Tuesday, 13th May 2025

ಲಕ್ಷ್ಮೀ ಯಾಕೆ ಚಂಚಲೆ ಗೊತ್ತಾ ?

ಸುಧಕ್ಕನ ಕಥೆಗಳು

ಸುಧಾಮೂರ್ತಿ

ಇಂದು ಅಜ್ಜಿಯ ಮನೆಯಲ್ಲಿ ಮೇಜವಾನಿ. ವಿಷ್ಣು ಕಾಕಾನ ಮೊಮ್ಮಕ್ಕಳು ಇವರೊಡನೆ ಸೇರಿದ್ದಾರೆ. ಅಜ್ಜಿ ಉತ್ತರ ಕರ್ನಾಟಕದ ಸ್ಪೆಷಲ್ ಪೂರಿ, ಶ್ರೀಖಂಡ ಮಾಡಿದ್ದಾಳೆ. ಬೆಂಗಳೂರು, ದಿಲ್ಲಿಯಲ್ಲಿ ಬೆಳೆದ ಮಕ್ಕಳಿಗೆ ಶ್ರೀಖಂಡ ಎಂದರೇನು ಗೊತ್ತಿಲ್ಲ.

ಗಟ್ಟಿಯಾದ ನೀರುತಗೆದ ಮೊಸರಿಗೆ ಸಕ್ಕರೆ, ಗೋಡಂಬಿ ಹಾಕಿ ಮಾಡಿದ ಸಿಹಿ ತಿಂಡಿ. ಮಕ್ಕಳು ಊಟಕ್ಕೆ ಕುಳಿತಾಗ ಯಾವ ಸಿಹಿ ತಿಂಡಿ ಒಳ್ಳೆಯವು ಎಂದು ಗಲಾಟೆ ಮಾಡುತ್ತಿದ್ದರು. ‘ಬಾಸುಂದಿನೇ ನಂ.1’ ಎಂದಳು ಕೃಷ್ಣಾ. ‘ಅಲ್ಲ ಗುಲಾಬ್ ಜಾಮೂನ್’ ಎಂದಳು ಅನುಷ್ಕಾ. ‘ಇಲ್ಲ ಜಿಲೇಬಿ’ ಎಂದಳು ದಿವ್ಯ. ‘ಅಲ್ಲವೇ ಅಲ್ಲ ಒಬ್ಬಟ್ಟು’ ಎಂದ ರಘು.

‘ಮಕ್ಕಳೇ ಸುಮ್ಮನೆ ಗಲಾಟೆ ಮಾಡಬೇಡಿ’ ಎಂದರು ಅಜ್ಜ.  ‘ಅಯ್ಯೋ ದೇವರ ಸಭೆಯಲ್ಲಿಯೇ ಗಲಾಟೆ ಮಾಡ್ತಾರೆ. ಇನ್ನು ಮಕ್ಕಳದ್ದು ಏನು? ಎಂದಳು ಅಜ್ಜಿ. ‘ಅದೇನು ದೇವರಸಭೆಯಲ್ಲಿಯ ಗಲಾಟೆ?’ ಎಂದು ಅಜ್ಜಿ ಕೃಷ್ಣಾ ಅಜ್ಜಿಯ ಹಿಂದೆ ಬಿದ್ದಳು.
‘ನೀವೆಲ್ಲರೂ ಈಗ ಊಟ ಮುಗಿಸಿರಿ. ನಂತರ ಆ ಕಥೆ ಹೇಳ್ತೀನಿ’ ಎಂದಳು ಅಜ್ಜಿ ನಗುತ್ತ. ನಾವೆಲ್ಲ ಈಗ ಪೂರಿ, ಶ್ರೀಖಂಡ ತಿಂದು
ನೆಮ್ಮದಿಯಾಗಿ ಅಜ್ಜಿಯ ಜತೆ ಹೊಸಕಥೆ ಕೇಳೋಣವೇ? ಹಿಂದೆ ಒಂದಾನೊಂದು ಕಾಲದಲ್ಲಿ ದೇವಸಭೆಯಲ್ಲಿ ಎಲ್ಲ ದೇವರು ಲಕ್ಷ್ಮೀದೇವಿಯ ಬಗ್ಗೆ ಮಾತಾಡಿ ಗಲಾಟೆ ಮಾಡ್ತಿದ್ದರು.

‘ಲಕ್ಷ್ಮೀ ಮಹಾ ಚಂಚಲೆ. ಯಾರ ಮನೇಲಿ ಕಾಯಂ ಇರೋದಿಲ್ಲ. ಅದರಿಂದ ಅವಳ ಭಕ್ತರಿಗೆ ಎಷ್ಟು ತೊಂದರೆ ಆಗ್ತದೆ’ ಎಂದು ಎಲ್ಲರೂ ಅವಳಿಗೆ ಹೇಳಿದರು. ‘ಯಾರ ಮನೆಯಲ್ಲಿ ನನಗೆ ಮರ್ಯಾದೆ ಇದೆ. ಯಾರು ನನ್ನನ್ನು ಆದರದಿಂದ ಕಾಣ್ತಾರೆ, ಯಾರು
ಕಷ್ಟಪಟ್ಟು ಕೆಲಸ ಮಾಡ್ತಾರೆ, ಅಂಥವರ ಮನೇಲಿ ಮಾತ್ರ ನಾನು ಇರ್ತೀನಿ’ ‘ನಾವು ನಂಬೋದಿಲ್ಲ’ ಎಂದರು ಉಳಿದ
ದೇವತೆಗಳು.

‘ಬನ್ನಿ ನಾನು ಬೇಕಾದರೆ ತೋರಿಸ್ತೀನಿ. ನಾವೆಲ್ಲ ಈಗ ಭೂಲೋಕಕ್ಕೆ ಹೋಗೋಣ’ ಎಂದಳು ನಸುನಗುತ್ತಾ.

***
ಒಂದು ಊರಿನಲ್ಲಿ ರಾಮು ಮತ್ತು ಅವನ ಹೆಂಡತಿ ರಾಣಿ ವಾಸವಾಗಿದ್ದರು. ರಾಮು ರೈತ. ಬಹಳ ಕಷ್ಟಪಟ್ಟು ಹೊಲದಲ್ಲಿ ಕೆಲಸ ಮಾಡುತ್ತಿದ್ದ. ರಾಣಿ ಅವನಿಗೆ ತಕ್ಕ ಹೆಂಡತಿ. ಇಬ್ಬರೂ ತಮ್ಮ ಪಾಡಿಗೆ ತಾವು ಇದ್ದರು. ಒಂದು ದಿನ ರಾಮು ಕೆಲಸ ಮಾಡುವಾಗ,  ನೆಲ ಅಗಿಯುವಾಗ ಅವರ ಹಾರೆಗೆ ‘ಡಣ್’ ಎಂಬ ಶಬ್ದ ಬಂದಿತು. ಮತ್ತೆ ಅಗೆದಾಗ ಅವನಿಗೆ ಅಚ್ಚರಿಯೇ ಕಾದಿತ್ತು. ಒಂದು ತಾಮ್ರದ ಬಿಂದಿಗೆ, ಬಾಯಿಕಟ್ಟಿದ್ದು ಕಂಡಿತು. ಅದನ್ನು ಎತ್ತಿಕೊಂಡು ಬರುವಾಗ ಅದು ಭಾರ ಅನಿಸಿತು. ಒಳಗೆ ಏನಿದೆಯೋ ಏನೋ ಅನ್ನುತ್ತಾ ರಾಣಿಗೆ ತೋರಿಸಿದ.

ಬಾಯಿ ಬಿಚ್ಚಿದಾಗ ಅಚ್ಚರಿ ಕಾದಿತ್ತು. ಅದರಲ್ಲಿ ನಗ, ನಾಣ್ಯ ತುಂಬಿದ್ದವು. ಅಷ್ಟೊಂದು ಚಿನ್ನ ಅವರೆಂದೂ ನೋಡಿರಲಿಲ್ಲ. ‘ಲಕ್ಷ್ಮಿಯೇ ಬಂದಿದ್ದಾಳೆ’ ಎಂದು ಗಂಡ ಹೆಂಡತಿಯರು ಬಹಳ ಸಂತೋಷಪಟ್ಟರು. ಇಷ್ಟು ಹಣವನ್ನು ಹೇಗೆ ಖರ್ಚು ಮಾಡ ಬೇಕು ಎಂದು ಆ ಬಡ ದಂಪತಿ ವಿಚಾರದಲ್ಲಿ ಬಿದ್ದರು. ಈಗಿರುವ ಈ ಗುಡಿಸಲು ಮತ್ತೂ ಹೊಲವನ್ನು ಯಾರಿಗಾದರೂ ಕೂಲಿಗೆ ಕೋಡೋಣ. ನಾವು ಈಗ ಸಿರಿವಂತರಾಗಿದ್ದೇವೆ. ದೊಡ್ಡ ಮನೆ ಕೊಳ್ಳೋಣ’ ಎಂದು ರಾಮು ಹೇಳಿದ.

ರಾಣಿ ‘ಹೌದು ನನಗೂ ಕೆಲಸ ಮಾಡಿ ಸಾಕಾಗಿ ಹೋಗಿದೆ. ಒಳ್ಳೆ ಅಡುಗೆಯವಳನ್ನು ಮನೆಕೆಲಸಕ್ಕೆ ಆಳುಗಳನ್ನು ಇಡೋಣ’ ಎಂದಳು. ಹೀಗೆ ಅವರಿಬ್ಬರ ಜೀವನ ಬದಲಾಯಿತು. ಮನೆ ತುಂಬಾ ಆಳುಗಳೇ. ಎಲ್ಲ ಕೆಲಸಕ್ಕೂ ಆಳು. ದಿನವೂ ಔತಣದ ಅಡುಗೆ. ಹೀಗೆ ಕೆಲದಿವಸ ಕಳೆದವು. ರಾಮು ಮತ್ತು ರಾಣಿ ಕೆಲಸ ಮಾಡುವುದೇ ಬಿಟ್ಟರು. ಹೇಗಾದರೂ ಬೇಕಾದಷ್ಟು ಹಣ ಇದೆಯಲ್ಲಾ ಎಂದು ಅವರಿಗೆ ಗರ್ವ ಬಂದಿತು.

ನಂತರ ಅವರಿಗೆ ಹಳ್ಳಿಯಲ್ಲಿ ಇರುವುದೇ ಬೇಸರ ಅನಿಸಿತು. ಅದಕ್ಕೆ ದೊಡ್ಡ ಪಟ್ಟಣಕ್ಕೆ ಹೋಗಬೇಕು ಅನಿಸಿತು. ಅನಿಸಿದ ಕೂಡಲೇ ಹೊರಟೇಬಿಟ್ಟರು. ಹೇಗಾದರೂ ಹಣ ಇತ್ತಲ್ಲ! ಅಲ್ಲಿ ಇದಕ್ಕಿಂತ ದೊಡ್ಡ ಮನೆಕೊಂಡರು. ಬೇಕಾದಷ್ಟು ಸಿರಿವಂತ ಸ್ನೇಹಿತರು ಆದರು. ಕಾರು, ಅನೇಕ ವಾಹನ ಕೊಂಡರು. ಊರ ತುಂಬಾ ಇವರದೇ ಮಾತು, ಮರ್ಯಾದೆ.

ಆ ಮರ್ಯಾದೆ ಕಾಯ್ದುಕೊಳ್ಳಲು ಹಣವನ್ನು ನೀರಿನಂತೆ ಖರ್ಚು ಮಾಡಿದರು. ಕೆಲವು ವರ್ಷ ಹೀಗೆ ಕಳೆಯಿತು. ‘ಕೂತು ಉಂಡರೆ
ಕುಡಿಕೆ ಹೊನ್ನೂ ಸಾಲದು’ ಎನ್ನುವ ಗಾದೆಯಂತೆ ಅವರಲ್ಲಿದ್ದ ಹಣ ಖರ್ಚಾಗತೊಡಗಿತು. ಅನೇಕ ಆಳು ಕಾಳಿನಿಂದ, ರಾಣಿಗೆ ಯಾವುದೇ ಕೆಲಸವಿಲ್ಲದೇ ಆಲಸಿ ಆದಳು. ಅವಳಿಗೆ ಅನೇಕ ರೋಗದ ಲಕ್ಷಣಗಳೂ ಕಾಣಿಸಿಕೊಂಡವು.

ರಾಮೂಗೂ ಅದೇ ಥರವಾಯಿತು. ಪ್ರತಿ ದಿನವೂ ವಿವಿಧ ರೀತಿಯ ಭಾರಿ ಊಟಮಾಡಿ ಹೊಟ್ಟೆ ಬಂದಿತು. ಅನೇಕ ರೋಗಗಳು ಸೇರಿಕೊಂಡವು. ಇನ್ನು ವೈದ್ಯರ ಸಲಹೆ/ ಔಷಧ ಆರಂಭವಾದವು. ಅದರಿಂದ ಇನ್ನಷ್ಟು ಖರ್ಚು ಹೆಚ್ಚಾಯಿತು. ಒಂದು ದಿನ ರಾಮು ಹಣದ ಪೆಟ್ಟಿಗೆ ತೆಗೆದು ನೊಡಿದಾಗ ಆತನಿಗೆ ಎದೆಯು ಒಡೆಯಿತು. ಎಲ್ಲ ಹಣ ಖರ್ಚಾಗಿ ಬರೀ ಪೆಟ್ಟಿಗೆ ಮಾತ್ರ ಉಳಿದ್ದಿತ್ತು. ಅವನು ಗಾಬರಿಯಾದ.

ಆಗ ರಾಣಿ ಬಂದಳು. ಅದನ್ನು ನೋಡಿ ಅವಳಿಗೂ ಚಿಂತೆ ಹತ್ತಿತ್ತು. ಮರುದಿನ ಅವಳು‘ನಮಗೆ ಈ ಊರು ಬೇಡ, ಏನೂ ಬೇಡ. ಈ ರೋಗಗಳು ಆಲಸ್ಯದಿಂದ ಬಂದಿವೆ. ನಾವು ಇಂದೇ ನಮ್ಮ ಹಳ್ಳಿಗೆ ಹೋಗಿ ಉತ್ತಿ, ಬಿತ್ತಿ ಮುಂಚಿನಂತೆ ಕಷ್ಟಪಡೋಣ. ಹಿಂದೆ
ನಮ್ಮಿಬ್ಬರ ಆರೋಗ್ಯವೂ ಚೆನ್ನಾಗಿತ್ತು’ ಎಂದಳು. ರಾಮುಗೆ ಅವಳ ಮಾತು ಸರಿ ಎನಿಸಿ, ತಿರುಗಿ ಊರಿಗೆ ಬಂದು ಮತ್ತೆ ಮುಂಚಿ  ನಂತೆಯೇ ಗುಡಿಸಲಿಗೆ ಬಂದು ಹೊಲದಲ್ಲಿ ಕೆಲಸ ಮಾಡಲು ಆರಂಭಿಸಿದರು.

ಬೇರೆ ಎಲ್ಲ ದೇವರಿಗೆ ಲಕ್ಷ್ಮಿದೇವಿ ಇದನ್ನು ತೋರಿಸಿ ‘ನೋಡಿ ರಾಮು ಹೇಗೆ ಅದೃಷ್ಟದಿಂದ ಬಂದ ಹಣವನ್ನು ಪೋಲುಮಾಡಿದ. ಹಣಕ್ಕೆೆ ಬೆಲೆ ಕೊಡಲಿಲ್ಲ. ಕಷ್ಟಬಿದ್ದು ಮುಂದೆ ದುಡಿಯಲಿಲ್ಲ. ಆಲಸಿಯಾದ. ರೋಗಿಯಾದ. ಅದಕ್ಕೆ ನಾನು ಅವನ ಮನೆಯಿಂದ ಹೊರಟೆ. ಆದರೆ ನೀವೆಲ್ಲ ನನಗೆ ಚಂಚಲೆ ಎನ್ನುತ್ತೀರಿ, ಈಗ ನಿಮಗೆ ನನ್ನ ಮಾತಿನ ಅರ್ಥವಾಯಿತಲ್ಲ’ ಎಂದಳು.
ದೇವತೆಗಳೆಲ್ಲ ‘ಹೌದು’ ಎಂದು ತಲೆದೂಗಿದರು.

Leave a Reply

Your email address will not be published. Required fields are marked *