Sunday, 11th May 2025

land Encroachment: ಪ್ರತಿಷ್ಠಿತ ಯಜಾಕಿ ಕಂಪನಿ ವಿರುದ್ಧ ಸರ್ಕಾರಿ ಜಾಗ ಒತ್ತುವರಿ ಆರೋಪ; ಅಧಿಕಾರಿಗಳಿಂದ ಕಾಟಾಚಾರಕ್ಕೆ ಸರ್ವೆ

ನೆಲಮಂಗಲ: ಕ್ಷೇತ್ರದ ಸೋಲೂರು ಹೋಬಳಿಯ ಲಕ್ಕೇನಹಳ್ಳಿಯಲ್ಲಿರವ ಪ್ರತಿಷ್ಠಿತ ಯಜಾಕಿ (yazaki) ಕಂಪನಿ ವಿರುದ್ಧ ಸರ್ಕಾರಿ ಜಾಗ ಕಬಳಿಸಿರುವ ಆರೋಪ ಹಲವು ವರ್ಷಗಳ ಹಿಂದೆಯೇ ಕೇಳಿಬಂದಿತ್ತು. ಕೆಲ ದಿನಗಳ ಹಿಂದೆ ಶಾಸಕ ಎನ್. ಶ್ರೀನಿವಾಸ್ ಅವರು ಯಜಾಕಿ ಕಂಪನಿಯಿಂದ ಒತ್ತುವರಿ ಆಗಿದೆಯೋ, ಇಲ್ಲವೋ ಎಂಬುದನ್ನು ತಿಳಿಯಲು ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಅದರಂತೆ ಅಧಿಕಾರಿಗಳು ಮಂಗಳವಾರ ಸರ್ವೆ ನಡೆಸಿದ್ದಾರೆ. ಆದರೆ, ಅಧಿಕಾರಿಗಳು ಕಾಟಾಚಾರಕ್ಕೆ ಸರ್ವೆ ನಡೆಸಿ ಮುಂದಿನ ವಾರ ಮತ್ತೆ ಮಾಡುವುದಾಗಿ ಹೇಳಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಧಿಕಾರಿಗಳು ಬೆಳಗ್ಗೆ 10 ಗಂಟೆಗೆ ಬರುವ ಬದಲು ಮಧ್ಯಾಹ್ನ 3 ಗಂಟೆಗೆ ಬಂದು ಕಾಟಾಚಾರಕ್ಕೆ ಸರ್ವೆಯನ್ನು ನಡೆಸಿ ಮುಂದಿನ ವಾರ ಸರ್ವೇ ಮಾಡುತ್ತೇವೆ ಎಂದು ಕೈ ತೊಳೆದುಕೊಂಡಿದ್ದಾರೆ. ಶಾಸಕರ ಸೂಚನೆಗೂ ಬೆಲೆ ಕೊಡದೆ, ಕಂಪನಿಯೊಂದಿಗೆ ಶಾಮೀಲಾಗಿರುವ ಸಂಶಯ ಮೂಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಲಕ್ಕೇನಹಳ್ಳಿ ಗ್ರಾಮದ ಸ್ಥಳೀಯರು ಹೇಳುವ, ಪ್ರಕಾರ ಸರ್ವೆ ನಂಬರ್ 77 ರಲ್ಲಿ 4 ಎಕರೆ ಹಾಗೂ ಸರ್ವೆ ನಂಬರ್ 79ರಲ್ಲಿ 6 ಎಕರೆ 20 ಗುಂಟೆ ಜಾಗ ಒತ್ತುವರಿಯಾಗಿದೆ. ಕಂಪನಿ ಪ್ರಾರಂಭವಾದಾಗಿನಿಂದಲೂ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದರೂ ಲಕ್ಕೇನಹಳ್ಳಿ ಪಂಚಾಯಿತಿ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಮುಂದಾದರೂ ಇತ್ತ ಅಧಿಕಾರಿಗಳು ಗಮನ ಹರಿಸಿ ಸರ್ಕಾರಿ ಜಾಗ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Lakshmi Hebbalkar: ತಹಸೀಲ್ದಾರ್‌ ಕಚೇರಿ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ; ನಿಷ್ಪಕ್ಷಪಾತ ತನಿಖೆ ಆಗಲಿ ಎಂದ ಹೆಬ್ಬಾಳ್ಕರ್