Saturday, 10th May 2025

‌Udupi Crime News: ಲೈಂಗಿಕ ಕಿರುಕುಳ ಆರೋಪಿ ಪೊಲೀಸ್ ಠಾಣೆಯಲ್ಲೇ ಸಾವು

udupi crime news

ಉಡುಪಿ: ಮಹಿಳೆಯೊಬ್ಬರಿಗೆ ಲೈಂಗಿಕ‌ ಕಿರುಕುಳ (Physical Abuse) ಆರೋಪದಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ವ್ಯಕ್ತಿ ಠಾಣೆಯಲ್ಲೇ ಸಾವನ್ನಪ್ಪಿರುವ (Udupi Crime news) ಘಟನೆ ಉಡುಪಿ (Udupi news) ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ. ಕೇರಳ ಮೂಲದ ಕಾರ್ಮಿಕ ಬಿಜು ಮೋಹನ್(44) ಮೃತ ವ್ಯಕ್ತಿ.

ಈತ ಕೊಚ್ಚಿನ್ ಶಿಪ್ ಯಾರ್ಡ್​ನಲ್ಲಿ ಕಾರ್ಮಿಕನಾಗಿದ್ದ ಎಂದು ತಿಳಿದುಬಂದಿದೆ. ಮಹಿಳೆಯೊಬ್ಬರಿಗೆ ಲೈಂಗಿಕ‌ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಶನಿವಾರ ಈತನ ಮೇಲೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಆರೋಪಿಯನ್ನು ತಂದು ಠಾಣೆಯಲ್ಲಿ ಕೂರಿಸಿದ್ದರು. ಮುಂಜಾನೆ ಟಾಯ್ಲೆಟ್​ನಲ್ಲಿ ಆರೋಪಿ ಕುಸಿದು ಬಿದ್ದಿದ್ದಾರೆ. ಕೂಡಲೇ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್‌ ಅಗರವಾಲ್‌ ಪ್ರತಿಕ್ರಿಯಿಸಿದ್ದು, ಮಹಿಳೆಯೊಬ್ಬರು ಲೈಂಗಿಕ‌ ಕಿರುಕುಳ ಆರೋಪದಡಿ ದೂರು ನೀಡಿದ್ದರು. ಹೀಗಾಗಿ ಆರೋಪಿಯನ್ನು ಕರೆತಂದು ರಾತ್ರಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಮಹಿಳಾ ಪೊಲೀಸ್ ಸಿಬ್ಬಂದಿ 3.45 ಗಂಟೆಗೆ ಸೆಲ್​ ಗಮನಿಸಿದಾಗ ಗೋಡೆಗೆ ತಲೆ ತಾಗಿಸಿ ಆರೋಪಿ ಬಿಜು ಮೋಹನ್ ಕುಸಿದು ಬಿದ್ದಿದ್ದ. ಕೂಡಲೇ ಪೊಲೀಸ್ ಠಾಣಾಧಿಕಾರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.

ಠಾಣೆಗೆ ಉಡುಪಿ ಎಸ್​ಪಿ ಡಾ.ಅರುಣ್ ಕುಮಾರ್ ಭೇಟಿ ನೀಡಿದ್ದಾರೆ. ಎಸ್ಪಿ ಕೂಡ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ಸೂಚನೆ ನೀಡಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರುವಾಗಲೇ ಆತ ಮೃತಪಟ್ಟಿದ್ದ. ಡೆಂಗ್ಯೂ ಜ್ವರ, ಮಾನಸಿಕ ಕಾಯಿಲೆಗೆ ಸಂಬಂಧಿಸಿದಂತೆ ಈತ ಚಿಕಿತ್ಸೆ ಪಡೆದಿರುವ ಮಾಹಿತಿ ಇದೆ. ಪ್ರಾಥಮಿಕ ತನಿಖೆ ಮಾಡಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಇಂತಹ ಘಟನೆ ನಡೆದಾಗ ಪ್ರಕರಣ ಸಿಐಡಿಗೆ ಹೋಗುತ್ತೆ ಎಂದಿದ್ದಾರೆ.

ಬಿಜು ಮೋಹನ್ ಅವರ ಕುಟುಂಬಸ್ಥರು ಬಂದ ಬಳಿಕ ಹೇಳಿಕೆ ಪಡೆದುಕೊಳ್ಳಲಾಗುತ್ತೆ. ಆ ಬಳಿಕ ಪ್ರಕರಣವನ್ನ ಸಿಐಡಿಗೆ ಹಸ್ತಾಂತರ ಮಾಡಲಾಗುತ್ತೆ. ಸಿಐಡಿ ಮುಂದಿನ ತನಿಖೆ ನಡೆಸುತ್ತಾರೆ. ಮರಣೋತ್ತರ ಪರೀಕ್ಷೆ ಅನುಮತಿಯನ್ನ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಮೂಲಕ ಮಾಡಲಾಗುತ್ತೆ. ಆ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.

“ಸಂಜೆ 7ರ ಹೊತ್ತಿಗೆ ಈ ಅಪರಿಚಿತ ವ್ಯಕ್ತಿ, ಮನೆ ಒಳಗೆ ನುಗ್ಗಲು ಪ್ರಯತ್ನಿಸಿದ್ದ. ವಿಪರೀತ ಕುಡಿದು ತೇಲಾಡುತ್ತಿದ್ದ. ಅವನನ್ನು ಈವೆರೆಗೆ ನಾವು ನೋಡಿಲ್ಲ. ಅಲ್ಪ ಸ್ವಲ್ಪ ಕನ್ನಡ , ಹಿಂದಿ ಮಾತನಾಡುತ್ತಿದ್ದ. ಅವನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಸ್ಥಳಕ್ಕೆ ಪೊಲೀಸರು ಬಂದು ಕರೆದೊಯ್ದರು” ಎಂದು ಈತನ ಬಂಧನ ಸಂದರ್ಭದ ಪ್ರತ್ಯಕ್ಷದರ್ಶಿಗಳು ಎಂದು ಹೇಳಿದ್ದಾರೆ.