Sunday, 11th May 2025

Murder Case: ಸಂಶಯಪಿಶಾಚಿ ಗಂಡನ ಮೇಲೆ ಸಿಟ್ಟಿಗೆದ್ದು ಮಗುವನ್ನೇ ಇರಿದು ಕೊಂದ ತಾಯಿ

chkkodi murder case

ಚಿಕ್ಕೋಡಿ: ತನ್ನ ಮೇಲೆ ಪದೇ ಪದೆ ಸಂಶಯಪಡುತ್ತಿದ್ದ ಗಂಡನ ಭಂಡತನದಿಂದ ಬೇಸತ್ತುಹೋದ ಪತ್ನಿಯೊಬ್ಬಳು “ನೀನೂ ಬೇಡ, ನಿನ್ನಿಂದ ಜನಿಸಿದ ಮಗುವೂ ಬೇಡ” ಎಂದು ಹಸುಗೂಸನ್ನೇ ಚಾಕುವಿನಿಂದ ಇರಿದು ಕೊಂದ (Stabbing, Murder Case)ಬರ್ಬರ ಘಟನೆ ಚಿಕ್ಕೋಡಿಯಿಂದ (Chikkodi news) ವರದಿಯಾಗಿದೆ.

ಗಂಡ-ಹೆಂಡತಿ ನಡುವಿನ ಜಗಳದಲ್ಲಿ ಹಸುಗೂಸು ಬಲಿಯಾದ ದುರಂತ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಗಾರ ಖುರ್ದ್ ಪಟ್ಟಣದ ಪರೀದಖಾನವಾಡಿಯ ತೋಟದ ಮನೆಯಲ್ಲಿ ನಡೆದಿದೆ. ಸಾತ್ವಿಕ್ ರಾಹುಲ್ ಕಟಗೇರಿ ಮೃತ ಬಾಲಕ, ಭಾಗ್ಯಶ್ರಿ ಕೊಲೆಗೈದ ತಾಯಿ.

ಕಳೆದ 7 ವರ್ಷಗಳ ಹಿಂದೆ ರಾಹುಲ್ ಕಟಗೇರಿ ಎಂಬಾತನೊಂದಿಗೆ ಭಾಗ್ಯಶ್ರೀ ಮದುವೆಯಾಗಿದ್ದಳು. ಮದುವೆಯಾಗಿದ್ದರೂ ನೆಮ್ಮದಿ ಇರಲಿಲ್ಲ. ಗಂಡ ದಿನನಿತ್ಯ ಜಗಳವಾಡುತ್ತಿದ್ದ. ಜಗಳಕ್ಕೆ ಬೇಸತ್ತು ಭಾಗ್ಯಶ್ರೀ ತವರುಮನೆಗೆ ಹೋಗಿದ್ದರೂ ಗಂಡ ರಾಹುಲ್ ಆಕೆಯ ಊರಿಗೆ ಹೋಗಿ ಮನೆಯ ಹಿರಿಯರೊಟ್ಟಿಗೆ ಮಾತಾಡಿ ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದ.

ಇಂದು ಬೆಳ್ಳಂಬೆಳಗ್ಗೆ ಮತ್ತೆ ಪತಿ-ಪತ್ನಿ ನಡುವೆ ಜಗಳ ಮಾಡಿಕೊಂಡಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಸಂಶಯ ಪಡುತ್ತೀಯಾ, ನಿನ್ನ ವಂಶದ ಕುಡಿಯನ್ನು ಉಳಿಸಲಾರೆ ಎಂದು ಮಗುವಿನ ಮೇಲೆ ಚಾಕುವಿನಿಂದ ತಿವಿದು ತೀವ್ರ ಗಾಯಗೊಳಿಸಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಭಾಗ್ಯಶ್ರೀ ಯತ್ನಿಸಿದ್ದಾಳೆ. ಮಗು ಸ್ಥಳದಲ್ಲೇ ಅಸುನೀಗಿದೆ. ಭಾಗ್ಯಶ್ರೀ ಬದುಕುಳಿದಿದ್ದಾಳೆ. ಆಸ್ಪತ್ರೆಗೆ ಸೇರಿಸಲಾಗಿದೆ.

ಸದ್ಯ ಘಟನೆ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.