Friday, 16th May 2025

Viral Video: ತಾಯಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಕೊಲೆ ಬೆದರಿಕೆ ಹಾಕಿದ ಯುವಕ: ಕಾರಣವೇನು?

Viral Video

ಗ್ವಾಲಿಯರ್: ʼವೈದ್ಯೋ ನಾರಾಯಣೋ ಹರಿʼ ಈ ಮಾತು ಇತ್ತೀಚಿನ ದಿನಗಳಲ್ಲಿ ಸುಳ್ಳಾಗುತ್ತಿದೆ. ಅದಕ್ಕೆ ತಕ್ಕ ನಿದರ್ಶನ ಎನ್ನುವಂತೆ ಇಲ್ಲೊಬ್ಬ ವ್ಯಕ್ತಿ ಕೊಲ್ಲುವುದಾಗಿ ವೈದ್ಯರಿಗೆ ಬೆದರಿಕೆ ಹಾಕಿದ್ದಾನೆ. ತನ್ನ ತಾಯಿಗೆ ಏನಾದರೂ ಆದರೆ ನಿಮ್ಮನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ ವಿಡಿಯೊ ಸದ್ಯ ಎಲ್ಲೆಡೆ ವೈರಲ್‌ (Viral Video) ಆಗುತ್ತಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ(Madhya Pradesh) ಸಂಭವಿಸಿದೆ.

ಮಧ್ಯಪ್ರದೇಶದ ಯುವಕನೊಬ್ಬ ಗ್ವಾಲಿಯರ್‌ನ ಆಸ್ಪತ್ರೆಯೊಂದರ ಮುಖ್ಯ ವೈದ್ಯಾಧಿಕಾರಿ ಸೇರಿದಂತೆ ಮೂವರು ವೈದ್ಯರಿಗೆ ಕೊಲೆ ಬೆದರಿಕೆ (Death threat) ಹಾಕಿದ್ದಾನೆ. ಆತನ ತಾಯಿ ವಿಷ ಸೇವಿಸಿ ಆಸ್ಪತ್ರೆಯಲ್ಲಿದ್ದು, ದೇಹ ಕಪ್ಪಾಗಿದೆ. ಆದರೂ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೆ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾನೆ. ನಾನು ನನ್ನ ಪಿಸ್ತೂಲ್ ಮತ್ತು ರಿವಾಲ್ವರ್ ಅನ್ನು ತರಿಸುತ್ತೇನೆ. ನಿಮ್ಮನೆಲ್ಲ ಕೊಲೆ ಮಾಡುತ್ತೇನೆ ಎಂದು ಯುವಕ ಬೆದರಿಕೆ ಹಾಕಿದ್ದಾನೆ.

ವಿಡಿಯೊದಲ್ಲಿ ಆತ ಇಂದು ಮೂರು ಕೊಲೆಗಳು ನಡೆಯಲಿವೆ. ಮೊದಲ ಕೊಲೆ ಎಚ್‌ಒಡಿ ಪ್ರಶಾಂತ್ ನಾಯಕ್, ಎರಡನೇ ಕೊಲೆ ಡಾ.ಬಿಂದು ಸಿಂಘಾಲ್ ಮತ್ತು ಮೂರನೇ ಕೊಲೆ CMHO ಆಗಿರುತ್ತದೆ ಎಂದು ಹೇಳಿದ್ದಾನೆ. ಮುಂದುವರಿದು ನನ್ನ ತಾಯಿಗೆ ಏನಾದರು ಆದರೆ ಇಡೀ ಆಸ್ಪತ್ರೆಯನ್ನೇ ಸುಟ್ಟು ಹಾಕುತ್ತೇನೆ ಎಂದೂ ಬೆದರಿಕೆ ಹಾಕಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಇದನ್ನೂ ಓದಿ : Salman Khan: ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ ಕರ್ನಾಟಕ ಮೂಲದ ಯುವಕ ಅರೆಸ್ಟ್‌

ತಾಯಿಯನ್ನು ಡಿಸ್‌ಚಾರ್ಜ್‌ ಮಾಡಿದ ಬಳಿಕವೂ ಆತ ಗಲಾಟೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಮಾಹಿತಿಯ ಪ್ರಕಾರ, ವ್ಯಕ್ತಿಯ ತಾಯಿ ಉಸಿರಾಟದ ತೊಂದರೆಯಿಂದ ಆಸ್ಪತ್ರಗೆ ದಾಖಲಾಗಿದ್ದರು. ವಿಡಿಯೊ ಕುರಿತು ಮಾಹಿತಿ ಪಡೆದ ಸ್ಥಳೀಯ ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿರಬಹುದು ಎಂದು ಹೇಳಲಾಗಿದೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆಸ್ಪತ್ರಗೆ ಭದ್ರತೆ ಒದಗಿಸಿದ್ದಾರೆ.