Tuesday, 13th May 2025

IPL Mega Auction: 25 ರಿಂದ 30 ಕೋಟಿ ರೂ ಪಡೆಯಬಲ್ಲ ಆಟಗಾರನನ್ನು ಆರಿಸಿದ ರೈನಾ!

'Wicket Keeper Rishabh Pant Should Get 25-30 Crore', says Suresh Raina

ನವದೆಹಲಿ: ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಅವರಿಗೆ ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL Mega Auction) ಟೂರ್ನಿಯ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು 25 ರಿಂದ 30 ಕೋಟಿ ರೂ.ಗಳನ್ನು ನೀಡಬೇಕೆಂದು ಟೀಮ್‌ ಇಂಡಿಯಾ ಮಾಜಿ ಆಲ್‌ರೌಂಡರ್‌ ಸುರೇಶ್‌ ರೈನಾ ಆಗ್ರಹಿಸಿದ್ದಾರೆ.

ಕಳೆದ ಹಲವು ಆವೃತ್ತಿಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆಡಿದ್ದ ರಿಷಭ್‌ ಪಂತ್‌, ಈ ಬಾರಿ ಅವರು ಮೆಗಾ ಹಜರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹದಿನೆಂಟನೇ ಆವೃತ್ತಿಯ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನವೆಂಬರ್‌ 24 ಮತ್ತು 25 ರಂದು ನಡೆಯಲಿದೆ. ಈ ಹರಾಜಿನಲ್ಲಿ ರಿಷಭ್‌ ಪಂತ್‌ ಅವರನ್ನು ಖರೀದಿಸಲು ಕೆಲ ಫ್ರಾಂಚೈಸಿಗಳು ಎದುರು ನೋಡುತ್ತಿವೆ. ಇದೇ ಮೊದಲ ಬಾರಿ ಎರಡು ಸೆಟ್‌ ಆಟಗಾರರು ಮೊದಲ ಸರದಿಯಲ್ಲಿ ತಮ್ಮ ಅದೃಷ್ಟ ಪರೀಕ್ಷಗೆ ಒಳಗಾಗಲಿದ್ದಾರೆ.

2025ರ ಐಪಿಎಲ್‌ ಮೆಗಾ ಹರಾಜಿನಲ್ಲಿ ಪಂತ್‌ಗೆ ಭಾರಿ ಬೇಡಿಕೆ ಇದೆ ಹಾಗೂ ಇವರು ಬಹುಶಃ 20 ಕೋಟಿ ರೂ. ಗಳನ್ನು ಪಡೆಯಬಹುದು. ಮೆಗಾ ಹರಾಜಿಗೂ ಮುನ್ನ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಸುರೇಶ್‌ ರೈನಾ, ಎಡಗೈ ಬ್ಯಾಟ್ಸ್‌ಮನ್‌ ಈ ಬಾರಿ 25 ರಿಂದ 30 ಕೋಟಿ ರೂ. ಗಳನ್ನು ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

IPL 2025: ರಿಷಭ್‌ ಪಂತ್‌ರನ್ನು ಆರ್‌ಸಿಬಿ ಖರೀದಿಸುತ್ತಾ? ಎಬಿ ಡಿ ವಿಲಿಯರ್ಸ್‌ ಹೇಳಿದ್ದಿದು!

ಟೈಮ್ಸ್‌ ಆಫ್‌ ಇಂಡಿಯಾ ಜತೆ ಮಾತನಾಡಿದ ಸುರೇಶ್‌ ರೈನಾ, “ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನಾಯಕರಾಗಿದ್ದರು, ಅವರು ಗನ್‌ ಪ್ಲೇಯರ್‌, ಗನ್‌ ವಿಕೆಟ್‌ ಕೀಪರ್‌. ಅವರು ಬ್ರ್ಯಾಂಡ್‌ ಮೌಲ್ಯವನ್ನು ನೀವು ಗಮನಿಸಬಹುದು ಮತ್ತು ಅವರು ಅನುಮೋದನೆಗೆ ಸೂಕ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಂತ್‌ 25 ರಿಂದ 30 ಕೋಟಿ ರೂ. ಗಳನ್ನು ಪಡೆಯಬೇಕು, ಇದಕ್ಕೆ ಅರ್ಹರಾಗಿದ್ದಾರೆ,” ಎಂದು ತಿಳಿಸಿದ್ದಾರೆ.

ಪಂದ್ಯ ಗೆಲ್ಲುವ ಸಾಮರ್ಥ್ಯ ಪಂತ್‌ಗಿದೆ

“ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ರಿಷಭ್‌ ಪಂತ್‌ ಅವರಿಗೆ ಇದೆ. ಡೆಲ್ಲಿ ಪರ ಅವರು ಆಡಿದ್ದರು ಹಾಗೂ ಕಪ್‌ ಗೆಲ್ಲಲು ಸಾಕಷ್ಟು ಪರಿಶ್ರಮವನ್ನು ಹಾಕಿದ್ದರು. ಅದೇ ರೀತಿ ಶ್ರೇಯಸ್‌ ಅಯ್ಯರ್‌ ಕೂಡ ತುಂಬಾ ಕಠಿಣ ಪರಿಶ್ರಮ ಪಟ್ಟಿದ್ದಾರೆ (ಕೆಕೆಆರ್‌ ಅವರನ್ನು ಉಳಿಸಿಕೊಂಡಿಲ್ಲ). ಇನ್ನು ಕೆಎಲ್‌ ರಾಹುಲ್‌ ಅವರಿಗೂ ಕೂಡ ಇದು ಅನ್ವಯವಾಗುತ್ತದೆ. ಪ್ರಸ್ತುತ ಆಟಗಾರರನ್ನು ಖರೀದಿಸುವುದು ಮಾತ್ರವಲ್ಲ, ಫ್ರಾಂಚೈಸಿಗಳು ತಮಗೆ ಸೂಕ್ತ ನಾಯಕರ ಹುಡುಕಾಟದಲ್ಲಿವೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಪಂಜಾಬ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳು ತಮ್ಮ ನಾಯಕನ ಹುಡುಕಾಟದಲ್ಲಿವೆ,” ಎಂದು ಸುರೇಶ್‌ ರೈನಾ ಹೇಳಿದ್ದಾರೆ.

IPL 2025 Auction: ನ. 24, 25ರಂದು ಐಪಿಎಲ್ ಮೆಗಾ ಹರಾಜು?

2016ರಲ್ಲಿ ಪಂತ್‌ ಐಪಿಎಲ್‌ಗೆ ಪದಾರ್ಪಣೆ

ರಿಷಭ್‌ ಪಂತ್‌ ಅವರು 2016ರಲ್ಲಿ ಐಪಿಎಲ್‌ ವೃತ್ತಿ ಜೀವನವನ್ನು ಪದಾರ್ಪಣೆ ಮಾಡಿದ್ದರು. ಅವರನ್ನು 2016 ಮತ್ತು 2018ರ ಮೆಗಾ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿ ಪಂತ್‌ ಅವರನ್ನು ಉಳಿಸಿಕೊಳ್ಳಲಾಗಿತ್ತು. 2022ರ ಮೆಗಾ ಹರಾಜಿನಲ್ಲಿ ರಿಷಭ್‌ ಪಂತ್‌ ಮೊದಲ ಆಯ್ಕೆಯ ರಿಟೈನ್ಷನ್‌ ಆಗಿದ್ದರು ಹಾಗೂ ಈ ವೇಳೆ ಅವರು 16 ಕೋಟಿ ರೂ. ಗಳನ್ನು ಪ್ರತಿಯೊಂದು ಆವೃತ್ತಿಗಳಲ್ಲಿಯೂ ಪಡೆದಿದ್ದರು.