Saturday, 10th May 2025

Dharmasthala Laksha Deepotsava 2024: ಸರ್ಕಾರ ಮಾಡದ ಕೆಲಸವನ್ನು ಡಾ. ಹೆಗ್ಗಡೆಯವರು ಮಾಡುತ್ತಿದ್ದಾರೆ: ಸಚಿವ ಡಾ.ಜಿ. ಪರಮೇಶ್ವರ್

ಬೆಳ್ತಂಗಡಿ: ಶ್ರಿ ಕ್ಷೇತ್ರ ಧರ್ಮಸ್ಥಳದಲ್ಲಿ ನ. 26ರಿಂದ ನ. 30ರವರೆಗೆ ನಡೆಯುವ‌ ಲಕ್ಷದೀಪೋತ್ಸವದ (Dharmasthala Laksha Deepotsava 2024) ಪ್ರಯುಕ್ತ ನ. 29ರಂದು ಇಲ್ಲಿನ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 92ನೇ ಸರ್ವದರ್ಮ ಸಮ್ಮೇಳನವನ್ನು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ (G. Parameshwara) ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ʼʼಸರ್ವ ಧರ್ಮದ ಮಾತು ಪ್ರಸ್ತುತ ಸಮಾಜಕ್ಕೆ ಅಗತ್ಯವಿದೆ. ಚುನಾಯಿತ ಸರ್ಕಾರ ಮಾಡದ ಕೆಲಸವನ್ನು ಡಾ. ಹೆಗ್ಗಡೆಯವರು ಮಾಡುತ್ತಿದ್ದಾರೆ. ದೇಶದಲ್ಲಿ ಸಂವಿಧಾನ ಬರುವ ಮೊದಲೇ ಸರ್ವಧರ್ಮದ ಸಂದೇಶ ಸಾರುವ ಕಾರ್ಯ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದುಬಂದಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಡಾ. ಹೆಗ್ಗಡೆ ಅವರು ಮಾಡುತ್ತಿದ್ದು, ರಾಜ್ಯ ಸಭಾ ಸದಸ್ಯರಾಗುವ ಮೂಲಕ ಹೆಗ್ಗಡೆಯವರ ಸೇವೆ, ಚಿಂತನೆ ರಾಷ್ಟವ್ಯಾಪ್ತಿಯಾಗಿದೆʼʼ ಎಂದು ಹೇಳಿದರು.

ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆ (Dr D Veerendra Heggade) ಅವರು, ʼʼಸರ್ವಧರ್ಮ ಸಮನ್ವಯದ ಕ್ಷೇತ್ರವೆಂಬ ಮನ್ನಣೆ ಪಡೆದ ಶ್ರೀ ಕ್ಷೇತ್ರದಲ್ಲಿ ನಮ್ಮ ಹಿರಿಯರಾದ ಡಿ. ಮಂಜಯ್ಯ ಹೆಗ್ಗಡೆಯವರು 1933ರಲ್ಲಿ ಪ್ರಾರಂಭಿಸಿದ ಈ ಸರ್ವಧರ್ಮ ಸಮ್ಮೇಳನವನ್ನು ಡಿ. ರತ್ನಮ್ಮವರ್ಮ ಹೆಗ್ಗಡೆ ಮುಂದುವರಿಸಿಕೊಂಡು ಬಂದರು. ಇದೀಗ ಈ ಸಮ್ಮೇಳನವು 91 ವಸಂತಗಳನ್ನು ಪೂರೈಸಿದೆ. ನಾನು ಪೀಠವನ್ನು ಅಲಂಕರಿಸಿದ ದಿನದಿಂದ ವಿವಿಧ ಧರ್ಮಗಳ ಮಹತ್ ಸಂದೇಶಗಳನ್ನು, ಸದ್ವಿಚಾರಗಳನ್ನು, ನಮ್ಮ ಪರಂಪರೆಯನ್ನು ಪಾಲಿಸುತ್ತಾ, ಯಾವುದೇ ಸಂಕುಚಿತ ಭಾವನೆಗಳಿಗೆ ನಮ್ಮನ್ನು ನಿರ್ಬಂಧಿಸಿಕೊಳ್ಳದೆ ಲೌಕಿಕ ಹಾಗೂ ಪಾರಮಾರ್ಥಿಕ ಎರಡು ದಿಕ್ಕುಗಳಲ್ಲಿ ಕ್ಷೇತ್ರವನ್ನು ಮುನ್ನಡೆಸಿದ್ದೇವೆʼʼ ಎಂದು ಹೇಳಿದರು.

ʼʼಸರ್ವಧರ್ಮ ಸಮನ್ವಯದ ಈ ಮಹೋನ್ನತ ವೇದಿಕೆಯಿಂದ ಅನೇಕ ಹಿರಿಯ ವಿದ್ವಾಂಸರು ಮಾನವೀಯ ಆದರ್ಶ ಪಥದಲ್ಲಿ ಮುನ್ನಡೆಯಬೇಕೆಂಬ ಸಂದೇಶವನ್ನು ನೀಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳವೆಂದರೆ ವಿವಿಧ ಜಾತಿ, ಮತ, ಪಂಥಗಳ ಸಂಕೀರ್ಣ ಎಲ್ಲೆಯನ್ನು ಮೀರಿ ವಿಶಾಲ ವಿಶ್ವದ ಸರ್ವ ಜನಾಂಗಗಳ ಹಿತವನ್ನು ಬಯಸುವ ಮಾನವ ಧರ್ಮವೆ ಶ್ರೇಷ್ಠವೆಂದು ಬಗೆದು ಅನ್ನದಾನ, ವಿದ್ಯಾದಾನ, ಆಭಯದಾನ, ಜೌಷಧ ದಾನಗಳ ಮೂಲಕ ಸಾಮಾಜಿಕ ಅಭಯ ಅನುಗ್ರಹಿಸುವ ಪುಣ್ಯ ಕ್ಷೇತ್ರವೆಂದು ಪ್ರಸಿದ್ದಿಯಾಗಿದೆʼʼ ಎಂದು ಡಾ. ಹೆಗ್ಗಡೆಯವರು ಇದೇ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: Eknath Shinde: ಮಹಾರಾಷ್ಟ್ರ ಸಿಎಂ ಯಾರಾಗ್ತಾರೆ ಎನ್ನುವ ಕುತೂಹಲಕ್ಕೆ ಶೀಘ್ರದಲ್ಲೇ ಉತ್ತರ; ಇಂದೇ ಅಂತಿಮ ನಿರ್ಧಾರ ಪ್ರಕಟಿಸ್ತಾರ ಶಿಂಧೆ?

ʼʼಜಗತ್ತಿನಲ್ಲಿನ ನೀರು, ಗಾಳಿ, ಭೂಮಿ ಪರಮೇಶ್ವರನದೇ. ಪ್ರತಿಯೊಬ್ಬರು ಜ್ನಾನವಂತರಾಗಬೇಕು ಆಗ ಅಶಾಂತಿಯನ್ನು ಹೊಗಲಾಡಿಸಲು ಸಾಧ್ಯ. ಸಮಾಜದಲ್ಲಿ ಕುಟುಂಬ ವಿಭಜಿಸುವ ಧರ್ಮ ಈ ನೆಲದಲ್ಲಿರಲು ಸಾದ್ಯವಿಲ್ಲ. ಸಮಾಜ ಒಗ್ಗೂಡಿಸುವ ದರ್ಮ ಮಾತ್ರ ಸಮಾಜದಲ್ಲಿರಬೇಕುʼʼ ಎಂದು ಜಯೇಂದ್ರ ಪುರಿ ಸ್ವಾಮೀಜಿ ಹೇಳಿದರು.

ಹೇಮಾವತಿ ವಿ. ಹೆಗ್ಗಡೆ, ಡಿ ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು. ರುಡ್ ಸೆಟ್ ನಿರ್ದೇಶಕ ಅಜಯ್ ವಂದಿಸಿ, ಪ್ರಾಧ್ಯಾಪಕ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.