ಬೆಂಗಳೂರು: ಬೆಂಗಳೂರಿನಲ್ಲೊಬ್ಬ ಸೈಕೋಪಾತ್ (Psychopath) ಪತಿಯ ಕಾಟಕ್ಕೆ ಬೇಸತ್ತ ಪತ್ನಿ ಪೊಲೀಸ್ ಠಾಣೆ (Bengaluru Crime news) ಮೆಟ್ಟಿಲೇರಿದ್ದಾಳೆ. ಮುಸ್ಲಿಮನಾದ ಈತ ತಾನು ಹಿಂದೂ ಎಂದು ಸುಳ್ಳು ಹೇಳಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಲ್ಲದೆ, ಪತ್ನಿಯನ್ನೂ ಮತಾಂತರ (Conversion) ಮಾಡಿದ್ದ. ಅಷ್ಟಲ್ಲದೇ ಈತ ನಿಧಿಯ ಆಸೆಯಿಂದ ತಮ್ಮ ಮಗುವನ್ನು ಬಲಿ ಕೊಡೋಣ ಎಂದು ಪತ್ನಿಯನ್ನು ಪೀಡಿಸುತ್ತಿದ್ದಾನೆ. ಬೇಸತ್ತ ಪತ್ನಿ ಇದೀಗ ಪೊಲೀಸರ ಮೊರೆ ಹೋಗಿದ್ದಾಳೆ.
ಮಗುವನ್ನು ಬಲಿ ಕೊಡೋಣ, ಬಲಿ ಕೊಟ್ರೆ ನಿಧಿ ಸಿಗುತ್ತೆ. ಕುಟುಂಬದ ಸಮೃದ್ಧಿ ಹೆಚ್ಚಾಗತ್ತೆ ಎಂದು ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಸಿಡಿದೆದ್ದ ಪತ್ನಿ ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾರೆ. ಬೆಂಗಳೂರಿನ ಕೆ.ಆರ್.ಪುರಂ ನಿವಾಸಿ ಸದ್ದಾಂ ವಿರುದ್ಧ ಪತ್ನಿಯೇ ದೂರು ನೀಡಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ನಾನೊಬ್ಬ ಹಿಂದು ಯುವಕ, ನನ್ನ ಹೆಸರು ಆದೀಶ್ವರ್ ಎಂದು ಸುಳ್ಳು ಹೇಳಿ ಸದ್ದಾಂ ಹಿಂದು ಧರ್ಮದ ಯುವತಿಯನ್ನು ಮದುವೆಯಾಗಿದ್ದ. ಮದುವೆಯಾಗಿ ಪತ್ನಿ ಗರ್ಭಿಣಿಯಾದಾಗ ತಾನೊಬ್ಬ ಮುಸಲ್ಮಾನ್, ತನ್ನ ಹೆಸರು ಸದ್ದಾಂ ಎಂದು ನಿಜ ಹೇಳಿಕೊಂಡಿದ್ದ. ನೀನು ಇಸ್ಲಾಂಗೆ ಮತಾಂತರವಾಗಬೇಕೆಂದು ಪತ್ನಿಯನ್ನು ಒತ್ತಾಯಿಸಿ ಮತಾಂತರಿಸಿದ್ದ. ಅಲ್ಲದೇ ಪತ್ನಿಯ ಹೆಸರನ್ನು ಬದಲಾಯಿಸಿದ್ದ. ಪತ್ನಿಯೂ ಸುಮ್ಮನಾಗಿದ್ದಳು. ಆದರೆ ಇತ್ತೀಚಿಗೆ ಸೈಕೋ ರೀತಿಯಲ್ಲಿ ಸದ್ದಾಂ ವರ್ತಿಸುತ್ತಿದ್ದ.

ಗಂಡು ಮಗು ಹುಟ್ಟಿದ ನಂತರ, ಕುಟ್ಟಿ ಸೈತಾನ್ ಪೂಜೆ ಮಾಡಬೇಕು. ಕುಟ್ಟಿ ಸೈತಾನ್ ಪೂಜೆಯಲ್ಲಿ ಮಗುವನ್ನು ಬಲಿ ಕೊಡಬೇಕು. ಮಗುವನ್ನು ಬಲಿ ಕೊಟ್ರೆ ಸಮೃದ್ಧಿ ಹೆಚ್ಚಾಗತ್ತೆ, ಜತೆಗೆ ನಿಧಿ ಸಿಗತ್ತೆ ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಸದ್ಯ ಸೈಕೋ ಗಂಡನಿಂದ ತಪ್ಪಿಸಿಕೊಂಡಿರುವ ಮಹಿಳೆ ತುಮಕೂರಿನ ತವರು ಮನೆ ಸೇರಿಕೊಂಡಿದ್ದಾಳೆ. ತುಮಕೂರಿಗೂ ತೆರಳಿ ಮಗುವನ್ನು ಬಲಿ ಕೊಡೋಣ ಕೊಡು ಎಂದು ಹಿಂಸೆ ಕೊಟ್ಟಿದ್ದಾನೆ. ಆರೋಪಿ ಸದ್ದಾಂ ಪತ್ನಿಯ ತಾಯಿಗೂ ಜೀವ ಬೆದರಿಕೆ ಹಾಕಿದ್ದಾನೆ.
ಹೀಗಾಗಿ ಮಹಿಳೆ ಈ ಬಗ್ಗೆ ಕೆ.ಆರ್.ಪುರ ಠಾಣೆಗೆ ದೂರು ನೀಡಿದ್ದಾಳೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ದಯಾನಂದ್ಗೆ ನೊಂದಾಕೆ ದೂರು ನೀಡಿದ್ದಾಳೆ. ತಡರಾತ್ರಿ ಎದ್ದು ಮಂತ್ರ ಪಠಿಸುತ್ತಾ ವಾಮಾಚಾರ ವಿದ್ಯೆ ಅಭ್ಯಾಸ ಮಾಡುತ್ತಿದ್ದ ಪತಿಯ ವರ್ತನೆ ಕಂಡು ಮಹಿಳೆ ಭಯಭೀತಳಾಗಿದ್ದು, ಈತನ ಬಂಧನ ಆಗದಿದ್ದರೆ ತನಗೂ ಮಗುವಿಗೂ ಅಪಾಯ ತಪ್ಪಿದ್ದಲ್ಲ ಎಂದು ತಿಳಿಸಿದ್ದಾಳೆ.
ಇದನ್ನೂ ಓದಿ: Ajekaru Murder Case: ವಿಷವುಣಿಸಿ ಗಂಡನ ಕೊಲೆ ಮಾಡಿದ ರೀಲ್ಸ್ ರಾಣಿಯ ಬಾಯಿ ಬಿಡಿಸಿತು ದೈವ!