Sunday, 11th May 2025

Keerthy Suresh: ಹೊಂಬಾಳೆ ಫಿಲ್ಮ್ಸ್‌ನ ಮೊದಲ ತಮಿಳು ಚಿತ್ರ ಒಟಿಟಿಗೆ ಲಗ್ಗೆ ಇಡಲು ಸಜ್ಜು; ಕೀರ್ತಿ ಸುರೇಶ್‌ ಸಿನಿಮಾ ಸ್ಟ್ರೀಮಿಂಗ್‌ ಯಾವಾಗ?

Keerthy Suresh

ಚೆನ್ನೈ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ʼಕೆಜಿಎಫ್‌ʼ ಸರಣಿ, ʼಕಾಂತಾರʼ ಚಿತ್ರಗಳನ್ನು ನಿರ್ಮಿಸಿ ದೇಶಾದ್ಯಂತ ಸಂಚಲನ ಮೂಡಿಸಿದ ಕನ್ನಡದ ಹೊಂಬಾಳೆ ಫಿಲ್ಮ್ಸ್‌ (Hombale Films)ನ ಮೊದಲ ತಮಿಳು ಚಿತ್ರ ʼರಘು ತಾತʼ (Raghu Thatha). ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ, ಬಹುಭಾಷಾ ಕಲಾವಿದೆ ಕೀರ್ತಿ ಸುರೇಶ್‌ (Keerthy Suresh) ನಾಯಕಿಯಾಗಿ ಅಭಿನಯಿಸಿರುವ ಈ ಸಿನಿಮಾ ಇದೀಗ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಯಾವಾಗ, ಯಾವ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಎನ್ನುವ ವಿವರ ಇಲ್ಲಿದೆ.

‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ವಿಜಯ್​ ಕಿರಗಂದೂರು (Vijay Kiragandur) ಅವರು ತಮ್ಮ ಬ್ಯಾನರ್‌ ಮೂಲಕ ಕನ್ನಡ ಜೊತೆಗೆ ಇತರ ಭಾಷೆಯ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಅದರ ಭಾಗವಾಗಿ ತಮಿಳಿನಲ್ಲಿ ʼರಘು ತಾತʼ ಚಿತ್ರವನ್ನು ತಯಾರಿಸಿದ್ದಾರೆ. ಸುಮನ್‌ ಕುಮಾರ್‌ ರಚಿಸಿ ಮೊದಲ ಬಾರಿ ಆ್ಯಕ್ಷನ್‌ ಕಟ್‌ ಹೇಳಿರುವ ಈ ಹಾಸ್ಯ ಪ್ರಧಾನ ಸಿನಿಮಾ ಭಾರಿ ನಿರೀಕ್ಷೆಯೊಂದಿಗೆ ಆಗಸ್ಟ್‌ 15ರಂದು ಬಿಡುಗಡೆಯಾಗಿದೆ. ಆದರೆ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಂದುಕೊಂಡಷ್ಟು ಕಲೆಕ್ಷನ್‌ ಮಾಡುವಲ್ಲಿ ವಿಫಲವಾಗಿದೆ.

ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದ ʼರಘು ತಾತʼ ಬಿಡುಗಡೆಗೊಂಡ ಒಂದು ತಿಂಗಳೊಳಗೆ ಒಟಿಟಿಗೆ ಬರಲಿದೆ. ಸೆಪ್ಟೆಂಬರ್‌ 13ರಂದು ಈ ಸಿನಿಮಾ ಸ್ಟ್ರೀಮಿಂಗ್‌ ಆಗಲಿದೆ ಎನ್ನಲಾಗಿದೆ. ಝೀ 5 ಫ್ಲಾಟ್‌ಫಾರ್ಮ್‌ನಲ್ಲಿ ʼರಘು ತಾತʼ ಪ್ರದರ್ಶನಗೊಳ್ಳಲಿದೆ. ಕೀರ್ತಿ ಸುರೇಶ್‌ ಅಭಿನಯಕ್ಕೆ ಪ್ರೇಕ್ಷಕರು ಜೈ ಎಂದಿದ್ದರೂ ಕಥೆ, ಚಿತ್ರಕಥೆ ಹಲವರಿಗೆ ಇಷ್ಟವಾಗಿರಲಿಲ್ಲ. ಇದೀಗ ಒಟಿಟಿ ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಚಿತ್ರಮಂದಿರಗಳಲ್ಲಿ ಮಕಾಡೆ ಮಲಗಿದ ಹಲವು ಸಿನಿಮಾಗಳು ಒಟಿಟಿಯಲ್ಲಿ ಸೂಪರ್‌ ಹಿಟ್‌ ಆದ ಉದಾಹರಣೆಗಳಿವೆ. ಹೀಗಾಗಿ ಚಿತ್ರತಂಡ ಈ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದೆ.

2014ರಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿನಯದ ʼನಿನ್ನಂದಲೇʼ ಚಿತ್ರ ನಿರ್ಮಿಸುವ ಮೂಲಕ ಹೊಂಬಾಳೆ ಫಿಲ್ಮ್ಸ್‌ ಬಣ್ಣದ ಲೋಕಕ್ಕೆ ಕಾಲಿಟ್ಟಿತು. ಈ 10 ವರ್ಷಗಳಲ್ಲಿ ಕನ್ನಡ ಜೊತೆಗೆ ತೆಲುಗು, ತಮಿಳು, ಮಲೆಯಾಳಂನ 10ಕ್ಕೂ ಹೆಚ್ಚು ಚಿತ್ರ ನಿರ್ಮಿಸಿದೆ. 2018ರಲ್ಲಿ ತೆರೆಕಂಡ ಯಶ್‌ ಅಭಿನಯದ ʼಕೆ.ಜಿ.ಎಫ್‌.ʼ ಸಿನಿಮಾ ನಿರ್ಮಿಸುವ ಮೂಲಕ ದೇಶದ ಗಮನ ಸೆಳೆದ ಹೊಂಬಾಳೆ ಫಿಲ್ಮ್ಸ್‌ ʼಕೆ.ಜಿ.ಎಫ್‌. 2ʼ, ʼಕಾಂತಾರʼ ಮುಂತಾದ ಚಿತ್ರಗಳನ್ನೂ ಪ್ರೇಕ್ಷಕರ ಮುಂದಿಟ್ಟಿದೆ. ಕಳೆದ ವರ್ಷ ತೆರೆಕಂಡ ತೆಲುಗಿನ ʼಸಲಾರ್‌ʼ ಮತ್ತು ಮಲಯಾಳಂನ ʼಧೂಮಂʼ ಸಿನಿಮಾಗಳೂ ಹೊಂಬಾಳೆ ಫಿಲ್ಮ್ಸ್‌ನ ಕೊಡುಗೆ. ಸದ್ಯ ಕನ್ನಡದ 3 ಮತ್ತು ತೆಲುಗಿನ 1 ಚಿತ್ರವನ್ನು ನಿರ್ಮಿಸುತ್ತಿದೆ.

ಈ ಸುದ್ದಿಯನ್ನೂ ಓದಿ: Sandalwood News: ಭಾರತ-ಬಾಂಗ್ಲಾ ಯುದ್ಧದ ಕಥೆ ಹೇಳುವ ʻಸಿಗ್ನಲ್‌ ಮ್ಯಾನ್‌ 1971ʼ ಚಿತ್ರದ ಹಾಡು ರಿಲೀಸ್‌

ಇನ್ನು ಕೀರ್ತಿ ಸುರೇಶ್‌ ಸದ್ಯ ತಮಿಳಿನ ʼರಿವಾಲ್ವರ್‌ ರೀತʼ ಎನ್ನುವ ತಮಿಳು ಮತ್ತು ಬಾಲಿವುಡ್‌ನ ʼಬೇಬಿ ಜಾನ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ʼಬೇಬಿ ಜಾನ್‌ʼ ಕೀರ್ತಿ ಸುರೇಶ್‌ ಅಭಿನಯದ ಮೊದಲ ಹಿಂದಿ ಚಿತ್ರವಾಗಿದ್ದು, ವರುಣ್‌ ಧವನ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು 2016ರಲ್ಲಿ ತೆರೆಕಂಡ ತಮಿಳಿನ ʼತೆರಿʼ ಚಿತ್ರದ ರಿಮೇಕ್‌.

Leave a Reply

Your email address will not be published. Required fields are marked *