Sunday, 11th May 2025

Shiva Rajkumar: ಶಿವಣ್ಣ ಈಗ ಮೇಷ್ಟ್ರು; ಶ್ರೀನಿ ನಿರ್ದೇಶನದ ಮಕ್ಕಳ ಚಿತ್ರದಲ್ಲಿ ಮಿಂಚಲು ಹ್ಯಾಟ್ರಿಕ್‌ ಹೀರೊ ಸಜ್ಜು

Shiva Rajkumar

ಬೆಂಗಳೂರು: ಹ್ಯಾಟ್ರಿಕ್‌ ಹೀರೊ ಶಿವ ರಾಜ್‌ಕುಮಾರ್‌ (Shiva Rajkumar) ಅಭಿನಯದ ವಹು ನಿರೀಕ್ಷಿತ ʼಭೈರತಿ ರಣಗಲ್‌ʼ (Bhairathi Ranagal) ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನ. 15ರಂದು ಸಿನಿಮಾ ತೆರೆ ಕಾಣಲಿದೆ. ಈ ಮಧ್ಯೆ ಮಕ್ಕಳ ದಿನಾಚರಣೆ ಪ್ರಯುಕ್ತ (ನ. 14) ಶಿವಣ್ಣ ಅಭಿನಯದ ಹೊಸ ಚಿತ್ರ ಘೋಷಣೆಯಾಗಿದೆ. ವಿಶೇಷ ಎಂದರೆ ಇದೊಂದು ಮಕ್ಕಳ ಚಿತ್ರ. ಈ ಚಿತ್ರಕ್ಕೆ ʼA for ಆನಂದ್ʼ (A for Anand) ಎಂದು ಹೆಸರಿಡಲಾಗಿದೆ.

ʼಭೈರತಿ ರಣಗಲ್ʼನಲ್ಲಿ ಲಾಯರ್, ʼಟಗರುʼ ಸಿನಿಮಾದಲ್ಲಿ ಪೊಲೀಸ್, ʼಮಫ್ತಿʼಯಲ್ಲಿ ಡಾನ್…ಹೀಗೆ ಪ್ರತಿ ಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ಕರುನಾಡ ಕಿಂಗ್ ಶಿವರಾಜ್ ಕುಮಾರ್ ಈಗ ಮಾಸ್‌ನಿಂದ ಮೇಸ್ಟ್ರಾಗಿ ಬದಲಾಗುತ್ತಿದ್ದಾರೆ. ಹೌದು, ʼA for ಆನಂದ್ʼ ಸಿನಿಮಾದಲ್ಲಿ ಅವರು ಭೋದಕನಾಗಿದ್ದಾರೆ. ʼಭೈರತಿ ರಣಗಲ್ʼ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ಶಿವ ರಾಜ್‌ಕುಮಾರ್‌ ಭರ್ಜರಿ ಉಡುಗೊರೆ ನೀಡಿದ್ದಾರೆ. ಈಗಾಗಲೇ ಸಾಲು ಸಾಲು ಸಿನಿಮಾಗಳಿಗೆ ಸೈ ಎಂದಿರುವ ಶಿವಣ್ಣ ಹೊಸ ಸಿನಿಮಾ ಘೋಷಿಸಿದ್ದಾರೆ.

ಬಹು ವರ್ಷಗಳ ಬಳಿಕ ಮೇಷ್ಟ್ರ ಪಾತ್ರ

ಮಕ್ಕಳ‌ ದಿನಾಚರಣೆಯಂದೇ ಶಿವಣ್ಣ ಮಕ್ಕಳ ಸಿನಿಮಾದಲ್ಲಿ ನಟಿಸುವ ಗುಟ್ಟುರಟ್ಟು ಮಾಡಿದ್ದಾರೆ. ‘ಸುಂದರ ಕಾಂಡ’ದಲ್ಲಿ ಸಿನಿಮಾದಲ್ಲಿ ಅಧ್ಯಾಪಕರಾಗಿ ಅಭಿನಯಿಸಿದ್ದ ಕರುನಾಡ ಕಿಂಗ್ ಈಗ ಬಹಳ ವರ್ಷದ ಬಳಿಕ ಈ ರೀತಿಯ ಪಾತ್ರ ಒಪ್ಪಿಕೊಂಡಿದ್ದಾರೆ. ವಿಶೇಷ ಅಂದರೆ ಇದು ನೈಜ ಘಟನೆಯಾಧಾರಿತ ಸಿನಿಮಾ.

ಲಾಂಗ್ ಬಿಟ್ಟು ಶಿವಣ್ಣ ಈಗ ಪೆನ್ನು ಹಿಡಿಯುತ್ತಿದ್ದಾರೆ. ಗುರುವಾಗುತ್ತಿರುವ ಶಿವಣ್ಣನಿಗೆ ಓಂಕಾರ ಹಾಕೋದಿಕ್ಕೆ ಈ ಹಿಂದೆ ʼಘೋಸ್ಟ್ʼ ಚಿತ್ರ ನಿರ್ದೇಶಿಸಿದ್ದ ಶ್ರೀ‌ನಿ‌ ಸಜ್ಜಾಗಿದ್ದಾರೆ. ಈ ಬಾರಿ ಶ್ರೀನಿ ಬೇರೆ ತರಹದ ಕಥೆ ಮಾಡಿಕೊಂಡು ಬಂದಿದ್ದಾರೆ. ಶಿವಣ್ಣ ಪಾತ್ರ ಕೂಡ ವಿಭಿನ್ನವಾಗಿದೆಯಂತೆ. ಜತೆಗೆ ಈ ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶ ಇರಲಿದೆ. ಶಿವಣ್ಣ-ಶ್ರೀನಿ 2ನೇ ಕಾಂಬೋದ ʼA for ಆನಂದ್ʼ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ.

ಗೀತಾ ಪಿಕ್ಚರ್ಸ್ ನಿರ್ಮಾಣ

ʼವೇದʼ, ʼಭೈರತಿ ರಣಗಲ್ʼ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿರುವ ಗೀತಾ ಶಿವರಾಜ್ ಕುಮಾರ್ ಒಡೆತನದ ಗೀತಾ ಪಿಕ್ಚರ್ಸ್ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ʼA for ಆನಂದ್ʼ ಸಿನಿಮಾಕ್ಕೆ ಬಹುತೇಕ ʼಘೋಸ್ಟ್ʼ ತಾಂತ್ರಿಕ ವರ್ಗವೇ ಕೆಲಸ ಮಾಡುತ್ತಿದೆ. ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್. ಕುಮಾರ್ ಸಂಕಲನ, ಪ್ರಸನ್ನ ವಿ.ಎಂ. ಸಂಭಾಷಣೆ ಚಿತ್ರಕ್ಕಿದೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಇಡೀ ತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ. ಇನ್ನುಳಿದಂತೆ ಯಾರೆಲ್ಲ ನಟಿಸಲಿದ್ದಾರೆ ಎನ್ನುವ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ತಮಿಳು, ತೆಲುಗು ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣ ಈ ಮೂಲಕ ಮತ್ತೊಂದು ವಿಭಿನ್ನ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ: Shiva Rajkumar: ಮತ್ತೊಂದು ತಮಿಳು ಚಿತ್ರದಲ್ಲಿ ಶಿವಣ್ಣ; ದಳಪತಿ ವಿಜಯ್‌ ಕೊನೆಯ ಸಿನಿಮಾದಲ್ಲಿ ನಟನೆ