Saturday, 10th May 2025

Shiggaon By Election: ಇಡೀ ಭಾರತವನ್ನು ಹಿಂದುತ್ವದ ಪ್ರಯೋಗ ಶಾಲೆ ಮಾಡುತ್ತೇವೆ; ಯತ್ನಾಳ್‌ ಆವಾಜ್‌

Shiggaon By Election

ಶಿಗ್ಗಾಂವಿ: ಇಡೀ ಭಾರತವನ್ನು ಸನಾತನ ಹಿಂದೂ ಧರ್ಮದ ಪ್ರಯೋಗ ಶಾಲೆ ಮಾಡಿಯೇ ಮಾಡುತ್ತೇವೆ. ನಮಗೆ ಇರುವುದು ಇದೊಂದೇ ದೇಶ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಹೇಳಿದ್ದಾರೆ. ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ದುಂಢಸಿಯಲ್ಲಿ ಚುನಾವಣಾ ಪ್ರಚಾರ (Shiggaon By Election) ನಡೆಸಿ ಅವರು ಮಾತನಾಡಿದರು.

ಶಿಗ್ಗಾಂವಿ, ಸವಣೂರು ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರು ಮಾಡಿರುವ ಅಭಿವೃದ್ಧಿ ಕೆಲಸ ನೋಡಿದರೆ ಯಾರೂ ತಕರಾರು ಮಾಡದೆ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಈ ಸುದ್ದಿಯನ್ನೂ ಓದಿ | Aadhar Card update: 10 ವರ್ಷಗಳಿಂದ ಆಧಾರ್​ ಕಾರ್ಡ್ ಅಪ್‌ಡೇಟ್‌ ಮಾಡಿಲ್ವಾ? ಕೊನೆಯ ದಿನ, ವಿವರ ಇಲ್ಲಿದೆ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಹೊಸದೇನಾದರೂ ಹೇಳಿದ್ದಾರಾ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷದಲ್ಲಿ ಎಷ್ಟು ಸುಧಾರಣೆ ಮಾಡಿದ್ದಾರೆ. ಈಗ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ‌. ಕಾಂಗ್ರೆಸ್‌ನವರು ಸೈನ್ಯಕ್ಕೆ ಎಕೆ 47 ಬಳಕೆ ಮಾಡಲೂ ಅವಕಾಶ ಕೊಡುತ್ತಿರಲಿಲ್ಲ. ಈಗ ಮೋದಿಯವರು ನಮ್ಮ ಸೈನಿಕರಿಗೆ ಎಲ್ಲ ಅವಕಾಶ ಕೊಟ್ಟಿದ್ದಾರೆ ಎಂದು ಯತ್ನಾಳ್‌ ಹೇಳಿದರು.

ನೆಹರು ಅವರು ಚೀನಾ ಯುದ್ದದ ಸಂದರ್ಭದಲ್ಲಿ ನಮ್ಮ ಸೈನಿಕರಿಗೆ ಒಂದು ಚಸ್ಮಾ ಕೊಟ್ಟಿರಲಿಲ್ಲ. ಅವರಿಂದ ನಮ್ಮ ಸೈನಿಕರಿಗೆ ಸಾಕಷ್ಟು ಅನ್ಯಾಯವಾಗಿದೆ ಎಂದು ಆರೋಪಿಸಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿಗೆ ನಮಸ್ಕಾರ ಮಾಡಿಕೊಂಡು ತಿರುಗಾಡಿದರು. ನಮ್ಮ ಪ್ರಧಾನಿ ನಾನು ಪ್ರಧಾನ ಸೇವಕ ಯಾರೂ ಕಾಲಿಗೆ ಬೀಳಬೇಕಿಲ್ಲ ಎಂದರು. ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಕೂಡಲೇ ನಾನು ಚೀಫ್‌ ಮಿನಿಸ್ಟರ್ ಅಲ್ಲ ಕಾಮನ್ ಮ್ಯಾನ್ ಅಂತ ಹೇಳಿದರು ಎಂದು ತಿಳಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಈಗ ಮೀಸಲಾತಿ ಬಗ್ಗೆ ಚಕಾರ ಎತ್ತುತ್ತಿಲ್ಲ

ನಾವು ಬಿಜೆಪಿ ಅವಧಿಯಲ್ಲಿ ನನಗೆ ಮಂತ್ರಿ ಸ್ಥಾನ ಬೇಡ ನಮ್ಮ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ನಮ್ಮ ಸರ್ಕಾರದ ವಿರುದ್ದವೇ ಹೋರಾಟ ಮಾಡಿದ್ದೇವು, ಆಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು, ನಮಗೆ ಪ್ರವರ್ಗ 2 ಡಿ ಅಡಿಯಲ್ಲಿ ಮೀಸಲಾತಿ ಅವಕಾಶ‌ ಕಲ್ಪಿಸಿದ್ದರು. ಈ ಸರ್ಕಾರ ಅದನ್ನು ಪಾಲಿಸಲಿಲ್ಲ‌. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜೋರಾಗಿ ಮಾತನಾಡುತ್ತಿದ್ದರು. ಈಗ ಮೀಸಲಾತಿ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದರು.

ಕಾಂಗ್ರೆಸ್‌ಗೆ ಪಾಠ ಕಲಿಸಿ

ನಮ್ಮ ಧರ್ಮ, ದೇಶ ಉಳಿಯಬೇಕೆಂದರೆ ಹಿಂದೂಗಳು ಎಲ್ಲರೂ ಒಟ್ಟಾಗಬೇಕು. ಭರತ್ ಬೊಮ್ಮಾಯಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್‌ಗೆ ಪಾಠ ಕಲಿಸಬೇಕು ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ | PAN Card New Rule: ಪಾನ್ ಕಾರ್ಡ್ ಅಪ್‌ಡೇಟ್‌ಗೆ ಯಾವಾಗ ಕೊನೆಯ ದಿನ? ಮಾಡದಿದ್ದರೆ ಆಗುವ ನಷ್ಟ ಏನು?

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರಗ ಜ್ಞಾನೇಂದ್ರ ಹಾಜರಿದ್ದರು.