Monday, 12th May 2025

# Paru Parvathy Movie: ʼಬಿಗ್‌ ಬಾಸ್‌ʼ ದೀಪಿಕಾ ದಾಸ್‌ ಅಭಿನಯದ ʼ# ಪಾರು ಪಾರ್ವತಿʼ ಚಿತ್ರದ ಹಾಡು ಔಟ್‌

#Paru Parvathy Movie

ಬೆಂಗಳೂರು: ಪಿ.ಬಿ.ಪ್ರೇಂನಾಥ್ ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದ ʼಬಿಗ್ ಬಾಸ್ʼ ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ ʼ# ಪಾರು ಪಾರ್ವತಿʼ ಚಿತ್ರ (# Paru Parvathy Movie)ದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. ಲಹರಿ ವೇಲು (Lahari Velu) ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

”ಕೆಲವು ದಿನಗಳ ಹಿಂದೆ ಈ ಚಿತ್ರತಂಡದವರು ನನ್ನನ್ನು ಭೇಟಿಯಾಗಿ, ಹಾಡುಗಳನ್ನು ಕೇಳಿಸಿದರು. ಆರ್. ಹರಿ ಸಂಗೀತ ಸಂಯೋಜಿಸಿರುವ ಎಲ್ಲ ಹಾಡುಗಳು ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ” ಎಂದು ಲಹರಿ ವೇಲು ಹಾರೈಸಿದರು.

ʼʼನಾನು ಮೊದಲೇ ತಿಳಿಸಿದ ಹಾಗೆ ಪಿ.ವಾಸು, ಎಂ.ಮನೋನ್, ಅರವಿಂದ್ ಶಾಸ್ತ್ರಿ, ಸಿಂಪಲ್ ಸುನಿ ಮುಂತಾದ ನಿರ್ದೇಶಕರ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವಿದೆ‌‌. ನಾನು ಸ್ವತಂತ್ರವಾಗಿ ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದು. ಅವಕಾಶ ನೀಡಿದ ಪ್ರೇಂನಾಥ್ ಅವರಿಗೆ ಧನ್ಯವಾದ. ಇದೊಂದು ಟ್ರಾವೆಲ್, ಅಡ್ವೆಂಚರ್ ಡ್ರಾಮ ಜಾನರ್‌ನ ಚಿತ್ರ. ಇದರಲ್ಲಿ ಹಾಡುಗಳು ಪ್ರಮುಖ ಪಾತ್ರವಹಿಸಿದೆ. ಆರ್. ಹರಿ ಸಂಗೀತ ಸಂಯೋಜಿಸಿರುವ ಐದು ಹಾಡುಗಳು ಹಾಗೂ ನಾಲ್ಕು ಬಿಟ್‌ಗಳು ಚಿತ್ರದಲ್ಲಿದೆ. ಆದರೆ ಜ್ಯೂಕ್ ಬಾಕ್ಸ್‌ನಲ್ಲಿ ಹನ್ನೆರಡು ಹಾಡುಗಳು ಬಿಡುಗಡೆಯಾಗಿದೆ. ನಾಗಾರ್ಜುನ್ ಶರ್ಮಾ ಅವರು ಐದು ಹಾಡುಗಳನ್ನು ಬರೆದಿದ್ದಾರೆ. ಜೆಸ್ಸಿ ಗಿಫ್ಟ್, ವಿಜಯ್ ಜೇಸುದಾಸ್,‌ ಆಂಟೋನಿ ಮ್ಯಕಿಯಾನ್ (ಐರೀಶ್ ಗಾಯಕ), ಔರಾ, ಎಂ.ಸಿ.ಬಿಜ್ಜು, ಚೇತನ್ ನಾಯಕ್, ದಿಯಾ ಹೆಗ್ಡೆ ಸೇರಿದಂತೆ ಹದಿಮೂರು ಜನ ಗಾಯಕರು ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಎಂ.ಆರ್.ಟಿ ಮ್ಯೂಸಿಕ್ ಮೂಲಕ ನಮ್ಮ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆʼʼ ಎಂದು ನಿರ್ದೇಶಕ ರೋಹಿತ್ ಕೀರ್ತಿ ತಿಳಿಸಿದರು.

ʼʼಪ್ರವಾಸ ಕಥನ. ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರಾಖಂಡದಲ್ಲಿ ಚಿತ್ರೀಕರಣ ನಡೆದಿದೆ. ಮೂರು ಮುಖ್ಯ ಪಾತ್ರಗಳ ಸುತ್ತ ಸಿನಿಮಾ ಕಥೆ ಸಾಗುತ್ತದೆ. ಪಾಯಲ್ ಎಂಬ ಪಾತ್ರದಲ್ಲಿ ದೀಪಿಕಾ ದಾಸ್ ಕಾಣಿಸಿಕೊಂಡಿದ್ದಾರೆ. ನಿಜಜೀವನದಲ್ಲೂ ಅಡ್ವೆಂಚರ್ಸ್ ಹಾಗೂ ಟ್ರಾವೆಲ್‌ನಲ್ಲಿ ಆಸಕ್ತಿಯಿರುವ ದೀಪಿಕಾ ದಾಸ್ ಅವರಿಗೆ ಇದು ಹೇಳಿ ಮಾಡಿಸಿದ ಪಾತ್ರ. ಈವರೆಗೂ ನೀವು ನೋಡಿರದ ದೀಪಿಕಾ ದಾಸ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಇನ್ನೆರಡು ಪ್ರಮುಖ ಪಾತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಚಿತ್ರೀಕರಣ ಮುಗಿಸಿರುವ ನಮ್ಮ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆʼʼ ಎಂದು ಅವರು ಮಾಹಿತಿ ನೀಡಿದರು.

ʼʼಇದೊಂದು ಪ್ರಯಾಣ ಹಾಗೂ ಅಡ್ವೆಂಚರ್ಸ್ ಕಥೆ ಹೊಂದಿರುವ ಸಿನಿಮಾ. ಈ ಚಿತ್ರದಲ್ಲಿ ನಟಿಸಿದ್ದು ಖುಷಿಯಾಗಿದೆ. ಇಂದು ಹಾಡುಗಳ ಮೂಲಕ ನಮ್ಮ ಚಿತ್ರ ಜನರನ್ನು ತಲುಪುತ್ತಿದೆʼʼ ಎಂದು ದೀಪಿಕಾ ದಾಸ್ ಸಂತಸ ವ್ಯಕ್ತಪಡಿಸಿದರು.

ʼʼಇದು ನಾನು ನಟಿಸಿರುವ ಮೊದಲ ದಕ್ಷಿಣ ಭಾರತದ ಚಿತ್ರʼʼ ಎಂದರು ನಟಿ ಪೂನಂ ಸರ್ ನಾಯಕ್. ʼʼನನ್ನ ಪಾತ್ರ ಕೂಡ ಚೆನ್ನಾಗಿದೆʼʼ ಎಂದು ಕೇರಳ ಮೂಲದ ನಟ ಫವಾಝ್ ಅಶ್ರಫ್ ಹೇಳಿದರು‌. ನಿರ್ಮಾಪಕ ಪಿ.ಬಿ.ಪ್ರೇಂನಾಥ್, ಛಾಯಾಗ್ರಾಹಕ ಅಬಿನ್ ರಾಜೇಶ್, ಸಂಗೀತ ನಿರ್ದೇಶಕ ಆರ್. ಹರಿ, ಸಂಕಲನಕಾರ ಸಿ.ಕೆ.ಕುಮಾರ್, ಗೀತರಚನೆಕಾರ ನಾಗಾರ್ಜುನ್ ಶರ್ಮಾ, ಗಾಯಕರಾದ ಚೇತನ್ ನಾಯಕ್, ಔರಾ, ಎಂ.ಸಿ.ಬಿಜ್ಜು, ಆಂಟೋನಿ ಮ್ಯಕಿಯಾನ್, ಚೇತನ್ ನಾಯಕ್ ಹಾಗೂ ಕಲಾ ನಿರ್ದೇಶಕ ರಾಘು ಮೈಸೂರು ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ: Deepika Das: ನಾಗಿನಿ ದೀಪಿಕಾ ದಾಸ್‌ ಈಗ ʼಪಾರು ಪಾರ್ವತಿʼ; ಚಿತ್ರಕ್ಕಾಗಿ 10 ಕೆಜಿ ತೂಕ ಇಳಿಸಿದ ಬಿಗ್‌ಬಾಸ್‌ ಚೆಲುವೆ