ನೆಲಕ್ಕೆ ಚೆಲ್ಲಿ ಮಳೆಯಿಂದ ಹೂ ಗಳ ಬೆಲೆಯಲ್ಲಿ ಭಾರಿ ಕುಸಿತ!!
ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ : ರಾಜ್ಯದಲ್ಲಿಯೇ ಅತಿಹೆಚ್ಚು ಪುಷ್ಪಕೃಷಿಕರನ್ನು ಹೊಂದಿರುವ ಜಿಲ್ಲೆ ಎಂಬ ಅಬಿಧಾನಕ್ಕೆ ಪಾತ್ರ ವಾಗಿರುವ ಚಿಕ್ಕಬಳ್ಳಾಪುರದಲ್ಲಿ ಪುಷ್ಪಕೃಷಿಕ ಸಂಕಷ್ಟಕ್ಕೆ ಸಿಲುಕು ವಿಲಿವಿಲಿ ಒದ್ದಾಡುತ್ತಿದಾನೆ.

ಕಳೆದ ಮೂರುನಾಲ್ಕು ದಿನಗಳಿಂದ ಸುರಿಯತ್ತಿರುವ ನಿರಂತರ ಮಳೆಯಿಂದಾಗಿ ಹೂ ಬೆಳೆಗಾರ ಅಕ್ಷರಶ: ಸಂಕಷ್ಟಕ್ಕೆ ಒಳಗಾಗಿದ್ದು ಒಂದೆಡೆ ಬೆಳೆನಷ್ಟ ಮತ್ತೊಂದೆಡೆ ಬೆಲೆ ನಷ್ಟಕ್ಕೆ ತುತ್ತಾಗಿದ್ದು ತೋಟಗಾರಿಕೆ ಇಲಾಖೆಯ ನೆರವಿಗಾಗಿ ಕಾಯವಂತಾಗಿದೆ. ಪರಿತಪಿಸುವಂತೆ ಆಗಿದೆ.
ಹೌದು ಜಿಲ್ಲೆಯ ರೈತರು ನದಿನಾಲೆಗಳ ಆಸರೆಯಿಲ್ಲದ ನತದೃಷ್ಟರಾಗಿದ್ದರೂ ಹನಿ ನೀರಾವರಿ ನಂಬಿ ಬದುಕು ಕಟ್ಟಿಕೊಂಡಿದ್ದಾರೆ.ವಾಣಿಜ್ಯ ಬೆಳೆಗಳನ್ನು ನಂಬಿ ಜೀವನ ನಡೆಸುತ್ತಿರುವ ಇಲ್ಲಿನ ರೈತರು ಪುಷ್ಪ ಕೃಷಿಯಲ್ಲಿಯೂ ದಾರಿಕಂಡುಕೊAಡಿದ್ದಾರೆ.ಪರಿಣಾಮ ಪ್ಲೋರಿಕಲ್ಚರ್ ಇಲ್ಲಿ ನಾನಾ ರೂಪಗಳಲ್ಲಿ ಕಾಣಿಸಿಕೊಂಡಿದೆ. ಇಲ್ಲಿನ ಹೂ ಗಳಿಗೆ ರಾಜ್ಯವಷ್ಟೇ ಅಲ್ಲದೆ ಹೊರರಾಜ್ಯ ಹೊರದೇಶಗಳಲ್ಲಿಯೂ ಬೇಡಿಕೆಯಿದೆ.ಇದೇ ಕಾರಣಕ್ಕಾಗಿ ಇಲ್ಲಿ ರಾಜ್ಯದಲ್ಲಿಯೇ ದೊಡ್ಡ ಹೂವಿನ ಮಾರುಕಟ್ಟೆಇದ್ದು ದಿನಕ್ಕೆ ಲಕ್ಷಾಂತರ ರೂಪಾಯಿ ವಹಿವಾಟು ಆಗುತ್ತಿದೆ. ಆದರೆ ಆಷಾಡ ಮಾಸದಲ್ಲಿ ಧಾರ್ಮಿಕ ಆಚರಣೆಗಳು ಇಲ್ಲದ ಕಾರಣ ಬೆಲೆಯಿಳಿಕೆ ಕಂಡಿದ್ದ ಹೂವಿಗೆ ಕಳೆದ ಒಂದು ವಾರದಿಂದ ಉತ್ತಮ ಬೆಲೆಯಿದ್ದರೂ ಮಳೆ ಶನಿಯಂತೆ ಕಾಡುತ್ತಿದೆ.ಪರಿಣಾಮ ಒದ್ದೆ ಹೂವಿಗೆ ಬೆಲೆಯಿಲ್ಲದೆ, ತೋಟದಲ್ಲಿ ಹಾಗೆ ಬಿಡಲಾಗದೆ ರೈತರು ಕಷ್ಟಪಡುವಂತಾಗಿದೆ.
ನಗರ ಹೊರವಲಯದ ಹೂವಿನ ಮಾರುಕಟ್ಟೆಗೆ ಬರುವ ಯಾರಿಗೆ ಆಗಲಿ ಕೇಳುವವರಿಲ್ಲದ ಕಾರಣ ಕಷ್ಟಪಟ್ಟು ಬೆಳೆದ ರಾಶಿ ರಾಶಿ ಹೂಗಳನ್ನು ಬಿಸಾಡಿ ಕಣ್ಣೀರು ಹಾಕುತ್ತಾ ಸಾಗುತ್ತಿರುವ ರೈತರನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ತಮ್ಮ ತೋಟಗಳಲ್ಲಿ ಬೆಳೆದಿರುವ ಸೇವಂತಿ, ರೋಜಾ,ಚೆಂಡುಹೂವು. ಡೇರಾ,ಕಾಕಡ, ಗುಲಾಬಿ ಸೇರಿ ನಾನಾ ಬಗೆಯ ಹೂಗಳನ್ನು ಮಾರುಟ್ಟೆಗೆ ತರೋಣ, ಬಂದಷ್ಟು ಬರಲಿ ಎಂದು ತೋಟಗಳ ಕಡೆ ಹೋಗಲೂ ಬಿಡುವು ಕೊಡದಷ್ಟು ಮಳೆಯಾಗುತ್ತಿದೆ.ಹಾಗೂ ಹೀಗೂ ಕಷ್ಟಪಟ್ಟು ಹೂವು ಬಿಡಿಸಿ ಮಾರುಕಟ್ಟೆಗೆ ತಂದರೆ ಕೇಳುವವರೇ ಇಲ್ಲದ ಕಾರಣ ಬೇಸರದಲ್ಲಿ ನೆಲಕ್ಕೆ ಚೆಲ್ಲಿ ಹೋಗುತ್ತಿದ್ದಾರೆ. ಕಾರಣ ಒದ್ದೆಹೂಗಳನ್ನು ರಫ್ತು ಮಾಡಲು ಆಗುವುದಿಲ್ಲ.ಸ್ಥಳಿಯವಾಗಿ ಮಾರಲೂ ಆಗುವುದಿಲ್ಲ.ಇಟ್ಟಲ್ಲಿಯೇ ಹೂವು ತೇವದ ಕಾರಣ ಕೊಳೆಯುತ್ತದೆ.ಇದೇ ಕಾರಣ ರೈತ ಪರಿತಪಿಸುವಂತಾಗಿದೆ.
ವಾರದ ಹಿಂದೆ ಬಂದ ದಸರಾ ಹಬ್ಬದಲ್ಲಿ ಕೆ.ಜಿ ಹೂವಿಗೆ ಮುನ್ನೂರು ನಾಲ್ಕುನೂರು ರೂಪಾಯಿ ಬೆಲೆ ಇತ್ತು. ಈಗಲೂ ಮಾರುಕಟ್ಟೆಯಲ್ಲಿ ಹೂವಿಗೆ ಬೆಲೆ ಇದೆ.. ಆದ್ರೆ ಜಿಟಿ ಜಿಟಿ ಮಳೆರಾಯ ಹೂಗಳ ಬೆಲೆಗೆ ಕಡಿವಾಣ ಹಾಕಿದ್ದಾನೆ. ಹೂಗಳು ಮಳೆ ನೀರಿನಲ್ಲಿ ನೆಂದಿರುವ ಕಾರಣ ಯಾರೂ ಕೂಡ ಕೊಂಡುಕೊಳ್ತಿಲ್ಲ. ಬೇರೆ ಕಡೆ ಎಕ್ಸಪೋರ್ಟ ಕೂಡ ಆಗ್ತಿಲ್ಲ. ಹೀಗಾಗಿ ದೊಡ್ಡ ಮಾರುಕಟ್ಟೆಯಲ್ಲಿ ಹೂಗಳಿಗೆ ಬೆಲೆ ಇಲ್ಲದಂತಾಗಿದೆ ಎನ್ನುವುದು ರೈತ ರವೀಂದ್ರ ಅವರ ಮಾತು.
ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಹೂಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ, ಮಾರುಕಟ್ಟೆಗೆ ತಂದ ಹೂಗಳನ್ನು ಯಾರು ಕೊಂಡುಕೊಳ್ತಿಲ್ಲ. ಇದ್ರಿಂದ ಲೋಡ್ ಗಟ್ಟಲೆ ಹೂಗಳನ್ನು ಮಾರುಕಟ್ಟೆಯಲ್ಲಿ ಬಿಸಾಡಲಾಗ್ತಿದೆ. ಚೆಂಡೂ ಹೂ, ಸೇವಂತಿ ಹೂ, ಬಟನ್ಸ್ ಹೂಗಳು ತಿಪ್ಪೆ ಪಾಲಾಗಿವೆ. ಇದು ಮಾರುಕಟ್ಟೆಯ ಪರಿಸ್ಥಿತಿಯಾದರೆ ಇನ್ನೂ ಹೂದೋಟಗಳ ಪರಿಸ್ಥಿತಿ ಇನ್ನೂ ವಿಚಿತ್ರವಾಗಿದೆ. ನಿರಂತರ ಮಳೆಗೆ ಸಿಕ್ಕಿ ಹೂಗಳು, ಎಲೆಗಳು ಉದುರುವಂತಾಗಿದೆ. ಪಾತಿಯ ತುಂಬ ನೀರು ನಿಂತ ಪರಿಣಾಮ ಗಿಡಕೊಳೆಯುತ್ತದೆ. ಒಳ್ಳೆಯ ಬೆಲೆಯಿರುವ ಕಾಲದಲ್ಲಿ ಮಳೆ ನಮ್ಮ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ.ನಮ್ಮ ಸ್ಥಿತಿ ಸದ್ಯ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬತಾAಗಿದೆ ಎಂಬುದು ರೈತ ವೆಂಕಟಚಲಪತಿ ಮಾತಾಗಿದೆ. ಒಟ್ಟಿನಲ್ಲಿ ಜಿಲ್ಲೆಯ ರೈತರ ಪಾಲಿಗೆ ನಿರಂತರ ಮಳೆ ಲಾಭಕ್ಕಿಂತ ನಷ್ಟವನ್ನು ತಂದಿರುವುದು ವಿಚಿತ್ರವಾದರೂ ಸತ್ಯ.