Sunday, 11th May 2025

Salman Khan: ಹೈಟೆಕ್‌ ಡ್ರೋನ್‌ಗಳು… ಕಮಾಂಡೋಗಳು…ಸಲ್ಮಾನ್‌ ಖಾನ್‌ ಭದ್ರತೆ ಮತ್ತಷ್ಟು ಹೆಚ್ಚಳ!

Salman Khan

ಮುಂಬೈ: ಬಾಲಿವುಡ್ ನಟ ಸಲ್ಮಾನ್‍ ಖಾನ್‍ ಅವರು ಸಾಕಷ್ಟು ಜೀವ ಬೆದರಿಕೆಯ ಕರೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಅವರ ಆಪ್ತ ಸ್ನೇಹಿತ ಮತ್ತು NCP ನಾಯಕ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆ ಕೂಡ ನಡೆದಿತ್ತು. ಆದರೂ  ನಟ ಸಲ್ಮಾನ್ ಖಾನ್(Salman Khan) ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಹೆಚ್ಚುವರಿ ಭದ್ರತಾ ಕ್ರಮಗಳೊಂದಿಗೆ ಬಿಗಿ ಭದ್ರತೆಯ ನಡುವೆ ಅವರನ್ನು ಮತದಾನ ಕೇಂದ್ರಕ್ಕೆ ಕರೆತರಲಾಗಿತ್ತು.ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಾಪರಾಜೋ ವೈರಲ್ ಭಯಾನಿ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್‍ನಲ್ಲಿ ಈ ವಿಡಿಯೊವನ್ನು  ಪೋಸ್ಟ್ ಮಾಡಿದ್ದು, ಇದರಲ್ಲಿ  ಖಾನ್ ಅವರ ಭದ್ರತೆಯನ್ನು ಹೈಟೆಕ್ ಡ್ರೋನ್‍ಗಳು ಮತ್ತು ಕಮಾಂಡೊಗಳೊಂದಿಗೆ ಹೆಚ್ಚಿಸಲಾಗಿದೆ. ಬಾಂದ್ರಾ ಪಶ್ಚಿಮದ ಮೌಂಟ್ ಮೇರಿ ಕಾನ್ವೆಂಟ್ ಹೈಸ್ಕೂಲ್‍ನ ಮತಗಟ್ಟೆಗೆ ಆಗಮಿಸಿದ ಸಲ್ಮಾನ್ ಅವರನ್ನು ಭದ್ರತಾ ಸಿಬ್ಬಂದಿ ಮತ್ತು ಬೆಂಗಾವಲು ಪಡೆ ಸುತ್ತುವರೆದಿದ್ದಾರೆ. ಇದು ಹೆಚ್ಚುತ್ತಿರುವ ಕಳವಳಗಳ ನಡುವೆ ನಟನ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ನಟ ಸಲ್ಮಾನ್ ಅವರಿಗೆ ಅನೇಕ ಕೊಲೆ ಬೆದರಿಕೆಗಳು ಬಂದಿವೆ. ಹಾಗಾಗಿ ಅವರ ಸುತ್ತಲೂ ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಡಿದೆ. ಸಲ್ಮಾನ್ ಅವರು ಮತಗಟ್ಟೆಯಿಂದ ನಿರ್ಗಮಿಸುವ ಹಲವಾರು ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿವೆ. ಇದರಲ್ಲಿ ಅವರು ಬೂದು ಬಣ್ಣದ ಟೀ ಶರ್ಟ್ ಮತ್ತು ಜೀನ್ಸ್ ಮತ್ತು ಕಪ್ಪು ಟೋಪಿ ಮತ್ತು ಸನ್ ಗ್ಲಾಸ್ ಧರಿಸಿದ್ದರು. ಖಾನ್ ಅವರು ಮತಗಟ್ಟೆಯಲ್ಲಿ ಬಂದಾಗ ಜನರಿಗೆ ಕೈ ಬೀಸಿ,  ಪ್ಲೈನ್ ಕಿಸ್ ನೀಡಿದ್ದಾರೆ. ಇದಕ್ಕೂ ಮುನ್ನ ಸಲ್ಮಾನ್ ಖಾನ್ ಅವರ ಪೋಷಕರಾದ ಸಲೀಂ ಖಾನ್ ಮತ್ತು ಸಲ್ಮಾ ಖಾನ್ ಬುಧವಾರ ಮಧ್ಯಾಹ್ನ ಮತಗಟ್ಟೆಗೆ ತೆರಳಿದ್ದಾರೆ. ಹಾಗೇ  ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ.

ಈ ತಿಂಗಳ ಆರಂಭದಲ್ಲಿ, ನಟನಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‍ನಿಂದ 5 ಕೋಟಿ ರೂ. ನೀಡುವಂತೆ ಒತ್ತಾಯಿಸಿ ಬೆದರಿಕೆ ಸಂದೇಶ ಬಂದಿತ್ತು. ಟ್ರಾಫಿಕ್ ಕಂಟ್ರೋಲ್ ರೂಂಗೆ ಕಳುಹಿಸಲಾದ ಸಂದೇಶದಲ್ಲಿ, “ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಮಾತನಾಡಿದ್ದಾನೆ, ಮತ್ತು ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ, ಅವರು ನಮ್ಮ ದೇವಾಲಯಕ್ಕೆ ಹೋಗಿ ಕ್ಷಮೆಯಾಚಿಸಬೇಕು ಅಥವಾ 5 ಕೋಟಿ ರೂ. ನೀಡಬೇಕು. ಅವನು ಹಾಗೆ ಮಾಡದಿದ್ದರೆ, ನಾವು ಅವನನ್ನು ಕೊಲ್ಲುತ್ತೇವೆ; ನಮ್ಮ ಗ್ಯಾಂಗ್ ಇನ್ನೂ ಸಕ್ರಿಯವಾಗಿದೆ ಎಂದು ತಿಳಿಸಿದ್ದನು.

ಇದನ್ನೂ ಓದಿ:ಫ್ರೆಶರ್ಸ್ ಪಾರ್ಟಿ ವೇಳೆ ಟೀ ಶರ್ಟ್‌ ಬಿಚ್ಚಿ ಕುಣಿದ ವಿದ್ಯಾರ್ಥಿನಿ; ವಿಡಿಯೊ ವೈರಲ್‌ ಆಗ್ತಿದ್ದಂತೆ ನೆಟ್ಟಿಗರು ಫುಲ್‌ ಗರಂ!

ನಟ  ಸಲ್ಮಾನ್ ಖಾನ್‍ ಅವರು ಮುಂದಿನ ಸಿಕಂದರ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.