Saturday, 10th May 2025

Double Murder Case: ಚಿತ್ರದುರ್ಗದಲ್ಲಿ ದಂಪತಿ ಹತ್ಯೆ; ʼದೃಶ್ಯಂʼ ಥರ ಮೊಬೈಲ್‌ ಎಸೆದು ಎಸ್ಕೇಪ್‌ ಆಗಿದ್ದ ಅಳಿಯ ತೆಲಂಗಾಣದಲ್ಲಿ ಸೆರೆ

double murder chitradurga

ಚಿತ್ರದುರ್ಗ: ಚಿತ್ರದುರ್ಗದ (chitradurga news) ಬೊಮ್ಮಕ್ಕನಹಳ್ಳಿಯಲ್ಲಿ 38 ದಿನಗಳ ಹಿಂದೆ ನಡೆದಿದ್ದ ದಂಪತಿಯ ಹತ್ಯೆ (Double Murder Case) ಪ್ರಕರಣವನ್ನು ಭೇದಿಸಿರುವ ಪೊಲೀಸರು, ಪ್ರಮುಖ ಆರೋಪಿ, ದಂಪತಿಯ ಅಳಿಯ ಮಂಜುನಾಥ್‌ನನ್ನು ತೆಲಂಗಾಣದಲ್ಲಿ ಬಂಧಿಸಿದ್ದಾರೆ. ಈತ, ಪೊಲೀಸರು ತನ್ನ ಟ್ರ್ಯಾಕ್‌ ಹಿಡಿಯಬಾರದು ಎಂದು ಮೊಬೈಲ್‌ ಎಸೆದು ಪರಾರಿಯಾಗಿದ್ದ.

ಹನುಮಂತಪ್ಪ ಮತ್ತು ತಿಪ್ಪಮ್ಮ ಕೊಲೆಯಾದ ದಂಪತಿ. ದಂಪತಿಯ ಕೊಲೆಯಾಗಿ ಬರೋಬ್ಬರಿ 38 ದಿನಗಳೇ ಕಳೆದಿವೆ. ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಸೆ.19ರ ಸಂಜೆ ಜಮೀನಿಗೆ ಹೋಗಿದ್ದ ಹನುಮಂತಪ್ಪ-ತಿಪ್ಪಮ್ಮ ದಂಪತಿಯನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಯಾವುದೋ ಕಾಡು ಪ್ರಾಣಿಯ ದಾಳಿ ಎಂದು ಅಂದಾಜಿಸಲಾಗಿತ್ತು. ಆದರೆ ತನಿಖೆಯ ವೇಳೆ, ಹನಮಂತಪ್ಪ -ತಿಪ್ಪಮ್ಮ ದಂಪತಿಯ ಪುತ್ರಿ ಹರ್ಷಿತಾಳ ಪತಿ ಮಂಜುನಾಥ್ ನಾಪತ್ತೆಯಾದುದು ಗೊತ್ತಾಯಿತು.

ಹರ್ಷಿತಾ ತನ್ನ ಪತಿಯ ಜತೆ ಜಗಳ ಮಾಡಿಕೊಂಡು ಬಂದು ತವರು ಸೇರಿದ್ದಳು. ಇದೇ ದ್ವೇಷದಿಂದ ಮಂಜುನಾಥ್ ಮತ್ತು ಇತರರು ಸೇರಿ ಹತ್ಯೆ ಮಾಡಿದ್ದುದು ಗೊತ್ತಾಗಿತ್ತು. ಕೊಲೆಯಲ್ಲಿ ಭಾಗಿಯಾಗಿದ್ದ ಮಂಜುನಾಥ್​ನ ಸಹೋದರ ರಘು, ತಂದೆ ಚಂದ್ರಪ್ಪ, ಸಂಬಂಧಿ ಮಲ್ಲಿಕಾರ್ಜುನನನ್ನು ಪೊಲೀಸರು ಘಟನೆ ನಡೆದ ಮರುದಿನವೇ ಬಂಧಿಸಿದ್ದರು. ಆದರೆ ಚಾಲಾಕಿ ಮಂಜುನಾಥ್ ಮಾತ್ರ ನಾಪತ್ತೆ ಆಗಿದ್ದ.

ಏರ್‌ಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮೊಬೈಲ್ ಟ್ರ್ಯಾಕಿಂಗ್‌ ಬಗ್ಗೆ ತಿಳಿದುಕೊಂಡಿದ್ದ. ಹೀಗಾಗಿ, ದೃಶ್ಯಂ ಫಿಲಂನಂತೆ ತನ್ನ ಮೊಬೈಲ್ ಎಸೆದು ತೆಲಂಗಾಣಕ್ಕೆ ಎಸ್ಕೇಪ್ ಆಗಿದ್ದ. ಹೀಗಾಗಿ ಪೊಲೀಸರಿಗೆ ಆರೋಪಿಯ ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿತ್ತು. ಎಸ್ಪಿ ರಂಜಿತ್ ಬಂಡಾರು ಮೂರು ತಂಡ ರಚಿಸಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು.

ಡಿವೈಎಸ್ಪಿ ದಿನಕರ್ ನೇತೃತ್ವದ ಪಿಎಸ್​ಐ ಸುರೇಶ್ ಟೀಮ್ ಮಂಜುನಾಥ್ ಸ್ನೇಹಿತರ ಜಾಡು ಹಿಡಿದು ಹೊರಟಿತ್ತು. ಅಪರಿಚಿತ ವಾಟ್ಸ್ಯಾಪ್​ ಕರೆಗಳ ಮೂಲಕ ಸ್ನೇಹಿತರನ್ನು ಸಂಪರ್ಕಿಸಿದ್ದ ಮಂಜುನಾಥ್​ ತೆಲಂಗಾಣದ ವಿಜಯವಾಡ ಜಿಲ್ಲೆಯ ಭದ್ರಾದ್ರಿ ಕೊತ್ತಗೊಡೆಂನಲ್ಲಿರುವ ಸುಳಿವು ಸಿಕ್ಕಿತ್ತು. ಪೊಲೀಸರು ಚಾಲಾಕಿ ಆರೋಪಿ ಮಂಜುನಾಥನನ್ನು ತೆಲಂಗಾಣದಿಂದ ಬಂಧಿಸಿ ತಂದಿದ್ದಾರೆ.

ಇನ್ನು ಮೃತರ ಕುಟುಂಬಸ್ಥರು ಕಳೆದ 39ದಿನಗಳಲ್ಲಿ ಅನೇಕ ಸಲ ಎಸ್ಪಿ ಕಚೇರಿಗೆ ಆಗಮಿಸಿ ಪ್ರಮುಖ ಆರೋಪಿ ಮಂಜುನಾಥ್​ ಬಂಧನಕ್ಕೆ ಮನವಿ ಮಾಡಿದ್ದರು. ಸದ್ಯ ಆರೋಪಿ ಮಂಜುನಾಥ್ ಬಂಧನವಾಗಿದ್ದು ಮೃತರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಮಂಜುನಾಥ್-ಹರ್ಷಿತಾರ ಇಬ್ಬರು ಮಕ್ಕಳು ಮತ್ತು ಹನುಮಂತಪ್ಪ-ತಿಪ್ಪಮ್ಮ ಕುಟುಂಬ ಅನಾಥರಾಗಿದ್ದಾರೆ. ಹೀಗಾಗಿ, ಆರೋಪಿ ಮಂಜುನಾಥ್​ಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮೃತರ ಸಂಬಂಧಿಕರು ಆಗ್ರಹಿಸಿದ್ದಾರೆ.

ಒಟ್ಟಾರೆಯಾಗಿ ಚಿತ್ರದುರ್ಗದ ಬೊಮ್ಮಕ್ಕನಹಳ್ಳಿಯಲ್ಲಿ ನಡೆದಿದ್ದ ದಂಪತಿಯ ಬರ್ಬರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಮೊಬೈಲ್ ಬಳಸದೇ ಉಳಿದರೆ ತಪ್ಪಿಸಿಕೊಳ್ಳಬಹುದೆಂದು ಭಾವಿಸಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅತ್ತೆ-ಮಾವನ ಕೊಂದ ಅಳಿಯನಿಗೆ ತಕ್ಕ ಶಿಕ್ಷೆ ಆಗಬೇಕಿದೆ.

ಇದನ್ನೂ ಓದಿ: Ajekaru Murder Case: ವಿಷವುಣಿಸಿ ಗಂಡನ ಕೊಲೆ ಮಾಡಿದ ರೀಲ್ಸ್ ರಾಣಿಯ ಬಾಯಿ ಬಿಡಿಸಿತು ದೈವ!