ಜಿತೇಂದ್ರ ಕುಂದೇಶ್ವರ ಮಂಗಳೂರು
ಕೋರ್ಟ್ ವಿಚಾರಣೆ ನಡೆಯುತ್ತಿದ್ದರೂ ಗ್ರಾಮಾಂತರ ಪೊಲೀಸರ ದೃಢೀಕರಣ
ಪೊಲೀಸ್ ಠಾಣೆಗೆ ಮಾಹಿತಿ ಇಲ್ಲದಿರುವುದು ಅಚ್ಚರಿಗೆ ಕಾರಣ
ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವಂತೆಯೇ ಮಾನಭಂಗ ಯತ್ನ ಆರೋಪಿಗಳಿಗೆ ಗ್ರಾಮಾಂತರ ಪೊಲೀಸರು ಯಾವುದೇ ಕೇಸ್ ಇಲ್ಲ ಎಂದು ಪಾಸ್ಪೋರ್ಟ್ ಸಿಗುವಂತೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಬಾಂಗ್ಲಾ ವಲಸಿಗರಿಗೆ ಪಾಸ್ ಪೋರ್ಟ್ ನೀಡಿದ ಪ್ರಕರಣ ಬೆಳಕಿಗೆ ಬರುತ್ತಿರುವ ಸಂದರ್ಭದಲ್ಲಿ ಕ್ರಿಮಿನಲ್ಗಳಿಗೆ ಪಾಸ್ ಪೋರ್ಟ್ ಸಿಗುವಂತೆ ಮಾಡುವಲ್ಲಿ ಪೊಲೀಸರು ಶಾಮೀಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.
2023ರ ಮೇ 13ರಂದು ಕುಲಶೇಖರ ಬಳಿ ಸಿದ್ದಿಕಿ ಮತ್ತು ನಾಲ್ವರ ವಿರುದ್ಧ ಮಾನಭಂಗ ಯತ್ನ ಪ್ರಕರಣ ಕದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆದರೆ 2024ರ ಫೆಬ್ರವರಿ ವೇಳೆಗೆ ಮೊದಲನೇ ಆರೋಪಿ ಸಿದ್ದಿಕಿ ಮತ್ತು ನಾಲ್ಕನೇ ಆರೋಪಿಗೆ ಪಾಸ್ಪೋರ್ಟ್ ಮಂಜೂರಾಗಿದೆ.
ಆರೋಪಿಗಳು ಯಾರೂ ತಮ್ಮ ಹೆಸರು ಊರು ಬದಲಾಯಿಸಿ ಪಾಸ್ಪೋರ್ಟ್ಗೆ ಅರ್ಜಿ ನೀಡಿರಲಿಲ್ಲ. ಎಲ್ಲ ಗೊತ್ತಿದ್ದೇ ಗ್ರಾಮಾಂತರ ಪೊಲೀಸರು ಮಾಡಿ ಯಾವುದೇ ಪ್ರಕರಣ ಇಲ್ಲ ಎಂದು ಪಾಸ್ಪೋರ್ಟ್ ಅಧಿಕಾರಿಗಳಿಗೆ ದೃಢೀಕರಣ ವರದಿ ನೀಡಿದ್ದಾರೆ. ಈ ಆರೋಪಿಗಳ ವಿರುದ್ಧ ಮಂಗಳೂರಿನ ಜೆಎಂಎಫ್ ಸಿ 6 ಕೋರ್ಟ್ನಲ್ಲಿ ವಿಚಾರಣೆ ಆರಂಭವಾಗಿತ್ತು. ಕದ್ರಿ ಠಾಣೆಯಲ್ಲಿ ದಾಖಲಾದ ಪ್ರಕರಣ ಪಕ್ಕದ ಗ್ರಾಮಾಂತರ ಪೊಲೀಸ್ ಠಾಣೆ ಯವರಿಗೆ ಮಾಹಿತಿ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.
ಇ-ಕೋರ್ಟ್ ಸರ್ವಿಸ್ ನೋಡಿದ್ದರು!: ಅರ್ಜಿದಾರರ ಪಾಸ್ ಪೋರ್ಟ್ ದೃಢೀಕರಣ ವೇಳೆಗೆ ಯಾವುದಾದರೂ ಪ್ರಕರಣ ಇದ್ದರೆ ಅದನ್ನು ಪತ್ತೆ ಹಚ್ಚಲು ಅನುಕೂಲವಾಗುವ ವ್ಯವಸ್ಥೆ ಪೊಲೀಸರಲ್ಲಿದೆ. ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇದ್ದರೆ ಇ-ಕೋರ್ಟ್ ಸರ್ವೀಸ್ ಆಪ್ ತೆರೆದು ನೋಡಿದರೆ ಕೇಸ್ನ ಎಲ್ಲ ಹಂತದ ವಿವರಗಳು ಇರುತ್ತವೆ. ಸಂತ್ರಸ್ತರು ದೂರುಕೊಡಲು ಬಂದಾಗ ಎ-ಐಆರ್ ಹಾಕುವ ಮುನ್ನ ಸಾವಿರ ದಾಖಲೆ, ಸಾಕ್ಷ್ಯಾಧಾರ ಪರಿಶೀಲಿಸುವ ಮಂಗಳೂರಿನ ಪೊಲೀಸರಿಗೆ ಪಾಸ್ ಪೋರ್ಟ್ ವೆರಿಫಿಕೇಶನ್ ಮಾಡುವ ಕ್ರಮ ಕಲಿಸಿಕೊಡುವ ಅಗತ್ಯ ಇಲ್ಲ.
ಅಕ್ರಮ ತನಿಖೆ ಯಾವಾಗ?: ಗ್ರಾಮಾಂತರ ಇನ್ಸ್ಪೆಕ್ಟರ್ ಯಾವುದೇ ಪ್ರಕರಣ ಇಲ್ಲ ಎಂದು ದೃಢೀಕರಿಸಿ ಸಹಿ ಹಾಕಿದ್ದಾರೆ. ಕೆಳಹಂತದ ಅಧಿಕಾರಿಗಳ ಎಡವಟ್ಟಿಗೆ ಮೇಲಧಿಕಾರಿಗಳೂ ಮುದ್ರೆ ಒತ್ತಿದ್ದಾರೆ. ಪಾಸ್ಪೋರ್ಟ್ ಪಡೆದ ಬಳಿಕ ಇಬ್ಬರೂ ಆರೋಪಿ ಗಳು ವಿದೇಶಯಾತ್ರೆ ಸಹ ಮಾಡಿ ಬಂದಿದ್ದಾರೆ. ಜನಸಾಮಾನ್ಯರು ಪಾಸ್ಪೋರ್ಟ್ ಮಾಡಲು ಪಡಿಪಾಟಲು ಪಡೆಯುವ ಹೊತ್ತಿನಲ್ಲಿ ಆರೋಪಿಗಳು ಪ್ರಭಾವ ಬಳಸಿ ಪಾಸ್ಪೋರ್ಟ್ ಮಾಡಿಸಿಕೊಂಡಿ ರುವುದು ಆತಂಕಕ್ಕೆ ಎಡೆಮಾಡಿದೆ. ಈ ಬಗ್ಗೆ ಪೊಲೀಸ್ ಲಾಖೆ ತನಿಖೆ ನಡೆಸಿದರೆ ಇದರ ಹೂರಣ ಬಹಿರಂಗ ವಾಗಬಹುದು.
ಕರಾವಳಿಯಲ್ಲಿ ನಕಲಿ ಪಾಸ್ಪೋರ್ಟ್ ದಂಧೆ
ನಕಲಿ ದಾಖಲೆ ನೀಡಿ ಪಾಸ್ಪೋರ್ಟ್ ಮಾಡಿಸಿ ದುಬೈಗೆ ವಿಮಾನದಲ್ಲಿ ಪ್ರಯಾಣಿಸಲು ಯತ್ನಿಸಿದ ಬಾಂಗ್ಲಾದೇಶದ ಪ್ರಜೆ ಮಾಣಿಕ್ ಹುಸೈನ್ನನ್ನು ಬಂಧಿಸಿದ ಪ್ರಕರಣದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದ ಸಿಬ್ಬಂದಿಯ ಸಮಯಪ್ರಜ್ಞೆ ಕಾರಣವಾಗಿದೆ. ಆರೋಪಿ ಇಮಿಗ್ರೇಶನ್ ಕೌಂಟರ್ನಲ್ಲಿ ಪಾಸ್ ಪೋರ್ಟ್ ಹಾಗೂ ಇತರ ದಾಖಲೆಗಳನ್ನು ಹಾಜರುಪಡಿಸಿದಾಗ ಅಲ್ಲಿದ್ದ ಅಧಿಕಾರಿ ಕೆ.ಸಿ.ಸರಸ್ವತಿ ಪಾಸ್ ಪೋರ್ಟ್ ಮತ್ತು ದಾಖಲೆ ಪರಿಶೀಲನೆ ವೇಳೆ ಸಂಶಯದಿಂದ ಆರೋಪಿಯನ್ನು ವಿಚಾರಣೆ ಮಾಡಿದಾಗ ಬಾಂಗ್ಲಾದೇಶದ ಪ್ರಜೆ ಎನ್ನುವುದು ಖಚಿತವಾಯಿತು. ಉಡುಪಿಯಲ್ಲಿ ಭಾರತೀಯ ನಿವಾಸಿ ಪರ್ವೇಝ್ ಎಂಬಾತನ ಮೂಲಕ ಪಾಸ್ ಪೋರ್ಟ್ ಮಾಡಿಸಿರುವುದು ಬೆಳಕಿಗೆ ಬಂದಿದೆ. ಇದೇ ರೀತಿ ಹಲವು ವಿದೇಶಿಯರಿಗೂ ಪಾಸ್ ಪೋರ್ಟ್ ಮಾಡಿಸಿ ರುವುದು ಆತಂಕಕ್ಕೆ ಕಾರಣವಾಗಿದೆ.
ಅನುಮತಿ ಪಡೆಯದಿದ್ದರೆ ಅಪರಾಧ: ಡಿಸಿಪಿ ಸಿದ್ಧಾರ್ಥ್
ಕೇಸ್ ಇದ್ದರೆ ಕೋರ್ಟ್ ಅನುಮತಿ ಪಡೆದು ಪಾಸ್ಪೋರ್ಟ್ ಮಾಡಿಸಿ ವಿದೇಶಕ್ಕೂ ಹೋಗಬಹುದು. ಈ ಪ್ರಕರಣ ದಲ್ಲಿ ಕೋರ್ಟ್ ಅನುಮತಿ ಪಡೆಯಲಾಗಿದೆಯೇ, ಪಾಸ್ಪೋಟ್ ನಲ್ಲಿ ಕ್ರಿಮಿನಲ್ ಪ್ರಕರಣದ ಉಲ್ಲೇಖ ಇದೆಯೇ ಎಂದು ಪರಿಶೀಲನೆ ಮಾಡಬೇಕು. ಅನುಮತಿ ಪಡೆಯದೆ ಪಾಸ್ ಪೋರ್ಟ್ ಮಾಡಿಸಿದ್ದರೆ ಅದು ಅಪರಾಧ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಸಿದ್ಧಾರ್ಥ್ ವಿಶ್ವವಾಣಿಗೆ ಸ್ಪಷ್ಟಪಡಿಸಿದ್ದಾರೆ.
ಉಗ್ರನಿಗೂ ಪಾಸ್ಪೋರ್ಟ್!
ಹೈದರಾಬಾದ್ನಲ್ಲಿ ಹತ್ತು ವರ್ಷದ ಹಿಂದೆ ನಡೆದ ಸ್ಪೋಟ ಪ್ರಕರಣದ ಉಗ್ರನಿಗೆ ಮಂಗಳೂರಿಂದ ಪಾಸ್ಪೋರ್ಟ್ ಮಾಡಿಸಲಾಗಿತ್ತು. ಆಗ ಕದ್ರಿ (ಪೂರ್ವ) ಪೊಲೀಸರು ಹೆಸರು ವಿಳಾಸ ವಿಚಾರಣೆ ಮಾಡದೆ ಪಾಸ್ಪೋರ್ಟ್ ದೃಢೀಕರಿಸಿದ್ದರು. ತನಿಖೆ ಬಳಿಕ ಕರ್ತವ್ಯ ಲೋಪ ಎಸಗಿದ ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು.
ಇದನ್ನೂ ಓದಿ: Mangalore News: ಮಸೀದಿ ಮೇಲೆ ಕಲ್ಲು ತೂರಾಟ, ಸುರತ್ಕಲ್ನಲ್ಲಿ ಆತಂಕ