Saturday, 10th May 2025

Kiccha Sudeep: ಮತ್ತೆ ಒಂದಾದ ಸುದೀಪ್-ಅನೂಪ್; 185 ವರ್ಷ ಬಳಿಕದ ಕಥೆ ಹೇಳಲಿದೆ ʼವಿಕ್ರಾಂತ್ ರೋಣʼ ಜೋಡಿ

Kiccha Sudeep

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು (ಸೆಪ್ಟೆಂಬರ್‌ 2) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಬರ್ತಡೇ ಅಂಗವಾಗಿ ಬಹುನಿರೀಕ್ಷಿತ ಸಿನಿಮಾ ʼಬಿಲ್ಲ ರಂಗ ಭಾಷಾʼದ ಟೈಟಲ್ ಲೋಗೋ ಹಾಗೂ ಕಾನ್ಸೆಪ್ಟ್ ವಿಡಿಯೋ ಝಲಕ್ ಅನ್ನು ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ. ನಿರೀಕ್ಷೆಗೆ ತಕ್ಕಂತೆ ಮೂಡಿಬಂದಿರುವ ಫಸ್ಟ್ ಝಲಕ್ ನಲ್ಲಿ ನಾನಾ ವಿಷಯಗಳನ್ನು ನಿರ್ದೇಶಕ ಅನೂಪ್ ಭಂಡಾರಿ ಕಟ್ಟಿಕೊಟ್ಟಿದ್ದಾರೆ. ಲಿಬರ್ಟಿ ಪ್ರತಿಮೆ, ಐಫೆಲ್ ಟವರ್ ಮತ್ತು ತಾಜ್ ಮಹಲ್ ಅನ್ನು ತೋರಿಸಿರುವ ಅವರು ಭವಿಷ್ಯದ ಕಥೆ ಹೇಳೋದಿಕ್ಕೆ ಹೊರಟ್ಟಿದ್ದಾರೆ. Once Upon A Time in 2209 AD ಎಂದು ಶುರುವಾಗುವ ಝಲಕ್ ಬಹಳ ಕುತೂಹಲ ಹೆಚ್ಚಿಸಿದೆ. ಅಂದರೆ ವಿಕ್ರಾಂತ್‌ ರೋಣ ಜೋಡಿ 185 ವರ್ಷದ ಬಳಿಕದ ಕಥೆ ಹೇಳಲು ಹೊರಟಿದೆ.  ಅನೂಪ್ ಹೇಳಲು ಹೊರಟಿರುವ ಭವಿಷ್ಯದ ಕಥಾಹಂದರ ಏನು? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಸುದೀಪ್ ಅವರೇ ಹೇಳಿಕೊಂಡಿರುವಂತೆ ಅವರ ಸಿನಿಕರಿಯರ್‌ನ ಬಹುದೊಡ್ಡ ಬಜೆಟ್ ಚಿತ್ರ ಇದಾಗಿದೆ. ಟಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ʼಹನುಮಾನ್ʼನ ನಿರ್ಮಾಪಕರಾದ ನಿರಂಜನ್ ರೆಡ್ಡಿ ಹಾಗೂ‌ ಚೈತನ್ಯ ರೆಡ್ಡಿ ʼಬಿಲ್ಲ ರಂಗ ಭಾಷಾ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ತಮ್ಮದೇ ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಡಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ವೀಡಿಯೋದಲ್ಲಿ “ಹನುಮಾನ್‌ʼ ನಿರ್ಮಾಪಕರಿಂದ, ʼರಂಗಿತರಂಗʼ, ʼರಾಜರಥʼ, ʼವಿಕ್ರಾಂತ್‌ ರೋಣʼ ನಿರ್ದೇಶಕರಿಂದ ಬಿಲ್ಲ ರಂಗ ಭಾಷಾ ಸಿನಿಮಾ” ಎಂಬ ಅಪ್‌ಡೇಟ್‌ ಹಂಚಿಕೊಳ್ಳಲಾಗಿದೆ.

https://www.instagram.com/reel/C_Zq7qupnkc/?utm_source=ig_web_copy_link&igsh=MzRlODBiNWFlZA==

ʼಬಿಲ್ಲ ರಂಗ ಭಾಷಾʼ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಅನೂಪ್ ಭಂಡಾರಿ, ʼʼವಿಕ್ರಾಂತ್ ರೋಣʼ ಸಿನಿಮಾ ನಂತರ ʼಹನುಮಾನ್ʼ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದ ಸಮಯದಲ್ಲಿ ನಿರ್ಮಾಪಕರಾದ ನಿರಂಜನ್ ರೆಡ್ಡಿ ನನ್ನನ್ನು ಭೇಟಿಯಾದರು. ನಾನು ಸುದೀಪ್‌ಗೆ ಸಿನಿಮಾ ಮಾಡುತ್ತಿರುವುದಾಗಿ ಹಾಗೂ ʼಬಿಲ್ಲ ರಂಗ ಭಾಷಾʼ ಕಥೆ ಹೇಳಿದಾಗ ಅವರು ಎಕ್ಸೈಟ್ ಆದರು. ಅದ್ಧೂರಿಯಾಗಿ ಚಿತ್ರ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಸುದೀಪ್ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವ. ಜನ ʼವಿಕ್ರಾಂತ್ ರೋಣʼ ಚಿತ್ರ ಇಷ್ಟಪಟ್ಟಿದ್ದಾರೆ. ಸುದೀಪ್ ಈ ಚಿತ್ರವನ್ನು ದೊಡ್ಡ ಚಿತ್ರ ಎಂದಿರುವುದು ನನಗೆ ಜವಾಬ್ದಾರಿಯನ್ನು ಜಾಸ್ತಿ ಮಾಡಿದೆʼʼ ಎಂದು ಹೇಳಿದ್ದಾರೆ.

BRB

ನಿರ್ಮಾಪಕನಿರಂಜನ್ ರೆಡ್ಡಿ ಮಾತನಾಡಿ, ʼʼಸುದೀಪ್ ಜೊತೆ ಅನೂಪ್ ಕೈ ಜೋಡಿಸಿದ್ದಾರೆ ಎಂದಾಗ ನಾವು ಉತ್ಸುಕರಾದೆವು. ತೆಲುಗಿನಲ್ಲಿ ʼವಿಕ್ರಾಂತ್ ರೋಣʼ ಅದ್ಭುತ ಯಶಸ್ಸು ಕಂಡಿದೆ. ʼಬಿಲ್ಲ ರಂಗ ಭಾಷಾʼ ಕಥೆ ಕೇಳಿದಾಗ ನಾವೇ ಚಿತ್ರ ನಿರ್ಮಾಣ ಮಾಡಬೇಕು ಎಂದುಕೊಂಡೆವು. ಕಿಚ್ಚ ಸುದೀಪ್ ಜೊತೆ ಕೈ ಜೋಡಿಸಿರುವುದು ಒಂದೊಳ್ಳೆ ಅವಕಾಶವಾಗಿದ್ದು, ʼಬಿಲ್ಲ ರಂಗ ಭಾಷಾʼ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಅದ್ಭುತ ಪ್ರಪಂಚ ಪರಿಚಯಿಸುತ್ತೇವೆʼʼ ಎಂದು ಭರವಸೆ ನೀಡಿದ್ದಾರೆ.

ʼವಿಕ್ರಾಂತ್‌ ರೋಣʼದಂತೆಯೇ ʼಬಿಲ್ಲ ರಂಗ ಭಾಷಾʼ ಸಿನಿಮಾ ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

Leave a Reply

Your email address will not be published. Required fields are marked *