Saturday, 10th May 2025

Actor Darshan: ರೇಣುಕಾಸ್ವಾಮಿಯನ್ನು ಶೆಡ್‌ಗೆ ತಂದ ಸಂದೇಶ ದರ್ಶನ್‌ಗೆ ಬಂದಾಗ ಏನಾಯ್ತು? ಚಿಕ್ಕಣ್ಣ ಹೇಳಿದ್ದೇನು?

actor darshan actor chikkanna

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ದರ್ಶನ್‌ (Actor Darshan) ಮತ್ತು ಗ್ಯಾಂಗ್‌ ಹಲ್ಲೆ ನಡೆಸಿ ಕೊಲೆ (Renukaswamy Murder case) ಮಾಡಿದ ದಿನ ಬೆಂಗಳೂರಿನ ರೆಸ್ಟೋರೆಂಟ್‌ ಒಂದರಲ್ಲಿ ದರ್ಶನ್‌ ಪಾರ್ಟಿ ನಡೆಸಿದ್ದು, ಅದರಲ್ಲಿ ನಟ ಚಿಕ್ಕಣ್ಣ (Actor Chikkanna) ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿಯೇ ರೇಣುಕಾಸ್ವಾಮಿಯನ್ನು ಶೆಡ್‌ಗೆ ಕರೆತರಲಾದ ಬಗ್ಗೆ ದರ್ಶನ್‌ಗೆ ಮಾಹಿತಿ ಬಂದಿತ್ತು ಎಂದು ಚಿಕ್ಕಣ್ಣ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿದುಬಂದಿದೆ.

ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್​ಶೀಟ್​ನಲ್ಲಿ ಈ ವಿವರ ದೊರೆತಿದೆ. ದರ್ಶನ್ ಸೇರಿ 17 ಜನ ಕೊಲೆ ಆರೋಪ ಹೊತ್ತಿದ್ದು, ಇವರ ಹೇಳಿಕೆಯನ್ನು ಪಡೆಯಲಾಗಿದೆ. ಕೊಲೆ ನಡೆದ ದಿನ ಸ್ಟೋನಿಬ್ರೂಕ್​​ ರೆಸ್ಟೋರೆಂಟ್‌ನಲ್ಲಿ ದರ್ಶನ್​ ಹಾಗೂ ಚಿಕ್ಕಣ್ಣ ಪಾರ್ಟಿ ಮಾಡಿದ್ದರು. ಈ ವೇಳೆ ರೆಸ್ಟೋರೆಂಟ್​ನಲ್ಲಿ ನಡೆದಿದ್ದು ಏನು ಎಂಬ ಬಗ್ಗೆ ಚಿಕ್ಕಣ್ಣ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಚಿಕ್ಕಣ್ಣ ಹೇಳಿಕೆಯೂ ಇದೆ.

‘ಜೂನ್ 8ರಂದು ನಾನು ಎ.ಪಿ ಅರ್ಜುನ್ ಕಚೇರಿಯಲ್ಲಿ ನನ್ನ ಮುಂದಿನ ಚಿತ್ರದ ಬಗ್ಗೆ ಚರ್ಚೆ‌ ಮಾಡುತ್ತಿದ್ದೆ. ಆಗ ನಟ ಯಶಸ್ ಕರೆ ಮಾಡಿ ಮಧ್ಯಾಹ್ನ ಸ್ಟೋನಿಬ್ರೂಕ್​ನಲ್ಲಿ ಊಟದ ವ್ಯವಸ್ಥೆ ಮಾಡಿದ್ದಾರೆ. ನಿನಗೆ ಕರೆ ಮಾಡಿ ತಿಳಿಸುವಂತೆ ಸೂಚಿಸಿದ್ದಾರೆ. ನೇರವಾಗಿ ಸ್ಟೋನಿಬ್ರೂಕ್​ಗೆ ಬನ್ನಿ ಎಂದು ತಿಳಿಸಿದ್ದರು. ನಾನು ಬರಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದೆ. 10 ನಿಮಿಷಗಳ ನಂತರ ದರ್ಶನ್ ಕರೆ ಮಾಡಿ ಬರುವಂತೆ ಹೇಳಿದರು. ನಾನು ಮನೆಗೆ ಬಂದು ಬಟ್ಟೆ ಬದಲಾಯಿಸಿಕೊಂಡು 02:45ಕ್ಕೆ‌‌ ರೆಸ್ಟೋರೆಂಟ್​ಗೆ ಹೋದೆ’.

‘ನನ್ನ ಖಾಸಗಿ ವಾಹನದಲ್ಲಿ ಡ್ರೈವರ್ ಸಿದ್ದು ಜೊತೆಯಲ್ಲಿ ಸ್ಟೋನಿಬ್ರೂಕ್​ಗೆ ಹೋದೆ. ಸಿದ್ದುನನ್ನು ಕಾರಲ್ಲಿ ಬಿಟ್ಟು ಸಫಾರಿ ಎಂಬ ಲಾಂಜ್‌ಗೆ ತೆರಳಿದೆ. ಅಲ್ಲಿ ದರ್ಶನ್, ವಿನಯ್, ಪ್ರದೂಷ್, ಯಶಸ್, ನಾಗರಾಜು ಊಟ ಮಾಡುತ್ತಿದ್ದರು. ​​ನಾನು ಕುಳಿತುಕೊಂಡು ನಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡುತ್ತಾ ಅವರೊಂದಿಗೆ ಊಟ ಮಾಡುತ್ತಿದ್ದೆ. ಆಗ ದರ್ಶನ್ ಬಳಿಗೆ ಬಂದ ಪವನ್ ಕಿವಿಯಲ್ಲಿ ಯಾವುದೋ ವಿಚಾರ ಹೇಳಿದರು. ಆಗ ದರ್ಶನ್ ಮುಖಭಾವ ಬದಲಾವಣೆ ಆಯಿತು. ನಂತರ ದರ್ಶನ್ ಯಾರಿಗೋ ಕರೆ ಮಾಡಿ ಗಂಭೀರವಾಗಿ ಯಾವುದೋ ವಿಚಾರದ ಬಗ್ಗೆ ಚರ್ಚೆ ಮಾಡಿದರು. ನಂತರ ʼಚಿಕ್ಕಣ್ಣ ನೀನು ಹೊರಡು ನಮಗೆ ಬೇರೆ ಕೆಲಸ ಇದೆʼ ಎಂದು ದರ್ಶನ್ ತಿಳಿಸಿದರು. ನಂತರ ಎಲ್ಲರೂ ಒಟ್ಟಿಗೆ ಕೆಳಗೆ ಬಂದೆವು. ನಾನು ಅಲ್ಲಿಂದ ಹೊರಟು ಬಂದೆ’ ಎಂದು ಚಿಕ್ಕಣ್ಣ ಹೇಳಿಕೆ ನೀಡಿದ್ದಾರೆ.

‘ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ದರ್ಶನ್, ಪ್ರದೋಷ್ ತೆರಳಿದರೆ, ವಿನಯ್ ಹಾಗೂ ನಾಗರಾಜು ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನವಲ್ಲಿ ಅಲ್ಲಿಂದ ಹೋದರು. ಜೂನ್ 10ರಂದು ನನ್ನ ಸ್ನೇಹಿತ ನಾಗೇಂದ್ರ ನನಗೆ ಕರೆ ಮಾಡಿ ದರ್ಶನ್ ಅರೆಸ್ಟ್ ಆಗಿದ್ದಾರೆ ಎಂದರು. ನಾನು ಕೊಲೆಯ ಬಗ್ಗೆ ಮಾಧ್ಯಮಗಳಲ್ಲಿ ನೋಡಿರುತ್ತೇನೆ. ದರ್ಶನ್ ಹಾಗೂ ನಾನು 3 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದೆವು. ದರ್ಶನ್ ಹಾಗೂ ಪವಿತ್ರಾ ಗೌಡ ಲಿವಿಂಗ್ ರಿಲೇಷನ್‌ನಲ್ಲಿ ಇದ್ದ ಬಗ್ಗೆ ನನಗೆ ತಿಳಿದಿದೆ’ ಎಂದು ಚಿಕ್ಕಣ್ಣ ಹೇಳಿಕೆ ನೀಡಿದ್ದಾರೆ.

ಈ ಸುದ್ದಿ ಓದಿ: Actor Darshan: ನಟ ದರ್ಶನ್‌ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ

Leave a Reply

Your email address will not be published. Required fields are marked *