ಪಾವಗಡ: ಬಿಸಿಯೂಟ ಸೇವಿಸಿದ ಬಳಿಕ 40 ಮಕ್ಕಳು ಅಸ್ವಸ್ಥಗೊಂಡಿರುವುದು ತಾಲೂಕಿನ ಕೋಣನಕುರಿಕೆ ಗ್ರಾಮದ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದಿದೆ. ತಾಲೂಕಿನ (Pavagada News) ಕೋಣನಕುರಿಕೆ ಗ್ರಾಮದ ಪ್ರಾಥಮಿಕ ಪಾಠಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ನಂತರ ಚಿಕ್ಕಿ, ಮೊಟ್ಟೆಯನ್ನು ಸೇವಿಸಿದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ.
ಬಿಸಿಯೂಟ ಸೇವಿಸಿ ನಂತರ ಮೊದಲಿಗೆ ಮೂರ್ನಾಲ್ಕು ಮಕ್ಕಳಿಗೆ ವಾಂತಿ ಮಾಡಿಕೊಂಡಿದ್ದು ತಕ್ಷಣ ಎಚ್ಚೆತ್ತುಕೊಂಡ ಶಿಕ್ಷಕರು ಮತ್ತು ಗ್ರಾಮಸ್ಥರು ಕೂಡಲೇ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿ 40 ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಯ ತಿಳಿದ ತಹಸೀಲ್ದಾರ್ ವರದರಾಜು, ಕಾರ್ಯನಿರ್ವಾಹಣಾಧಿಕಾರಿ ಜಾನಕಿರಾಮ್, ಶಿಕ್ಷಣಾಧಿಕಾರಿಗಳಾದ ಇಂದ್ರಾಣಮ್ಮ, ಅಕ್ಷರ ದಾಸೋಹ ನಿರ್ದೇಶಕರು, ಮತ್ತು ಬಿ.ಆರ್. ಸಿ ಗಳು ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ, ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ತಹಸೀಲ್ದಾರ್ ವರದರಾಜು ಅವರು, ಮಕ್ಕಳು ಯಾವುದೇ ರೀತಿಯಲ್ಲಿ ಭಯಪಡುವ ಅಗತ್ಯವಿಲ್ಲ, ಊಟ ಸೇವಿಸಿದ ನಂತರ ಕೆಲ ಮಕ್ಕಳು ವಾಂತಿ ಮಾಡಿಕೊಂಡಿದ್ದು ಅದನ್ನು ಕಂಡು ಉಳಿದ ಮಕ್ಕಳು ಆತಂಕಗೊಂಡಿದ್ದಾರೆ. ಎಲ್ಲಾ ಮಕ್ಕಳನ್ನು ವೈದ್ಯರು ಪರೀಕ್ಷಿಸಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.
ಆರೋಗ್ಯ ವೈದ್ಯಾಧಿಕಾರಿಗಳಾದ ಬಾಬು ಅವರು ಮಾತನಾಡಿ, ಕೋಣನಕುರಿಕೆ ಶಿಕ್ಷಕರು ನಮಗೆ ಕರೆ ಮಾಡಿ ನಮ್ಮ ಶಾಲೆಯಲ್ಲಿ ಮಕ್ಕಳು ಅಸ್ವಸ್ಥಗೊಂಡಿದ್ದಾರೆ, ಅವರನ್ನು ಕರೆ ತರುತ್ತಿದ್ದೇವೆ ಎಂದು ಹೇಳಿದ ಕೂಡಲೇ ಎಚ್ಚೆತ್ತುಕೊಂಡು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೆವು. ಇಬ್ಬರು ಮಕ್ಕಳಿಗೆ ಮಾತ್ರ ವಾಂತಿ ಆಗಿದೆ, ಬೇರೆಲ್ಲ ಮಕ್ಕಳು ಚೆನ್ನಾಗಿದ್ದಾರೆ. ಅವರಿಗೆ ಮುಂಜಾಗ್ರತೆಯಾಗಿ ಚಿಕಿತ್ಸೆ ನೀಡಲಾಗಿದೆ, ಯಾವುದೇ ತೊಂದರೆ ಇರುವುದಿಲ್ಲ ಎಂದು ಹೇಳಿದ್ದಾರೆ.
ಶಾಲೆಗೆ ಹೋಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ
ಪಾವಗಡ: ಕಾಣೆಯಾಗಿದ್ದ ಆಂಧ್ರ ಮೂಲದ ವಿದ್ಯಾರ್ಥಿಯೊಬ್ಬ, ಪಾವಗಡ ವ್ಯಾಪ್ತಿಯಲ್ಲಿ ಶವವಾಗಿ ಪತ್ತೆಯಾಗಿರುವುದು ಕಂಡುಬಂದಿದೆ. ಹತ್ಯೆ ಆರೋಪಿಯನ್ನು ಕೇವಲ 8 ತಾಸಿನಲ್ಲಿ ಆಂಧ್ರದ ಮಡಕಶಿರಾ ಪೊಲೀಸ್ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಪಾವಗಡ ಗಡಿ ಪ್ರಾಂತದ ಅಂದಲ್ಗುಂದಿ ಗ್ರಾಮದ ವಿದ್ಯಾರ್ಥಿ ಚೇತನ್ ಮೃತ. ವೆಂಕಟಸ್ವಾಮಿ, ಪುಷ್ಪ ಎಂಬುವವರ ಪುತ್ರನಾದ ಚೇತನ್ 8ನೇ ತರಗತಿ ಓದುತ್ತಿದ್ದ ಎಂದು ತಿಳಿದುಬಂದಿದೆ.
ಸರ್ಕಾರಿ ಶಾಲೆ ಹೋಗಿದ್ದ ವಿದ್ಯಾರ್ಥಿ, ಬೆಳಗ್ಗೆ 12:30 ರಿಂದ ಕಾಣೆಯಾಗಿದ್ದ. ವಿದ್ಯಾರ್ಥಿಯನ್ನು ಸೋದರ ಮಾವ ಅಶೋಕ್ ಎಂಬಾತ ಕಿಡ್ನ್ಯಾಪ್ ಮಾಡಿ, ತದನಂತರ ಪಾವಗಡ ವ್ಯಾಪ್ತಿಯ ಜಮೀನಿನಲ್ಲಿ ಕರೆತಂದು ಬ್ಲೇಡ್‌ನಿಂದ ಕುತ್ತಿಗೆ ಕೊಯ್ದು ಕೊಂದಿದ್ದ.
ಪಾವಗಡ ಪಟ್ಟಣದ ವ್ಯಾಪ್ತಿಯಲ್ಲಿ ಕೊಲೆಯಾಗಿದ್ದರಿಂದ ಆಂಧ್ರ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಮಡಗಿ ಎಸ್‌ಪಿ ರತ್ನ, ಪೆನುಕೊಂಡ ಡಿವೈಎಸ್ಪಿ ವೆಂಕಟೇಶ್ವರಲು, ಮಡಕಶಿರಾ ಸಿಪಿಐ ರಾಗಿ ರಾಮಯ್ಯ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.