Sunday, 11th May 2025

Selfie Accident: ಸೆಲ್ಫಿ ಮಾಡುವಾಗ ಕೆರೆಗೆ ಬಿದ್ದು ಮಾಯವಾದ ಈ ಯುವತಿ 12 ಗಂಟೆ ಬದುಕುಳಿದಿದ್ದೇ ಪವಾಡ!

tumkur news

ತುಮಕೂರು: ತುಮಕೂರಿನ (Tumkur news) ಯುವತಿಯೊಬ್ಬಳು ವಿಚಿತ್ರ ರೀತಿಯಲ್ಲಿ ಸಾವನ್ನು ಗೆದ್ದು ಬಂದಿದ್ದಾಳೆ. ಸೆಲ್ಫಿ ಮಾಡುತ್ತಿರುವಾಗ ಈಕೆ ಕೆರೆಯಲ್ಲಿ ಜಾರಿ (Selfie Accident) ಬಿದ್ದಿದ್ದಳು. ಜಲಸಮಾಧಿಯಾಗಿ ಹೋಗಿದ್ದಾಳೆ (Drowned) ಎಂದು ನಂಬಲಾಗಿತ್ತು. 12 ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ, ಬಂಡೆಗಳ ನಡುವೆ ಆಕೆ ಜೀವ ಉಳಿಸಿಕೊಂಡಿದ್ದು ಪತ್ತೆಯಾಗಿದೆ. ಈಕೆಯನ್ನು ರಕ್ಷಿಸಲಾಗಿದೆ.

ನಿನ್ನೆ (ಅ.27) ತುಮಕೂರು ನಗರದ ಸಮೀಪದ ಮಂದಾರಗಿರಿ ಬೆಟ್ಟದ ತಪ್ಪಲಿನಲ್ಲಿರುವ ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ವಿದ್ಯಾರ್ಥಿನಿ ಹಂಸ (20) ಕೆಳಕ್ಕೆ ಬಿದ್ದು ಕಾಣೆಯಾಗಿದ್ದಳು. ಸಂಜೆಯಾದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಪಾಯಕ್ಕೆ ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗಿತ್ತು. ಒಂದು ಹಂತದಲ್ಲಿ ಹಂಸ ಸತ್ತೇ ಹೋಗಿದ್ದಾಳೆ ಎಂದು ಭಾವಿಸಲಾಗಿತ್ತು. ಆದರೆ, ಅದೃಷ್ಟವಶಾತ್​ ಹಂಸ ಬದುಕಿದ್ದಾಳೆ. ಕಲ್ಲುಬಂಡೆಗಳ ನಡುವೆ ಸಿಲುಕಿಕೊಂಡಿದ್ದ ಆಕೆಯನ್ನು ಇದೀಗ ರಕ್ಷಣೆ ಮಾಡಲಾಗಿದೆ.

ಗುಬ್ಬಿ ತಾಲೂಕಿನ ಶಿವಪುರದ ಸೋಮನಾಥ್ ಎಂಬವರ ಪುತ್ರಿ ಹಂಸ ಸ್ನೇಹಿತರೊಂದಿಗೆ ಮೈದಾಳ ಕೆರೆ ನೋಡಲು ತೆರಳಿದ್ದರು. ಈ ವೇಳೆ ಕೋಡಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದರು. ನೀರಿನಲ್ಲಿ ಜಾರಿ ಕಲ್ಲಿನ ಪೊಟರೆಯಲ್ಲಿ ಸಿಲುಕಿದ್ದರು. ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ನಿನ್ನೆ ಸಂಜೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು.

ರಾತ್ರಿಯಾದರೂ ಆಕೆ ಪತ್ತೆಯಾಗಲಿಲ್ಲ. ಕೆರೆ ಕೋಡಿ ನೀರನ್ನು ಬೇರೆಡೆಗೆ ಡೈವರ್ಟ್ ಮಾಡಿ ಕಾರ್ಯಾಚರಣೆ ನಡೆಸಲಾಗಿತ್ತು. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಕೊನೆಗೂ ಹಂಸ ಬದುಕುಳಿದಿದ್ದಾಳೆ. ಸಾವನ್ನೇ ಗೆದ್ದು ಬಂದಿದ್ದಾಳೆ. ಈ ಘಟನೆ ʼಮಂಜುಮ್ಮೇಲ್​ ಬಾಯ್ಸ್ʼ​ ಸಿನಿಮಾದ ರಕ್ಷಣಾ ಘಟನೆಯನ್ನು ನೆನಪಿಸುವಂತಿದೆ.

ಇದನ್ನೂ ಓದಿ: Viral Video : ಬಿಎಂಡಬ್ಲ್ಯು ಕಾರಿನಲ್ಲಿ ಬಂದು ಹೂವಿನ ಕುಂಡ ಕದ್ದು ಪರಾರಿಯಾದ ಮಹಿಳೆ; ವಿಡಿಯೊ ವೈರಲ್