Sunday, 11th May 2025

Kalindi Express: ಹಳಿಗಳ ಮೇಲಿದ್ದ ಸಿಲಿಂಡರ್‌ಗೆ ರೈಲು ಡಿಕ್ಕಿ; ಭಾರೀ ದುರಂತಕ್ಕೆ ದುಷ್ಕರ್ಮಿಗಳ ಸಂಚು- ಇಬ್ಬರು ಅರೆಸ್ಟ್‌

Kalindi Express

ಲಕ್ನೋ: ದೇಶದಲ್ಲಿ ರೈಲು ದುರಂತಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಉತ್ತರಪ್ರದೇಶ(UttarPradesh) ದಲ್ಲಿ ದುಷ್ಕರ್ಮಿಗಳು ರೈಲ್ವೇ ಹಳಿಗೆ ಎಲ್‌ಪಿಜಿ ಸಿಲಿಂಡರ್‌ ಅಡ್ಡಲಾಗಿಟ್ಟು ರೈಲು(Kalindi Express) ಹಳಿತಪ್ಪುವಂತೆ ಮಾಡಲು ಸಂಚು ರೂಪಿಸಿದ್ದಾರೆ. ಅದೃಷ್ಟವಶಾತ್‌ ಅಧಿಕಾರಿಗಳ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ತಡರಾತ್ರಿ ಹಳಿಗಳ ಮೇಲೆ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗೆ ಕಾಳಿಂದಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಯಾವುದೇ ದುರಂತ ಸಂಭವಿಸಿಲ್ಲ. ಉತ್ತರ ಪ್ರದೇಶದ ಎರಡನೇ ದೊಡ್ಡ ನಗರವಾದ ಕಾನ್ಪುರ ಮತ್ತು ಹರಿಯಾಣದ ಭಿವಾನಿಯನ್ನು ಸಂಪರ್ಕಿಸುವ ಕಾಳಿಂದಿ ಎಕ್ಸ್‌ಪ್ರೆಸ್, ಕಾನ್ಪುರದ ಶಿವರಾಜ್‌ಪುರದಲ್ಲಿ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್‌ಪಿಜಿ ಸಿಲಿಂಡರ್ ಅನ್ನು ಹಳಿಗಳ ಮೇಲೆ ಹಾಕುವ ಮೂಲಕ ಕಾಳಿಂದಿ ಎಕ್ಸ್‌ಪ್ರೆಸ್ ಅನ್ನು ಹಳಿತಪ್ಪಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಮಾಹಿತಿ ಪಡೆದ ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ವಿಧಿವಿಜ್ಞಾನ ತಂಡವನ್ನು ಕರೆಸಲಾಗಿದ್ದು, ರೈಲ್ವೇ ರಕ್ಷಣಾ ಪಡೆ ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಳಿಗಳ ಮೇಲೆ ಸಿಲಿಂಡರ್‌ಗಳನ್ನು ಇಟ್ಟಿರುವುದುನ್ನು ಲೊಕೊ ಪೈಲಟ್ (ಚಾಲಕ) ದೂರದಿಂದಲೇ ಗಮನಿಸಿದ್ದು, ತಕ್ಷಣ ಬ್ರೇಕ್‌ ಹಾಕಿದ್ದಾನೆ. ರೈಲು ನಿಲ್ಲುವ ಮುನ್ನವೇ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ ಆದರೆ ಡಿಕ್ಕಿಯ ಪರಿಣಾಮವಾಗಿ ಸಿಲಿಂಡರ್ ಹಳಿಯಿಂದ ದೂರ ಸರಿದಿದೆ. ಘಟನೆಯ ನಂತರ, ಕಾಳಿಂದಿ ಎಕ್ಸ್‌ಪ್ರೆಸ್ ಸುಮಾರು 20 ನಿಮಿಷಗಳ ಕಾಲ ಸ್ಥಳದಲ್ಲಿ ನಿಂತಿತ್ತು ಮತ್ತು ಪರಿಶೀಲನೆಗಾಗಿ ಬಿಲ್ಹೌರ್ ನಿಲ್ದಾಣದಲ್ಲಿ ಮತ್ತೆ ನಿಲ್ಲಿಸಲಾಯಿತು.

ಇಬ್ಬರು ಅರೆಸ್ಟ್‌

ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಸಿಲಿಂಡರ್ ಜೊತೆಗೆ ಪೆಟ್ರೋಲ್ ಬಾಟಲಿ ಮತ್ತು ಬೆಂಕಿಕಡ್ಡಿಗಳನ್ನು ಸ್ಥಳದಿಂದ ವಶಕ್ಕೆ ಪಡೆದಿದ್ದಾರೆ. ಏತನ್ಮಧ್ಯೆ, ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಪೊಲೀಸರು ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಭೇದಿಸಲು ಆರು ತಂಡಗಳನ್ನು ರಚಿಸಲಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಇಂತಹ ಎರಡನೇ ಘಟನೆ ಇದಾಗಿದೆ. ಆಗಸ್ಟ್ 17 ರಂದು, ವಾರಣಾಸಿ-ಅಹಮದಾಬಾದ್ ಸಬರಮತಿ ಎಕ್ಸ್‌ಪ್ರೆಸ್‌ನ 22 ಬೋಗಿಗಳು ಕಾನ್ಪುರದ ಬಳಿ ಹಳಿತಪ್ಪಿದವು, ಜುಲೈನಲ್ಲಿ ಚಂಡೀಗಢ-ದಿಬ್ರುಗ್ರಾ ಎಕ್ಸ್‌ಪ್ರೆಸ್ ರಾಜ್ಯದ ಗೊಂಡಾ ಜಿಲ್ಲೆಯಲ್ಲಿ ಹಳಿ ತಪ್ಪಿದ ನಂತರ ನಾಲ್ವರು ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು.

ಈ ಸುದ್ದಿಯನ್ನೂ ಓದಿ:Vande Bharat Express: 3 ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಮೋದಿ ಇಂದು ಚಾಲನೆ; ಕರ್ನಾಟಕಕ್ಕೂ ಇದೆ ರೈಲು

Leave a Reply

Your email address will not be published. Required fields are marked *