ ಆಯಾ ರಾಜ್ಯಗಳ ವೈದ್ಯಕೀಯ ಮಂಡಳಿ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ 13,86,145 ಅಲೋಪತಿ ವೈದ್ಯರು ನೋಂದಾಯಿಸಿಕೊಂಡಿದ್ದಾರೆ” ಎಂದು ನಡ್ಡಾ ತಿಳಿಸಿದರು.

“ನೋಂದಾಯಿತ ಅಲೋಪತಿ (Allopathy) ವೈದ್ಯರು ಮತ್ತು ಸುಮಾರು 6.14 ಲಕ್ಷ ಆಯುಷ್ (Ayush) ವೈದ್ಯರ ಶೇ. 80ರಷ್ಟು ಲಭ್ಯತೆಯನ್ನು ತೆಗೆದುಕೊಂಡರೆ, ದೇಶದಲ್ಲಿನ ವೈದ್ಯರ ಜನಸಂಖ್ಯೆಯ ಅನುಪಾತವು ಸುಮಾರು 1:811 ಆಗಿದೆ. ಇದು WHO ಮಾನದಂಡದ 1:1000ಕ್ಕಿಂತಲೂ ಉತ್ತಮವಾಗಿದೆ” ಎಂದರು.

“ನಮ್ಮ ಸರ್ಕಾರವು ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ ಎಂಬಿಬಿಎಸ್ (MBBS) ಸೀಟುಗಳನ್ನೂ ಹೆಚ್ಚಿಸಿದೆ. 2014ರ ಮೊದಲು 51,348ರಷ್ಟಿದ್ದ ಎಂಬಿಬಿಎಸ್ ಸೀಟುಗಳು ಈಗ 1,18,137ಕ್ಕೆ ಅಂದರೆ ಶೇ. 130ರಷ್ಟು ಹೆಚ್ಚಳವಾಗಿದೆ. ಈ ಹಿಂದೆ 31,185 ಪಿಜಿ ಸೀಟುಗಳಿದ್ದವು. ಈಗ 73,157ಕ್ಕೆ ಸೀಟುಗಳಲ್ಲಿದ್ದು ಶೇ. 135ರಷ್ಟು ಹೆಚ್ಚಳವಾಗಿದೆ. ಅಷ್ಟೇ ಅಲ್ಲದೆ ಈ ಹಿಂದಿನ ಸರ್ಕಾರವಿದ್ದಾಗ 387 ವೈದ್ಯಕೀಯ ಕಾಲೇಜುಗಳು ಇದ್ದವು. ಈಗ ವೈದ್ಯಕೀಯ ಕಾಲೇಜುಗಳ ಸಂಖ್ಯೆ 780ಕ್ಕೆ ಏರಿಕೆಯಾಗಿದೆ. ಅಂದರೆ ಕಳೆದ ಹತ್ತು ವರ್ಷಗಳಲ್ಲಿ 393 ಕಾಲೇಜುಗಳನ್ನು ನಿರ್ಮಿಸಲಾಗಿದ್ದು, ಶೇ. 102ರಷ್ಟು ಏರಿಕೆಯಾಗಿದೆ” ಎಂದು ಸಚಿವರು ತಿಳಿಸಿದರು.

ಮುಂದುವರೆದು ಮಾತನಾಡಿದ ಜೆ.ಪಿ.ನಡ್ಡಾ “ದೇಶದಲ್ಲಿ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರನ್ನು ಹೆಚ್ಚಿಸಲು ನಮ್ಮ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾ/ರೆಫರಲ್ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದ್ದು, ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಕೇಂದ್ರ ಪ್ರಾಯೋಜಿತ ಯೋಜನೆ ಅಡಿಯಲ್ಲಿ 131 ಹೊಸ ವೈದ್ಯಕೀಯ ಕಾಲೇಜುಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ರಾಜಸ್ಥಾನದಲ್ಲಿ 23 ವೈದ್ಯಕೀಯ ಕಾಲೇಜುಗಳನ್ನು ಒಳಗೊಂಡಿರುವ 157 ಅನುಮೋದಿತ ವೈದ್ಯಕೀಯ ಕಾಲೇಜುಗಳಿವೆ” ಎಂದರು.

“ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (PMSSY) ಅಡಿಯಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ಗಳನ್ನು ನಿರ್ಮಿಸುವ ಮೂಲಕ, ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸಿ ಈವರೆಗೆ ಒಟ್ಟು 75 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅದರಲ್ಲಿ 69 ಯೋಜನೆಗಳು ಪೂರ್ಣಗೊಂಡಿವೆ” ಎಂದು ಸಚಿವ ನಡ್ಡಾ ಮಾಹಿತಿ ನೀಡಿದರು.

“ಹೊಸ ಎಐಐಎಂಎಸ್ ಸ್ಥಾಪನೆಗೆ ಕೇಂದ್ರ ವಲಯದ ಯೋಜನೆಯಡಿ 22 ಏಮ್ಸ್‌ಗಳನ್ನು ಅನುಮೋದಿಸಲಾಗಿದ್ದು, ಇವುಗಳಲ್ಲಿ ಪದವಿಪೂರ್ವ ಕೋರ್ಸ್‌ಗಳು ಪ್ರಾರಂಭವಾಗಿವೆ.ಅದೂ ಅಲ್ಲದೆ, ಅಧ್ಯಾಪಕರ ಕೊರತೆಯನ್ನು ನೀಗಿಸಲು ಅಧ್ಯಾಪಕರ ನೇಮಕಾತಿಗೆ DNB ಅರ್ಹತೆಯನ್ನು ಗುರುತಿಸಲಾಗಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಕರು/ಡೀನ್/ಪ್ರಾಂಶುಪಾಲರು/ನಿರ್ದೇಶಕರ ಹುದ್ದೆಗಳ ನೇಮಕಾತಿ/ವಿಸ್ತರಣೆ/ಮರು ಉದ್ಯೋಗಕ್ಕಾಗಿ ವಯೋಮಿತಿಯನ್ನು 70 ವರ್ಷಗಳವರೆಗೆ ಹೆಚ್ಚಿಸಲಾಗುವುದು” ಎಂದು ಅವರು ಹೇಳಿದರು. 

ಈ ಸುದ್ದಿಯನ್ನೂ ಓದಿ:Lalit Modi: ಕಾನೂನಿಗೆ ಹೆದರಿ ಹೋಗಿದ್ದಲ್ಲ; ಬದಲಾಗಿ…; ದೇಶ ತೊರೆದ ಕಾರಣ ತಿಳಿಸಿದ ಐಪಿಎಲ್​ ಮಾಜಿ ಅಧ್ಯಕ್ಷ ಲಲಿತ್‌ ಮೋದಿ