Sunday, 11th May 2025

Namma Metro: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ; ವಾಣಿಜ್ಯ ಸೇವೆ ಆರಂಭ ಯಾವಾಗ?

Namma Metro

ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹಳದಿ ಮಾರ್ಗದಲ್ಲಿ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯಿಂದ (ಆರ್‌ಡಿಎಸ್‌ಒ) ಪ್ರಾಯೋಗಿಕ ಸಂಚಾರದ ಮೂಲಕ ಪರೀಕ್ಷೆ ಆರಂಭಿಸಲಾಗಿದ್ದು, 2 ವಾರದಲ್ಲಿ ಪರೀಕ್ಷೆ ಪೂರ್ಣಗೊಂಡು ಡಿಸೆಂಬರ್‌ನಲ್ಲಿ ವಾಣಿಜ್ಯ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಪ್ರಾಯೋಗಿಕ ಸಂಚಾರದ ಮೂಲಕ ಪರೀಕ್ಷೆಗಳನ್ನು ಸೋಮವಾರ ಆರಂಭಿಸಿದೆ. 2 ವಾರದಲ್ಲಿ ಆರ್‌ಡಿಎಸ್‌ಒ ಪರೀಕ್ಷೆ ಪೂರ್ಣಗೊಳ್ಳಲಿದೆ. ಬೊಮ್ಮನಹಳ್ಳಿಯಿಂದ ಆರ್‌.ವಿ.ರಸ್ತೆ ನಡುವಿನ 18.82 ಕಿ.ಮೀ. ದೂರದ ಈ ಮಾರ್ಗದಲ್ಲಿ ಪ್ರಮುಖ ರಸ್ತೆಗಳನ್ನು ಆರಂಭಿಸಲಾಗಿದೆ. 12 ರಿಂದ 14 ದಿನ ವಿವಿಧ ಪರೀಕ್ಷೆಗಳನ್ನು ತಾಂತ್ರಿಕ ಪರಿಣಿತರು ನಡೆಸಲಿದ್ದಾರೆ ಎಂದು ತಿಳಿಸಿದೆ.

ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗಿನ (ಹಳದಿ ಮಾರ್ಗ) ಕಾಮಗಾರಿ 2017ರಲ್ಲಿ ಆರಂಭವಾಗಿತ್ತು. ಮೆಟ್ರೋ ಹಸಿರು, ಗುಲಾಬಿ, ನೀಲಿ ಮಾರ್ಗಗಳೊಂದಿಗೆ ಸಂಪರ್ಕಿಸುವ ಈ ಮಾರ್ಗದಲ್ಲಿ ಡಬಲ ಡೆಕ್ಕರ್‌ ಸೇತುವೆ ಕೂಡ ಇದೆ. ರಾಗಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ 3.3 ಕಿ.ಮೀ. ಒಂದೇ ಪಿಲ್ಲರ್‌ಗೆ ರೋಡ್‌ ಕಮ್‌ ರೈಲ್ವೆ (ಡಬಲ್‌ ಡೆಕ್ಕರ್‌) ಸೇತುವೆ ನಿರ್ಮಿಸಲಾಗಿದೆ.

ಮೆಟ್ರೊ ಹಳದಿ ಮಾರ್ಗದ ಆರ್.ವಿ ರಸ್ತೆ ನಿಲ್ದಾಣದಿಂದ ಬೊಮ್ಮಸಂದ್ರವರೆಗಿನ ಹೊಸ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೊ ರೈಲು ಸಂಚರಿಸಲಿದೆ. ಈ ಮಾರ್ಗ ಆರಂಭಗೊಳ್ಳುವ ಮೊದಲು ಪರೀಕ್ಷೆಗಾಗಿ ಎರಡು ಸೆಟ್‌ ಬೋಗಿಗಳು ಚೀನಾದಿಂದ ಚೆನ್ನೈಗೆ ಕಳುಹಿಸಲಾಗಿತ್ತು. ಅಲ್ಲಿಂದ ಒಂದು ಸೆಟ್‌ ಫೆಬ್ರವರಿಯಲ್ಲಿ ಬೆಂಗಳೂರಿಗೆ ತಲುಪಿತ್ತು. 2019ರಲ್ಲಿ ಚೀನಾದ ಸಿಆರ್‌ಆರ್‌ಸಿ ನಂಜಿಂಗ್ ಪುಜೆನ್ ಕಂಪನಿ, ಬಿಎಂಆರ್‌ಸಿಎಲ್‌ನಿಂದ 216 ರೈಲು ಬೋಗಿಗಳನ್ನು ಪೂರೈಸಲು 1,578 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿತ್ತು.

ಇದನ್ನೂ ಓದಿ | Money Tips: ಗೂಗಲ್‌ ಪೇ ಅಥವಾ ಫೋನ್‌ ಪೇಯಿಂದ ತಪ್ಪಾದ ನಂಬರ್‌ಗೆ ಹಣ ಪಾವತಿಸಿದರೆ ಏನು ಮಾಡಬೇಕು?

ಇನ್ನುಳಿದ ಬೋಗಿಗಳನ್ನು ಸರಬರಾಜು ಮಾಡಲು ಚೀನಾ ಕಂಪನಿಯು ಪಶ್ಚಿಮ ಬಂಗಾಳದ ತಿತಾಗಢದ ರೈಲ್ವೇ ಸಿಸ್ಟಮ್ಸ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇಲ್ಲಿಯೇ ಕೋಚ್ ಗಳು ತಯಾರಾಗಲಿವೆ. ಬಳಿಕ ಹಂತ ಹಂತವಾಗಿ 2025ರ ಮಾರ್ಚ್ ಒಳಗೆ ಉಳಿದ ಎಲ್ಲಾ ಬೋಗಿಗಳು ಬೆಂಗಳೂರಿಗೆ ತಲುಪಲಿವೆ.

Leave a Reply

Your email address will not be published. Required fields are marked *