Sunday, 11th May 2025

Sayed Haider Raza: ಜನಪ್ರಿಯ ಕಲಾವಿದ ಸೈಯದ್ ಹೈದರ್ ರಾಜಾ ಅವರ 2.5 ಕೋಟಿ ರೂ. ಮೌಲ್ಯದ ಕಲಾಕೃತಿ ಕಳವು

Sayed Haider Raza

ಮುಂಬೈ: ಖ್ಯಾತ ಕಲಾವಿದ ಸೈಯದ್ ಹೈದರ್ ರಾಜಾ (Sayed Haider Raza) ಅವರ 2.5 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವರ್ಣಚಿತ್ರವನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. 1992ರಲ್ಲಿ ಸೈಯದ್ ಹೈದರ್ ರಾಜಾ ಅವರು ರಚಿಸಿದ ʼಪ್ರಕೃತಿʼ ಹೆಸರಿನ ಈ ವರ್ಣಚಿತ್ರವನ್ನು ಅಷ್ಟಗುರು ಆಕ್ಷನ್‌ ಹೌಸ್ ಪ್ರೈವೇಟ್ ಲಿಮಿಟೆಡ್‌ (AstaGuru Auction House Private Limited)ನಿಂದ ಕಳವು ಮಾಡಲಾಗಿದೆ ಎಂದು ಎಂ.ಆರ್‌.ಎ. ಮಾರ್ಗ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಈಗಾಗಲೇ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಫ್ರಾನ್ಸ್‌ ಮೂಲದ ಸೈಯದ್ ಹೈದರ್ ರಾಜಾ ಅವರು 2016ರಲ್ಲಿ ತಮ್ಮ 94ನೇ ವಯಸ್ಸಿನಲ್ಲಿ ಮೃತಪಟ್ಟಿದ್ದರು. ಕೋವಿಡ್‌ ಸಮಯದಲ್ಲಿ ಹೇರಿದ್ದ ಲಾಕ್‌ಡೌನ್‌ ವೇಳೆ ಅವರ ಈ ಕಲಾಕೃತಿಯನ್ನು ದಕ್ಷಿಣ ಮುಂಬೈಯ ಬಲ್ಲಾರ್ಡ್ ಪಿಯರ್‌ನಲ್ಲಿರುವ ಗೋದಾಮಿನಲ್ಲಿ ಇರಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಗೋದಾಮಿನಲ್ಲಿ ವರ್ಣಚಿತ್ರ ನಾಪತ್ತೆಯಾದ ಹಿನ್ನಲೆಯಲ್ಲಿ ಹರಾಜು ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಸಿದ್ಧಾಂತ್ ಶೆಟ್ಟಿ ಎಂ.ಆರ್‌.ಎ. ಮಾರ್ಗ್ ಪೊಲೀಸರಿಗೆ ದೂರು ನೀಡಿದ್ದಾರೆ. ʼʼನಾಪತ್ತೆಯಾದ ಈ ಕಲಾಕೃತಿಯನ್ನು ಪತ್ತೆಹಚ್ಚಲು ತನಿಖಾ ತಂಡವನ್ನು ರಚಿಸಲಾಗಿದೆʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ʼʼಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಲಾಗುವುದುʼʼ ಎಂದು ಅವರು ತಿಳಿಸಿದ್ದಾರೆ.

ಈ ಪೈಟಿಂಗ್‌ ಅನ್ನು ಹರಾಜು ಕೇಂದ್ರಕ್ಕೆ 2020ರಲ್ಲಿ ಇಂದ್ರ ವೀರ್‌ ಒದಗಿಸಿದ್ದರು ಮತ್ತು ಇದನ್ನು ಕೊನೆಯ ಬಾರಿಗೆ 2022ರ ಮಾರ್ಚ್‌ನಲ್ಲಿ ನೋಡಿದ್ದೆವು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವರ್ಷ ವರ್ಣಚಿತ್ರದ ಮಾಲೀಕರು ಅದನ್ನು ಹರಾಜಿಗೆ ಇಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಅದರಂತೆ ಗೋದಾಮಿನಲ್ಲಿ ಹುಡುಕಾಟ ನಡೆಸಲಾಯಿತು.‌ ಈ ವೇಳೆ ಇಲ್ಲಿರುವ ಸುಮಾರು 1,500 ಕಲಾಕೃತಿಗಳ ಪೈಕಿ ಸೈಯದ್ ಹೈದರ್ ರಾಜಾ ಅವರ ವರ್ಣಚಿತ್ರ ಕಳವಾಗಿರುವುದು ಬೆಳಕಿಗೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ. ಐಪಿಸಿ ಸೆಕ್ಷನ್‌ 380 (ಕಳವು) ಪ್ರಕಾರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

1922ರಲ್ಲಿ ಮಧ್ಯ ಪ್ರದೇಶದಲ್ಲಿ ಜನಿಸಿದ ಸೈಯದ್ ಹೈದರ್ ರಾಜಾ ಅವರು 1950ರಲ್ಲಿ ಫ್ರಾನ್ಸ್‌ಗೆ ತೆರಳಿದರು. 1959ರಲ್ಲಿ ಫ್ರೆಂಚ್‌ ಕಲಾವಿದೆ ಜಾನಿ ಮೋಂಗಿಲಾಟ್‌ ಅವರನ್ನು ವಿವಾಹಿತರಾಗಿ ಅಲ್ಲೇ ನೆಲೆಸಿದರು. ಜಾನಿ ಮೋಂಗಿಲಾಟ್‌ 2002ರಲ್ಲಿ ಕ್ಯಾನ್ಸರ್‌ನಿಂದ ನಿಧನ ಹೊಂದಿದ ಬಳಿಕ ರಾಜಾ 2010ರಲ್ಲಿ ಭಾರತಕ್ಕೆ ಮರಳಿದರು. 2016ರಲ್ಲಿ ದೆಹಲಿಯಲ್ಲಿ ಅಸುನೀಗಿದರು.

ಜನಪ್ರಿಯ ಕಲಾವಿದ

ತಮ್ಮ ಕಲಾಕೃತಿಗಳಿಂದಲೇ ಜನಪ್ರಿಯರಾಗಿದ್ದ ರಾಜಾ ಅವರ ಪೈಟಿಂಗ್‌ ಹರಾಜಿನಲ್ಲಿ ಕೋಟಿಗಟ್ಟಲೆ ರೂ.ಗಳಿಗೆ ಬಿಕರಿಯಾಗಿವೆ. 2010ರಲ್ಲಿ ಇವರ ʼಸೌರಾಷ್ಟ್ರʼ ಕಲಾಕೃತಿ 16.42 ಕೋಟಿ ರೂ.ಗೆ ಹರಾಜಾಗಿ ದಾಖಲೆ ನಿರ್ಮಿಸಿತ್ತು. ಅವರ ಕಲಾಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಪದ್ಮಶ್ರೀ (1981), ಪದ್ಮಭೂಷಣ (2007) ಮತ್ತು ಪದ್ಮವಿಭೂಷಣ (2013) ನೀಡಿ ಗೌರವಿಸಿದೆ.

ಈ ಸುದ್ದಿಯನ್ನೂ ಓದಿ: Ceasefire Violation: ಕದನ ವಿರಾಮ ಉಲ್ಲಂಘಿಸಿ ಪಾಕ್‌ ಸೇನೆ ದಾಳಿ; BSF ಯೋಧನಿಗೆ ಗಂಭೀರ ಗಾಯ

Leave a Reply

Your email address will not be published. Required fields are marked *