ಡೆಹ್ರಾಡೂನ್: ಉತ್ತರಾಖಂಡ ಮದ್ರಸಾ ಶಿಕ್ಷಣ ಮಂಡಳಿ (UMEB) ರಾಜ್ಯದಾದ್ಯಂತ 416 ಮದರಸಾಗಳಲ್ಲಿ ಸಂಸ್ಕೃತವನ್ನು ಕಡ್ಡಾಯ(Sanskrit in Madrasa) ವಿಷಯವಾಗಿ ಪರಿಚಯಿಸಲು ಯೋಜಿಸುತ್ತಿದೆ, ಇದಕ್ಕಾಗಿ ಔಪಚಾರಿಕ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಈ ಹೊಸ ನೀತಿಯನ್ನು ಜಾರಿಗೊಳಿಸಲು, ಮಂಡಳಿಯು ರಾಜ್ಯದ ಸಂಸ್ಕೃತ ಇಲಾಖೆಯೊಂದಿಗೆ ಒಂಡಬಡಿಕೆಗೆ (MOU) ಸಹಿ ಹಾಕಲು ಉದ್ದೇಶಿಸಿದೆ. ಮದರಸಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯಕ್ರಮವನ್ನು ಉತ್ಕೃಷ್ಟಗೊಳಿಸಲು ಸಂಸ್ಕೃತದ ಜೊತೆಗೆ ಕಂಪ್ಯೂಟರ್ ಅಧ್ಯಯನವನ್ನು ಸೇರಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.
ಮಂಡಳಿಯು ಎನ್ಸಿಇಆರ್ಟಿ ಪಠ್ಯಕ್ರಮವನ್ನು ಮದರಸಾಗಳಲ್ಲಿ ಪರಿಚಯಿಸಿದೆ, ಇದರ ಪರಿಣಾಮವಾಗಿ ಈ ವರ್ಷ ವಿದ್ಯಾರ್ಥಿಗಳಿಗೆ ಶೇಕಡಾ 95 ರಷ್ಟು ಯಶಸ್ಸು ಸಿಕ್ಕಿದೆ ಎಂದು UMEB ಅಧ್ಯಕ್ಷ ಮುಫ್ತಿ ಶಾಮೂನ್ ಖಾಸ್ಮಿ ತಿಳಿಸಿದ್ದಾರೆ. ಸಂಸ್ಕೃತವನ್ನು ಪಠ್ಯಕ್ರಮಕ್ಕೆ ಸೇರಿಸುವುದರಿಂದ ಅವರ ಶೈಕ್ಷಣಿಕ ಬೆಳವಣಿಗೆಗೆ ಗಣನೀಯವಾಗಿ ಸಹಾಯವಾಗಲಿದೆ. ಈ ಉಪಕ್ರಮದ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ ಮತ್ತು ಸಂಸ್ಕೃತ ಇಲಾಖೆಯೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ವರದಿ ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಂಸ್ಕೃತ ಇಲಾಖೆಯ ಅಧಿಕಾರಿಗಳೊಂದಿಗೆ ಅನೇಕ ಸಭೆಗಳನ್ನು ನಡೆಸಲಾಗಿದೆ ಮತ್ತು ಶೀಘ್ರದಲ್ಲೇ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುವ ನಿರೀಕ್ಷೆ ಇದೆ ಎಂದು ಖಾಸ್ಮಿ ಭರವಸೆ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡ ಮದ್ರಸಾ ಶಿಕ್ಷಣ ಮಂಡಳಿಯು 416 ಮದರಸಾಗಳನ್ನು ನೋಂದಾಯಿಸಿದೆ, ಇದು ಒಟ್ಟಾರೆಯಾಗಿ 70,000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಇದಲ್ಲದೆ, ಹೆಚ್ಚುವರಿ ಮದರಸಾಗಳ ನೋಂದಣಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಮತ್ತು ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆಯು ಹೆಚ್ಚಾಗುವ ನಿರೀಕ್ಷೆಯಿದೆ.
ಸರ್ಕಾರವು ಅನುಮೋದನೆ ನೀಡಿದ ನಂತರ, ಈ ಮದರಸಾಗಳು ಹೊಸ ಪಠ್ಯಕ್ರಮವನ್ನು ಜಾರಿಗೆ ತರಲು ಸಂಸ್ಕೃತ ಶಿಕ್ಷಕರನ್ನು ನೇಮಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈಗಾಗಲೇ 100 ಕ್ಕೂ ಹೆಚ್ಚು ಮದರಸಾಗಳಲ್ಲಿ ಅರೇಬಿಕ್ ಕಲಿಸಲಾಗುತ್ತಿದೆ ಮತ್ತು ಸಂಸ್ಕೃತ ತರಗತಿಗಳನ್ನು ಶೀಘ್ರದಲ್ಲೇ ಪ್ರಾರಂಭಿಸಿದರೆ ಅದು ಸಂತೋಷದಾಯಕವಾಗಿರುತ್ತದೆ. ಮೌಲ್ವಿಗಳು ಮತ್ತು ಪಂಡಿತರು ಇಬ್ಬರೂ ಬೋಧನೆ ಮಾಡುವುದರಿಂದ ನಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಗಣನೀಯವಾಗಿ ಸಹಾಯವಾದಂತಾಗುತ್ತದೆ ಎಂದು ಖಾಸ್ಮಿ ತಿಳಿಸಿದ್ದಾರೆ.
ವಕ್ಫ್ ಮಂಡಳಿ ಅಧ್ಯಕ್ಷ ಶಾದಾಬ್ ಶಾಮ್ಸ್ ಪ್ರತಿಕ್ರಿಯಿಸಿದ್ದು, ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗಿರುವ ಎಲ್ಲಾ 117 ಮದರಸಾಗಳನ್ನು ಮಾದರಿ ಸಂಸ್ಥೆಗಳನ್ನಾಗಿ ಪರಿವರ್ತಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಮೂಡಿಸಲು ಮಾಜಿ ಸೈನಿಕರ ಸಹಾಯ ಕೇಳಿದ್ದೇವೆ. ಉತ್ತರಾಖಂಡದಲ್ಲಿ ಸುಮಾರು 1,000 ಮದರಸಾಗಳಿದ್ದು, ಹೆಚ್ಚಿನ ಮದರಸಾಗಳು ಮಂಡಳಿಯಲ್ಲಿ ನೋಂದಾಯಿಸಿಕೊಳ್ಳುವುದರಿಂದ, ಅವುಗಳನ್ನು ಮೇಲ್ದರ್ಜೆಗೆ ಏರಿಸುವ ಗುರಿಯನ್ನು ಹೊಂದಿರುವುದಾಗಿ ಶಮ್ಸ್ ಹೇಳಿದರು.
ಈ ಸುದ್ದಿಯನ್ನೂ ಓದಿ: Self Harming: ಮದರಸಾ ಹಾಸ್ಟೆಲ್ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ