ದೇಹ (Health Tips) ಆರೋಗ್ಯವಾಗಿರಬೇಕು, ಸದೃಢವಾಗಿರಬೇಕು, ಹುರಿಗಟ್ಟಿದಂತಿರಬೇಕು, ಬಳುಕುವಂತಿರಬೇಕು… ಎಂದು ಬಯಸಿದರೆ ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲೇಬೇಕು. ಕ್ಯಾಲರಿಗಳಿಗೆ ಯದ್ವಾತದ್ವಾ ಕತ್ತರಿ ಹಾಕಿ ಅಥವಾ ಇಷ್ಟಬಂದಂತೆ ಆಹಾರ ಕ್ರಮ ರೂಢಿಸಿಕೊಂಡರೆ ಅಪಾಯ ಮೈಮೇಲೆ ಎಳೆದುಕೊಂಡಂತೆ.
ರೋಗ, ಸೋಂಕು, ಗಾಯಗಳು ಬೆನ್ನು ಬಿಡುವುದೇ ಇಲ್ಲ. ಹಾಗಾಗಬಾರದು ಎಂದಿದ್ದರೆ ಆಹಾರದಲ್ಲಿ ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್, ಕಾರ್ಬ್, ನಾರು, ಆರೋಗ್ಯಕರ ಕೊಬ್ಬು, ವಿಟಮಿನ್ ಮತ್ತು ಖನಿಜಗಳು ಬೇಕೇಬೇಕು.
ನಮ್ಮ ದೇಹವೊಂದು ಯಂತ್ರವಿದ್ದಂತೆ ಎಂದು ಭಾವಿಸಿದರೆ ಈ ಯಂತ್ರವು ಸರಾಗವಾಗಿ ಕಾರ್ಯನಿರ್ವಹಿಸಲು ಸರಿಯಾದ ಇಂಧನ ಬೇಕು, ಸರಿಯಾದ ಕಾಲಕ್ಕೆ ಬೇಕು ಮತ್ತು ಸರಿಯಾದ ಪ್ರಮಾಣದಲ್ಲಿ ಬೇಕು. ಹಾಗಾದರೆ ವ್ಯಾಯಾಮದ ಉತ್ಸಾಹಿಗಳು, ದೇಹ ಹುರಿಗಟ್ಟಿಸುವವರು, ತೂಕ ಇಳಿಸಲೆಂದು ಬೆವರಿಳಿಸುವವರೆಲ್ಲಾ ಯಾವ ವಿಷಯಗಳ ಬಗ್ಗೆ ಗಮನ ಹರಿಸಬೇಕು?
ಮೊದಲು ತಿನ್ನಿ!
ಇದೆಂಥಾ ಸಲಹೆ ಎಂದು ಹುಬ್ಬೇರಿಸಬೇಡಿ. ಆದರೆ ಇಂಧನ ಇಲ್ಲದೆಯೇ ಗಾಡಿ ಓಡಿಸಲು ಸಾಧ್ಯವೇ? ಹಾಗಾಗಿ ತೂಕ ಇಳಿಸುವ ಉದ್ದೇಶದಿಂದಲೇ ಬೆವರಿಳಿಸುತ್ತಿದ್ದರೂ ವರ್ಕೌಟ್‌ಗಿಂತ ಒಂದು ತಾಸು ಮೊದಲು ಸಂಕೀರ್ಣ ಪಿಷ್ಟಗಳಾದ ಎನರ್ಜಿ ಬಾರ್, ಓಟ್‌ಮೀಲ್, ಮಿಲೆಟ್ ಇತ್ಯಾದಿಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಬಹುದು. ಅದಿಲ್ಲದಿದ್ದರೆ 15- 20 ನಿಮಿಷ ಮೊದಲು ಸಣ್ಣದೊಂದು ಬಾಳೆಹಣ್ಣು ತಿನ್ನಬಹುದು.
ಇವೆಲ್ಲಾ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಸಹಜ ರೀತಿಯಲ್ಲಿ ಒದಗಿಸುತ್ತದೆ. ಇದು ವಾಕಿಂಗ್ ಅಥವಾ ಯಾವುದೇ ಮಾಮೂಲಿ ವ್ಯಾಯಾಮ ಮಾಡುವವರಿಗೆ ಅನ್ವಯಿಸುವುದಿಲ್ಲ. ದಿನವಿಡೀ ತಿಂದ ಆಹಾರವೇ ಇದಕ್ಕೆ ಶಕ್ತಿ ಕೊಡುತ್ತದೆ. ತಾಸುಗಟ್ಟಲೆ ದಣಿದು, ಬಕೆಟ್‌ಗಟ್ಟಲೆ ಬೆವರಿಳಿಸುವ ವೀರರಿಗೆ ಇದು ಬೇಕು.
ಪಿಷ್ಟ ಕಷ್ಟವಲ್ಲ
ಈ ಚುಟುಕು ಡಯೆಟ್‌ಗಳ ಭರಾಟೆಯಲ್ಲಿ ಪಿಷ್ಟಕ್ಕೆ ಖಳನಾಯಕ ಪಟ್ಟವನ್ನು ಕಟ್ಟಲಾಗಿದೆ. ವಾಸ್ತವದಲ್ಲಿ ದೇಹಕ್ಕೆ ಅಗತ್ಯವಾದ ಶೇ. 60ರಷ್ಟು ಶಕ್ತಿ ಸಂಚಯನವಾಗುವುದೇ ಪಿಷ್ಟದಿಂದ. ಹಾಗಾದರೆ ಪಿಷ್ಟವಿಲ್ಲದಿದ್ದರೆ ಶರೀರಕ್ಕೆ ಶಕ್ತಿಯೆಲ್ಲಿಂದ ಬರಬೇಕು?
ಉದಾಹರಣೆಗೆ, ದಿನಕ್ಕೆ ಒಂದು ತಾಸು ಓಡುವವರು ಅಥವಾ ಜಿಮ್ ಮಾಡುವವರು ನೀವಾದರೆ ನಿಮ್ಮ ತೂಕದ ಪ್ರತಿ ಕೆ.ಜಿ.ಗೆ 6- 8 ಗ್ರಾಂ ಪಿಷ್ಟ ದೇಹಕ್ಕೆ ಬೇಕು. ಅಂದರೆ 60 ಕೆ.ಜಿ. ತೂಕದ ವ್ಯಕ್ತಿ ದಿನಕ್ಕೊಂದು ತಾಸು ಬೆವರಿಳಿಸಿದರೆ ಅಂದಾಜು 400 ಗ್ರಾಂ ಪಿಷ್ಟ ಅಗತ್ಯವಾಗಿ ಬೇಕು. ಆದರೊಂದು, ಬೆಳಗ್ಗೆದ್ದು ಸಕ್ಕರೆಮಾರಿಯಂಥ ಸೀರಿಯಲ್‌ಗಳು, ಬಿಳಿ ಬ್ರೆಡ್‌ಗಳು ಮುಂತಾದ ಸರಳ, ಸಂಸ್ಕರಿತ ಕಾರ್ಬ್ ಅಗತ್ಯವಿಲ್ಲ. ಬದಲಿಗೆ, ಸಂಕೀರ್ಣ ಪಿಷ್ಟಗಳಿರುವ ಇಡೀ ಧಾನ್ಯ, ರಾಗಿ, ಓಟ್, ತೌಡು ಸೇರಿದ ಗೋಧಿ, ಅಕ್ಕಿ, ನಾರುಭರಿತ ಹಣ್ಣು- ತರಕಾರಿಗಳು ನಮಗೆ ಬೇಕು.

ಪ್ರೊಟೀನ್ ಬಿಟ್ಟೆರೆ ಕೆಟ್ಟೆ
ಶರೀರವನ್ನು ಸೂಕ್ಷ್ಮಾತಿಸೂಕ್ಷ್ಮ ಹಂತದಿಂದ ಹಿಡಿದು ಒಟ್ಟಾರೆಯಾಗಿ ರಿಪೇರಿ ಮಾಡುವ ಕೆಲಸ ಪ್ರೊಟೀನ್‌ಗಳದ್ದು. ಹಾಗಾಗಿ ವರ್ಕೌಟ್ ಅನಂತರ ಒಳ್ಳೆಯ ಪ್ರೊಟೀನ್ ಮತ್ತು ಕಾರ್ಬ್ ಸೇರಿದಂಥ ತಿಂಡಿ ಬೇಕು. ಡೈರಿ ಉತ್ಪನ್ನಗಳು, ಮೀನು, ಕಡಿಮೆ ಕೊಬ್ಬಿನ ಮಾಂಸಗಳು, ಒಣಹಣ್ಣು ಮತ್ತು ಬೀಜಗಳು, ಮೊಟ್ಟೆ, ಕಾಳುಗಳು, ಪನೀರ್, ತೋಫು ಮುಂತಾದವುಗಳನ್ನು ಪ್ರೊಟೀನ್ ಮೂಲಗಳಾಗಿ ಉಪಯೋಗಿಸಬಹುದು.

ಕೊಬ್ಬಿರಬೇಕು
ದೇಹಕ್ಕೆ ಆರೋಗ್ಯಕರ ಕೊಬ್ಬು ಬೇಕು. ಇದರರ್ಥ ಕರಿದ ತಿಂಡಿಗಳು, ಸಂಸ್ಕರಿತ ಕೊಬ್ಬುಗಳೆಲ್ಲ. ಮೆಲ್ಲಲು ಯೋಗ್ಯ ಎಂದು ಭಾವಿಸಬೇಡಿ. ವಿಟಮಿನ್ ಎ, ಡಿ, ಇ, ಕೆ ಹೊಂದಿರುವ ಆಹಾರಗಳು, ಬೆಣ್ಣೆಹಣ್ಣು, ಬೀಜಗಳು, ಕೊಬ್ಬರಿ ಸೇರಿದಂತೆ ನಾನಾ ರೀತಿಯ ಎಣ್ಣೆ ಬೀಜಗಳು ಮತ್ತು ಅವುಗಳ ಎಣ್ಣೆ, ಅಲ್ಪ ಪ್ರಮಾಣದಲ್ಲಿ ತುಪ್ಪ- ಇಂಥವು ದೇಹಕ್ಕೆ ಅಗತ್ಯ.
Pregnancy Tips: ಗರ್ಭಾವಸ್ಥೆಯಲ್ಲಿ ಜನನೇಂದ್ರಿಯವನ್ನು ಶುಚಿಯಾಗಿಡಲು ಇಲ್ಲಿದೆ ನೈಸರ್ಗಿಕ ಪರಿಹಾರ
ನಂತರ ಏನು?
ತೂಕ ಇಳಿಸುವ ಉದ್ದೇಶಕ್ಕೇ ಬೆವರು ಹರಿಸುವವರು ನೀವಾದರೂ ವ್ಯಾಯಾಮದ 30 ನಿಮಿಷಗಳ ಒಳಗೆ ಕಡಿಮೆ ಕೊಬ್ಬಿರುವ ಒಂದು ಪ್ರೊಟೀನ್ ಸ್ಮೂದಿಯಂಥದ್ದು ಬೇಕು. ತನು ಕರಗಬೇಕೇ ಹೊರತು ಅಪೌಷ್ಟಿಕತೆಯಿಂದ ಬಳಲಬಾರದು. ಇನ್ನು ಅಥ್ಲೀಟ್‌ಗಳಿಗೆ ಇದು ಕಡ್ಡಾಯವಾದ ಸಂಗತಿ. ಸಿಕ್ಕಾಪಟ್ಟೆ ಶಕ್ತಿ ವ್ಯಯಿಸಿದ ಮೇಲೆ ಅದನ್ನು ಪ್ರೊಟೀನ್ ಮತ್ತು ಸಂಕೀರ್ಣ ಪಿಷ್ಟಗಳ ಮೂಲಕ ಮರಳಿ ನೀಡದಿದ್ದರೆ ದೇಹ ರಿಪೇರಿಯಾಗುವುದು ಕಷ್ಟ.