Wednesday, 14th May 2025

ಉಂಚಳ್ಳಿಯ ಸಿಂಚನ

ಮಲ್ಲಪ್ಪ ಫ ಕರೇಣ್ಣನವರ, ಹನುಮಾಪುರ, ರಾಣೇಬೆನ್ನೂರ

ಕಳೆದ ಜೂನ್ ಮೊದಲ ವಾರದಿಂದ ಶಾಲೆಗಳಿಗೆ ತೆರಳಿ ಶಾಲೆಯ ಕಾರ್ಯಗಳನ್ನು ಮಾಡುತ್ತಾ ಸಾಗುತ್ತಿದ್ದೇವೆ. ಮಕ್ಕಳು ಕಲಿಕೆ ಯಿಂದ ವಿಮುಖರಾಗಬಾರದು, ಅವರು ಅಕ್ಷರಾಭ್ಯಾಸದಿಂದ ವಂಚಿತರಾಗಬಾರದೆಂದು ವಠಾರ ಶಾಲೆಗಳಿಗೆ ಹೋಗಿ ಪಾಠ
ಮಾಡುತ್ತಾ ಇದ್ದೇವೆ. ಈ ನಡುವಿನ ಅವಧಿಯಲ್ಲಿ , ನಮ್ಮ ಹತ್ತಿರದ ಕೆಲವರಿಗೆ ಕೋವಿಡ್-19 ಬಂದಾಗ ಅವರಲ್ಲಿ ಕೆಲವರು ನಮ್ಮನ್ನಗಲಿದಾಗ ಮನಸ್ಸು ಜರ್ಜರಿತರಾಗಿದ್ದುಂಟು!

ಇಂತಹ ನೋವು ಸಂಕಷ್ಟ ಸಮಯದಲ್ಲಿ, ಮನಸ್ಸಿನ ಪುನಶ್ಚೇತನದ ಸಲುವಾಗಿ, ಕಹಿ ಘಟನೆಗಳನ್ನು ಮರೆಯುವ ಸಂಬಂಧ ಗೆಳೆಯನೊಂದಿಗೆ ಪ್ರವಾಸ ಹೋಗಲು ನಿರ್ಧರಿಸಿದೆ. ಆದರೆ ಏರುಗತಿಯಲ್ಲಿ ಸಾಗುತ್ತಿರುವ ಕೋರೊನಾ ಸೋಂಕಿಗೆ ಹೆದರಿ ಪ್ರವಾಸ ವನ್ನು ಮುಂದೂಡಿದ್ದೆವು. ಈಗ ಶಿಕ್ಷಣ ಇಲಾಖೆ ರಜೆ ಘೋಷಣೆ ಮಾಡಿದ್ದರಿಂದ ಬಹುದಿನದ ಬಯಕೆಯಾದ ಪ್ರವಾಸಕ್ಕೆ ಹೋಗಲು ನನ್ನ ಆತ್ಮೀಯ ಗೆಳೆಯನೊಂದಿಗೆ ಸ್ಥಳವನ್ನು ನಿರ್ಧಾರ ಮಾಡಿದೆವು.

ಮಲೆನಾಡಿನ ದಟ್ಟ ಕಾನನದಲ್ಲಿ ಹಸಿರು ಹೊದ್ದು ಮಲಗಿರುವ ಪಶ್ಚಿಮ ಘಟ್ಟದಲ್ಲಿ ಪ್ರವಾಸ ಮಾಡಲು ಅನುಕೂಲಕರವಾದ ಶಿರ್ಶಿಯ ಮಾರಿಕಾಂಬೆ ದೇವಸ್ಥಾನ, ಉಂಚಳ್ಳಿ ಜಲಪಾತ, ಬನವಾಸಿ ಮುಂತಾದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡೆವು. ನಾನು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಿಂದ ನೂರೈವತ್ತು – ಎರಡುನೂರು ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳಗಳನ್ನು ನನ್ನ ಬೈಕಿನಲ್ಲಿ ನೋಡಲು ಹೋಗುವುದೆಂದು ತೀರ್ಮಾನಿಸಿದ್ದೇವೆ. ಆ ದಟ್ಟ ಕಾನನದಿ ಧುಮ್ಮುಕ್ಕುವ ಜಲರಾಶಿಯ ವೈಭವ ನೋಡಲು, ನೂರಾರು ಮೆಟ್ಟಿಲುಗಳನ್ನು ಇಳಿಯುವಾಗಿನ ಖುಷಿ, ಮೇಲಿನಿಂದ ಬೀಳುವ ಆ ಜಲರಾಶಿಯು ಸೃಷ್ಟಿಸುವ ಮುಸುಕು ಫಾಗ್ ನೋಡೀದೆ ಕಣ್ಣಿಗೊಂದು ಹಬ್ಬವೆಂದು ಗೆಳೆಯರು ಹೇಳುವಾಗ ನಾನು ಆ ಜಲಪಾತವನ್ನು ನೋಡಲೇಬೇಕೆಂಬ ಹೆಬ್ಬಯಕೆ ಇಮ್ಮಡಿಯಾಗಿದೆ.

ಸಾಮಾಜಿಕ ಅಂತರ ಇನ್ನಿತರ ಎಚ್ಚರಿಕೆಯ ಸಂದೇಶಗಳನ್ನು ಪಾಲಿಸಬೇಕೆಂದು ನಿರ್ಧಾರ ಮಾಡಿಕೊಂಡೆವು. ಮಧ್ಯಾಹ್ನ ಹನ್ನೆರಡು ಗಂಟೆಗೆ ನಾವು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಿಂದ ಬೈಕಿನಲ್ಲಿ ಹೊರಟರೆ, ಸಾಯಂಕಾಲದ ವೇಳೆಗೆ ಶಿರಸಿ ತಲುಪುವುದು. ದೇವಿಯ ದರ್ಶನ ಆ ದಿನ ಅಲ್ಲೇ ವಿಶ್ರಾಂತಿ ಮಾಡಿ ಮರುದಿನ ಅಲ್ಲಿಂದ ಮೂವತ್ತು ಕಿಲೋಮೀಟರ್  ದೂರ ದಲ್ಲಿರುವ ಉಂಚಳ್ಳಿ ಜಲಪಾತ ನೋಡುವುದು, ತೊರೆಗಳಲ್ಲಿ ಮಿಂದೇಳುವುದು, ಹೀಗೆ ಹಲವು ಕನಸುಗಳು ಮನದಲ್ಲಿವೆ.

ಈ ತಿಂಗಳಿನ ಒಳಗೆ ಉಂಚಳ್ಳಿ ನೋಡುವ ಆಸೆ ಉತ್ಕಟವಾಗಿದೆ.

Leave a Reply

Your email address will not be published. Required fields are marked *