Tuesday, 13th May 2025

ಆರ್ಥಿಕ ಚೇತರಿಕೆ ಪೂರಕ ಬೆಳವಣಿಗೆ

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಅಭಿವೃದ್ಧಿ ದರ(ಜಿಡಿಪಿ) ಅತ್ಯಂತ ಕಳಪೆ ಮಟ್ಟ ಕಂಡಿದೆ ಎಂದು ಅಂದಾಜಿಸ ಲಾಗುತ್ತದೆ.

1991ರ ನಂತರದ ದಿನಗಳಲ್ಲಿನ ಅತ್ಯಂತ ಕಳಪೆ ಪ್ರಮಾಣವಿದು ಎಂಬುದು ಆರ್ಥಿಕ ತಜ್ಞರ ವಿಶ್ಲೇಷಣೆ. 2020 – 21ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರವು ಪ್ರಗತಿ ಕಾಣಲಿದೆ ಎಂಬುದಾಗಿ ದಕ್ಷಿಣ ಏಷ್ಯಾ ಆರ್ಥಿಕ ಕೇಂದ್ರಿತ ವರದಿ ತಿಳಿಸಿತ್ತು. ಮೊದಲೇ ಇಳಿಮುಖವಾಗಿ ಸಾಗುತ್ತಿದ್ದ ಆರ್ಥಿಕ ಪ್ರಗತಿಗೆ ಲಾಕ್‌ಡೌನ್‌ನಿಂದ ಉಂಟಾದ ಸರಕು ಪೂರೈಕೆಗಳ ವ್ಯತ್ಯಯ ಹಾಗೂ ಆರ್ಥಿಕ ಚಟುವಟಿಕೆಗಳ ಕುಸಿತ ಮತ್ತಷ್ಟು ಇಳಿಕೆಗೆ ಕಾರಣವಾಯಿತು. ಆದರೆ ಜಿಡಿಪಿ ಕುಸಿತ ಬೇಸರದ ನಡುವೆ ಜಿಎಸ್‌ಟಿ
ಸಂಗ್ರಹದ ಹೆಚ್ಚಳ, ದೇಶದ ಆರ್ಥಿಕ ಚಟುವಟಿಕೆಯ ಪ್ರಗತಿಗೆ ಪೂರಕವಾಗಿದೆ.

ಪ್ರಥಮ ಬಾರಿಗೆ ಅಕ್ಟೋಬರ್ ತಿಂಗಳೊಂದರಲ್ಲಿಯೇ ಜಿಎಸ್‌ಟಿ (ಸರಕುಗಳು ಮತ್ತು ಸೇವೆಗಳ ತೆರಿಗೆ) ಸಂಗ್ರಹ ಒಂದು ಲಕ್ಷ ಕೋಟಿ ರು. ಗಳನ್ನು ದಾಟಿದೆ. ಆರ್ಥಿಕ ಚೇತರಿಕೆಯ ನಿಟ್ಟಿನಲ್ಲಿ ಇದೊಂದು ಮಹತ್ವದ ಬೆಳವಣಿಗೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಂಗ್ರಹವಾದ ಆದಾಯಕ್ಕಿಂತ ಈ ಬಾರಿ ಶೇ.10ರಷ್ಟು ಏರಿಕೆಯಾಗಿರುವುದಾಗಿ ಅಂದಾಜಿಸಲಾಗಿದೆ.

ಹಬ್ಬಕ್ಕಾಗಿ ಖರೀದಿ ಹಾಗೂ ವಸ್ತುಗಳ ಬೇಡಿಕೆ ಹೆಚ್ಚಳದಿಂದಾಗಿ ಜಿಎಸ್‌ಟಿ ಪ್ರಮಾಣ ಹೆಚ್ಚಳವಾಗಿದೆ ಎನ್ನಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಗಳು ವ್ಯಕ್ತವಾಗುತ್ತಿವೆ. ಆರ್ಥಿಕ ಸಂಕಷ್ಟದಿಂದಾಗಿ ಜಿಡಿಪಿ ಪ್ರಮಾಣ ತೀವ್ರ ಕುಸಿತ ಕಂಡಿರುವ ದಿನಗಳಲ್ಲಿ ಜಿಎಸ್‌ಟಿ ಪ್ರಮಾಣದ ಹೆಚ್ಚಳ ಆರ್ಥಿಕ ಚೇತರಿಕೆ ಪೂರಕವಾದ ಬೆಳವಣಿಗೆ.

Leave a Reply

Your email address will not be published. Required fields are marked *