Saturday, 10th May 2025

Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣ ಮುಚ್ಚುವ ಆತಂಕ? ಇನ್ನೊಂದೇ ತಿಂಗಳು ಪರ್ಮಿಶನ್!‌

shivamogga airport

ಶಿವಮೊಗ್ಗ: ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣ (Shivamogga Airport) ಸುರಕ್ಷತಾ ಮಾನದಂಡಗಳನ್ನು (Safety measures) ಎಂಬ ಕಾರಣದಿಂದ ಮುಚ್ಚುವ ಆತಂಕಕ್ಕೆ ತುತ್ತಾಗಿದೆ. ಇಲ್ಲಿಂದ ವಿಮಾನಗಳ ಹಾರಾಟಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA – Directorate General of Civil Aviation) ನೀಡಿದ್ದ ಅನುಮತಿ ಇನ್ನು 20 ದಿನದಲ್ಲಿ ಮುಕ್ತಾಯಗೊಳ್ಳಲಿದೆ.

ಈ ಬಾರಿ ಒಂದು ವರ್ಷಕ್ಕೆ ಅವಧಿ ವಿಸ್ತರಿಸಬೇಕಿದ್ದ ಡಿಜಿಸಿಎ ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಲೈಸೆನ್ಸ್‌ ವಿಸ್ತರಿಸಿದೆ. ಹೀಗಾಗಿ, ವಿಮಾನ ಪ್ರಯಾಣಿಕರಿಗೆ ಇಲ್ಲಿಂದ ವಿಮಾನ ಹಾರಾಟ ಮುಂದುವರಿಯುತ್ತದಾ ಅಥವಾ ಇಲ್ಲವಾ ಎಂಬ ಪ್ರಶ್ನೆ ಎದ್ದಿದೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ (Shivamogga Airport) ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಕಳೆದ ಬಾರಿ ಒಂದು ವರ್ಷದ ಅವಧಿಗೆ ಲೈಸೆನ್ಸ್‌ ನೀಡಿತ್ತು. ಈ ಅವಧಿ ಆಗಸ್ಟ್‌ 23ಕ್ಕೆ ಮುಕ್ತಾಯಗೊಂಡಿದೆ. ಲೈಸೆನ್ಸ್‌ ನವೀಕರಣದ ವೇಳೆ ಕೆಲವು ಕಾರಣ ನೀಡಿ ಲೈಸೆನ್ಸ್‌ ಅವಧಿಯನ್ನು ಕೇವಲ ಒಂದು ತಿಂಗಳಿಗೆ ವಿಸ್ತರಣೆ ಮಾಡಿದೆ. ಸೆ.23ಕ್ಕೆ ಈ ಅವಧಿ ಮುಗಿಯಲಿದೆ. ಈ ಲೈಸೆನ್ಸ್‌ ಅವಧಿ ನವೀಕರಣಗೊಳ್ಳದೆ ಇದ್ದರೆ ಶಿವಮೊಗ್ಗದಿಂದ ವಿಮಾನಗಳ ಹಾರಾಟಕ್ಕೆ ಸಮಸ್ಯೆಯಾಗಲಿದೆ.

ರಾಜ್ಯ ಸರ್ಕಾರದ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮವು ಶಿವಮೊಗ್ಗ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದೆ. ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಪರವಾನಗಿ ನೀಡುವಾಗ ಸುರಕ್ಷತೆ ಮತ್ತು ಭದ್ರತೆ ವಿಚಾರಗಳ ಬಗ್ಗೆ ಕೆಲವು ಷರತ್ತು ವಿಧಿಸಿತ್ತು. ಕೆಎಸ್‌ಐಐಡಿಸಿ ಸಂಸ್ಥೆಯು ಈ ಷರತ್ತುಗಳನ್ನು ಪೂರ್ತಿಯಾಗಿ ಪೂರೈಸಿಲ್ಲ. ಇದೇ ಕಾರಣಕ್ಕೆ ಈಗ ಡಿಜಿಸಿಎ ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್‌ ಅವಧಿಯನ್ನು ಕೇವಲ ಒಂದು ತಿಂಗಳಿಗೆ ಮಾತ್ರ ನವೀಕರಿಸಿದೆ.

ವಿಮಾನ ನಿಲ್ದಾಣದ ರನ್‌ವೇ ಸುರಕ್ಷತಾ ಪ್ರದೇಶವು ಮಾನದಂಡಕ್ಕೆ ಅನುಗುಣವಾಗಿಲ್ಲ. ರಕ್ಷಣಾ ಸಾಧನಗಳ ಖರೀದಿ ವಿಳಂಬವಾಗಿದೆ. ಫೈರ್‌ ಸೇಫ್ಟಿ ನೋಡಿಕೊಳ್ಳುವ ಸಿಬ್ಬಂದಿ ಕೊರತೆ ಇದೆ. ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂಆರ್‌ಟಿ) ಇಲ್ಲ. ಭದ್ರತಾ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ. ಇವುಗಳನ್ನು ಪೂರೈಸಿದರೆ ಲೈಸೆನ್ಸ್‌ ನವೀಕರಣ ಮಾಡಲಾಗುವುದು ಎಂದು ಡಿಜಿಸಿಎ ತಿಳಿಸಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿ ಓದಿ: Vande Bharat Express: ಶೀಘ್ರದಲ್ಲೇ ಶಿವಮೊಗ್ಗಕ್ಕೂ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸೇವೆ

Leave a Reply

Your email address will not be published. Required fields are marked *