Wednesday, 14th May 2025

ಟೆಸ್ಲಾ ಸಂಸ್ಥೆಗೆ ಕರ್ಫ್ಯೂನಿಂದ ವಿನಾಯಿತಿ

ಅಜಯ್ ಅಂಚೆಪಾಳ್ಯ

ಪ್ರಖ್ಯಾತ ವಿದ್ಯುತ್ ಕಾರ್ ತಯಾರಿಕಾ ಸಂಸ್ಥೆ ಟೆಸ್ಲಾದ ಮಾಲಿಕ ಎಲಾನ್ ಮಸ್‌ಕ್‌ ನಿಜಕ್ಕೂ ಗಟ್ಟಿಕುಳ. ಕೋವಿಡ್-19 ವಿಧಿಸಿದ ಲಾಕ್‌ಡೌನ್‌ನ್ನು ತನ್ನ ಸಂಸ್ಥೆ ಸಂಪೂರ್ಣವಾಗಿ ಪಾಲಿಸುವುದಿಲ್ಲ, ನಾವು ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಂಡು ಕೆಲಸ ಆರಂಭಿಸುತ್ತೇವೆ, ಆದರೆ ಲಾಕ್ ಡೌನ್‌ನ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ, ಬೇಕಾದರೆ ತನ್ನನ್ನು ಅರೆಸ್ಟ್‌ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಜತೆಯಲ್ಲೇ, ಸ್ಥಳೀಯ ಲಾಕ್‌ಡೌನ್ ನಿಯಮಗಳನ್ನು ಮೀರಿ, ಕಳೆದ ಮೇನಲ್ಲೇ ತನ್ನ ಕಾರು ಉತ್ಪಾದನಾ ಘಟವನ್ನು ಅವರು ಆರಂಭಿಸಿದ್ದರು. ಈ ವಾರ ಕ್ಯಾಲಿಫೋರ್ನಿಯಾದಲ್ಲಿ ಮತ್ತೊಮ್ಮೆ ಭಾಗಶಃ ಲಾಕ್ ಡೌನ್ ಮತ್ತು ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಆದರೆ, ಟೆಸ್ಲಾ ಸಂಸ್ಥೆಯ ಉದ್ಯೋಗಿಗಳಿಗೆ ರಿಯಾಯತಿಯನ್ನು ಸರಕಾರದ ಇಲಾಖೆಯೇ ನೀಡಿದೆ! ಬೇರೆಲ್ಲಾ ಸಂಸ್ಥೆಗಳಿಗೆ ರಾತ್ರಿ 10 ರಿಂದ ಬೆಳಗ್ಗೆ 5 ರ ತನಕ ವಿಧಿಸಿರುವ ಕರ್ಫ್ಯೂವನ್ನು ಟೆಸ್ಲಾ ಸಂಸ್ಥೆಯ ಉದ್ಯೋಗಿಗಳು ಪಾಲಿಸಬೇಕಾಗಿಲ್ಲ, ಅವರ ಸೇವೆ ಅಗತ್ಯ ಎಂದು ಅಲ್ಲಿನ ಆರೋಗ್ಯ ಇಲಾಖೆಯೇ ಅನುಮತಿ ನೀಡಿದೆ.

ಪರಿಸರ ಸ್ನೇಹಿ ಮತ್ತು ಬ್ಯಾಟರಿ ಚಾಲಿತ ಅತ್ಯಾಧುನಿಕ ಕಾರುಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ಸಂಸ್ಥೆಯು, ಮಾರ್ಚ್‌ನಲ್ಲಿ ವಿಧಿಸಿದ ಲಾಕ್‌ಡೌನ್‌ನಿಂದಾಗಿ, ತನ್ನ ಡೆಡ್‌ಲೈನ್ ಮುಟ್ಟಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಸ್ಥಳೀಯ ನಿಯಮಗಳನ್ನು ಮೀರಿ, ಮೇ ತಿಂಗಳಲ್ಲಿ ತನ್ನ ಕಾರ್ಖಾನೆಗಳನ್ನು ಆರಂಭಿಸಲು ಇಲಾನ್ ಮಸ್ಕ್‌ ನಿರ್ಧರಿಸಿ, ಕೆಲಸಕ್ಕೆ ಚಾಲನೆ ನೀಡಿದ್ದರು. ಇದರಿಂದಾಗಿ ಸರಕಾರದ ಇಲಾಖೆಗಳಿಗೂ, ಮಸ್ಕ್‌‌ಗೂ ವಾದವಿವಾದಗಳು ನಡೆದು, ಸಂಘರ್ಷದ ಸ್ಥಿತಿ ನಿರ್ಮಾಣವಾಗಿತ್ತು. ಈ ವಾರದ ಲಾಕ್‌ಡೌನ್ ಸಮಯದಲ್ಲಿ ಅಂತಹ ಸಂಘರ್ಷದಿಂದ ದೂರವಿರಲೇನೋ ಎಂಬಂತೆ,
ಟೆಸ್ಲಾ ಸಂಸ್ಥೆಗೆ ವಿನಾಯತಿ ನೀಡಲಾಗಿದೆ. ತನ್ನ ಹೊಸ ಹೊಸ ಕಾರುಗಳ ಯೋಜನೆಗೆ ಸರಕಾರದ ಇಲಾಖೆಗಳು ತಡೆಯನ್ನೊಡ್ಡಿ ದರೆ, ಕಾರು ತಯಾರಿಸುವ ಘಟಕವನ್ನು ಮತ್ತು ಮುಖ್ಯ ಕಛೇರಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಸಹ ತಾನು ಹಿಂಜರಿಯುವು ದಿಲ್ಲ ಎಂದು ಇಲಾನ್ ಮಸ್ಕ್‌ ಈ ಹಿಂದೆ ಹೇಳಿದ್ದುಂಟು.

ವಿವಿಧ ಮಾದರಿಯ, ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಬ್ಯಾಟರಿ ಚಾಲಿತ ಕಾರುಗಳನ್ನು ತಯಾರಿಸುತ್ತಿರುವ ಟೆಸ್ಲಾ, ಈ
ಬಾರಿಯ ಲಾಕ್‌ಡೌನ್ ಪ್ರಕ್ರಿಯೆಯನ್ನು ತನ್ನ ಪ್ರಚಾರಕ್ಕೂ ಉಪಯೋಗಿಸಿಕೊಳ್ಳುತ್ತಿರುವುದು ಮಾರುಕಟ್ಟೆ ಪಂಡಿತರನ್ನು ವಿಸ್ಮಯಕ್ಕೆ ತಳ್ಳಿದೆ!

Leave a Reply

Your email address will not be published. Required fields are marked *