Saturday, 10th May 2025

Amit Shah: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ; ಪರಿಸ್ಥಿತಿ ಅವಲೋಕಿಸಿದ ಅಮಿತ್‌ ಶಾ

Amit Shah

ಹೊಸದಿಲ್ಲಿ: ಮಣಿಪುರ (Manipur)ದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಶಂಕಿತ ಕುಕಿ ಬಂಡುಕೋರರು ಅಪಹರಿಸಿದ್ದ 6 ಮಂದಿಯ ಮೃತದೇಹ ಪತ್ತೆಯಾಗಿದೆ. ಹೀಗಾಗಿ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಭಾನುವಾರ (ನ. 17) ದಿಲ್ಲಿಯಲ್ಲಿ ಹಿರಿಯ ಭದ್ರತಾ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೃಹ ಸಚಿವರು ಸೋಮವಾರ (ನ. 17) ನಾರ್ತ್ ಬ್ಲಾಕ್ (North Block)ನಲ್ಲಿ ಮತ್ತೊಂದು ಸುತ್ತಿನ ಪರಿಶೀಲನಾ ಸಭೆ ನಡೆಸಲಿದ್ದಾರೆ. ಮಣಿಪುರದ ಜಿರಿಬಾಮ್‌ನಲ್ಲಿ ಬಂಡುಕೋರರು ಅಪಹರಿಸಿ ಹತ್ಯೆ ಮಾಡಿದ್ದಾರೆ ಎನ್ನಲಾದ ತಲಾ ಮೂವರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 6 ಜನರ ಶವಗಳು ಪತ್ತೆಯಾದ ನಂತರ ಶನಿವಾರ (ನ. 16) ರಾತ್ರಿ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದೆ ಮತ್ತು 7 ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ.

ಇಂಟರ್‌ನೆಟ್‌ ಸ್ಥಗಿತ

ʼʼಪ್ರಸ್ತುತ ಹಿಂಸಾಚಾರ ಪೀಡಿತ ಜಿಲ್ಲೆಗಳಾದ ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ಬಿಷ್ಣುಪುರ, ತೌಬಾಲ್, ಕಕ್ಚಿಂಗ್, ಕಾಂಗ್ಪೋಕ್ಪಿ ಮತ್ತು ಚುರಾಚಂದ್ಪುರದ ಪ್ರಾದೇಶಿಕ ವ್ಯಾಪ್ತಿಯಲ್ಲಿ ಇಂಟರ್‌ನೆಟ್‌ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು 2 ದಿನಗಳವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಲಾಗಿದೆʼʼ ಎಂದು ಮಣಿಪುರದ ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ ತಿಳಿಸಿದ್ದಾರೆ.

ನಿಂಗ್ತೌಖಾಂಗ್‌ನಲ್ಲಿರುವ ರಾಜ್ಯ ಪಿಡಬ್ಲ್ಯುಡಿ ಸಚಿವ ಗೋವಿಂದಾಸ್ ಕೊಂತೌಜಮ್, ಲಾಂಗ್ಮೆಡಾಂಗ್ ಬಜಾರ್‌ನಲ್ಲಿರುವ ಹಿಯಾಂಗ್ಲಾಮ್‌ನ ಬಿಜೆಪಿ ಶಾಸಕ ವೈ. ರಾಧೇಶ್ಯಾಮ್ ಅವರ ಮನೆಗಳಿಗೆ, ತೌಬಲ್ ಜಿಲ್ಲೆಯ ವಾಂಗ್ಜಿಂಗ್ ಟೆಂಟಾದ ಬಿಜೆಪಿ ಶಾಸಕ ಪಾವೊನಮ್ ಬ್ರೋಜೆನ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಖುಂದ್ರಕ್ಪಂನ ಕಾಂಗ್ರೆಸ್ ಶಾಸಕ ಥೋಕ್ಚೊಮ್ ಲೋಕೇಶ್ವರ್ ಅವರ ಮನೆಗಳಿಗೆ ಉದ್ರಿಕ್ತ ಗುಂಪುಗಳು ಬೆಂಕಿ ಹಚ್ಚಿವೆ.

ಸಿಎಂ ಮನೆಗೇ ನುಗ್ಗಲು ಯತ್ನಿಸಿದ ಗುಂಪು

ಆಕ್ರೋಶಿತರ ಗುಂಪು ಶನಿವಾರ ಸಂಜೆ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ (N Biren Singh) ಅವರ ಖಾಸಗಿ ನಿವಾಸದ ಮೇಲೂ ದಾಳಿ ನಡೆಸಿದೆ. ಈ ವೇಳೆ ಎನ್. ಬಿರೇನ್ ಸಿಂಗ್ ಅವರು ತಮ್ಮ ನಿವಾಸದಲ್ಲಿ ಇರಲಿಲ್ಲ. ಅವರು ತಮ್ಮ ಕಚೇರಿಯಲ್ಲಿದ್ದರು. ಹೀಗಾಗಿ ಯಾವುದೇ ಅನಾಹುತ ಆಗಿಲ್ಲ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಹ ಸಿಡಿಸಿದರು. ಇನ್ನು ಇಂಫಾಲ್‌ನಲ್ಲಿರುವ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರ ಪೂರ್ವಜರ ಮನೆ ಮೇಲೂ ದಾಳಿ ನಡೆದಿದೆ.

ಯಾಕಾಗಿ ಹಿಂಸಾಚಾರ?

ಜಿರಿಬಾಮ್ ಜಿಲ್ಲೆಯಿಂದ ನಾಪತ್ತೆಯಾದ 6 ಜನರ ಮೃತದೇಹ ಪತ್ತೆಯಾಗಿದೆ. ಹೀಗಾಗಿ ಆರೋಪಿಗಳ ಪತ್ತೆಗಾಗಿ ಮತ್ತು ಕೊಲೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕ ಆಗ್ರಹಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಮೃತದೇಹ ಕೊಳೆತಿರುವ ಹಿನ್ನೆಲೆಯಲ್ಲಿ ಗುರುತು ಮತ್ತೆ ಸವಾಲಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Manipur Violence: ಮಣಿಪುರದಲ್ಲಿ ಭಾರೀ ಹಿಂಸಾಚಾರ-ಸಿಎಂ ಪೂರ್ವಜರ ಮನೆ ಮೇಲೂ ದಾಳಿ; ಇಂಟರ್ನೆಟ್‌ ಸೇವೆ ಸ್ಥಗಿತ..ನಿಷೇಧಾಜ್ಞೆ ಜಾರಿ