Tuesday, 13th May 2025

ಸಿರಾಜ್‌ ಮಾರಕ ಬೌಲಿಂಗಿಗೆ ಕೋಲ್ಕತಾ ಗಪ್‌’ಚುಪ್‌

ಅಬುಧಾಬಿ: ಲೀಗ್’ನಲ್ಲಿ ಮೊದಲ ಬಾರಿ ಘಾತಕ ಬೌಲಿಂಗ್ ಸಂಘಟಿಸಿದ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ಎದುರಾಳಿ ಕೋಲ್ಕತಾದ ಬ್ಯಾಟಿಂಗ್ ದೌರ್ಬಲ್ಯವನ್ನು ಬುಡಮೇಲು ಮಾಡಿತು. ಆಲ್ರೌಂಡರ್‌ಗಳ ಪಡೆಯನ್ನೇ ಹೊಂದಿರುವ ಕೋಲ್ಕತಾ ವನ್ನೇ ಮುಟ್ಟಿ ನೋಡುವಂತಹ ರೀತಿಯಲ್ಲಿ ಸೋಲಿಸಿದೆ.

ವೇಗಿ ಮೊಹಮದ್ ಸಿರಾಜ್ (8ಕ್ಕೆ 3) ಮಾರಕ ದಾಳಿ ಹಾಗೂ ಇತರ ಬೌಲರ್‌ಗಳ ಸಂಘಟಿತ ಪ್ರಯತ್ನದಿಂದಾಗಿ ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು 8 ವಿಕೆಟ್ ‌ಗಳಿಂದ ಮಣಿಸಿದೆ.

ಲೀಗ್‌ನಲ್ಲಿ 7ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 2 ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ ಬಳಗ ಪ್ಲೇ-ಆಫ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ರನ್‌ಗೆ ಪರದಾಡಿ 8 ವಿಕೆಟ್‌ಗೆ 84 ರನ್‌ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ ೫೦ ರನ್ನಿನೊಳಗೆ ಗಂಟು ಮೂಟೆ ಕಟ್ಟುವಂತಹ ಸ್ಥಿತಿಗೆ ತಲುಪಿತ್ತು. ಪ್ರತಿಯಾಗಿ ಆರ್‌ಸಿಬಿ 13.3 ಓವರ್‌ಗಳಲ್ಲಿ 2 ವಿಕೆಟ್‌ಗೆ 86 ರನ್‌ಗಳಿಸಿ ಸುಲಭ ಜಯದ ನಗೆ ಬೀರಿತು.

ಕೆಕೆಆರ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿದ ಆರ್‌ಸಿಬಿ ತಂಡಕ್ಕೆ ಆರಂಭಿಕರಾದ ಕನ್ನಡಿಗ ದೇವದತ್ ಪಡಿಕಲ್ (25ರನ್, 17 ಎಸೆತ, 3 ಬೌಂಡರಿ) ಹಾಗೂ ಆರನ್ ಫಿಂಚ್ (16 ರನ್, 17ಎಸೆತ, 2 ಬೌಂಡರಿ) ಜೋಡಿ ಬಿರುಸಿನ ಆರಂಭ ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 46 ರನ್ ಕಲೆಹಾಕಿ ಬೇರ್ಪಟ್ಟಿತು.

ಲಾಕಿ ಫರ್ಗ್ಯುಸನ್ ಎಸೆತದಲ್ಲಿ ಫಿಂಚ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‌ಗೆ ಕ್ಯಾಚ್ ನೀಡಿದರು. ಇವರ ಬೆನ್ನ ಹಿಂದೆಯೇ ಪಡಿಕಲ್ ಕೂಡ ರನೌಟ್ ಬಲೆಗೆ ಬಿದ್ದರು. ಬಳಿಕ ಜತೆಯಾದ ಗುರುಕೀರತ್ ಮಾನ್ ಸಿಂಗ್ (21*) ಹಾಗೂ ನಾಯಕ ವಿರಾಟ್ ಕೊಹ್ಲಿ (18*) ಜೋಡಿ ಮುರಿಯದ 3ನೇ ವಿಕೆಟ್‌ಗೆ 39 ರನ್ ಜತೆಯಾಟವಾಡಿ ಇನ್ನೂ 6.3 ಓವರ್‌ಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿತು.

ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಸೂಪರ್ ಓವರ್ ಮೂಲಕ ಮಣಿಸಿದ ವಿಶ್ವಾಸದೊಂದಿಗೆ ಕಣಕ್ಕಿಳಿದ ಕೆಕೆಆರ್ ತಂಡಕ್ಕೆ ಆರ್‌ಸಿಬಿ ಬೌಲರ್‌ಗಳು ಆಘಾತ ನೀಡಿದರು.

ಇನಿಂಗ್ಸ್‌ನ 2ನೇ ಓವರ್‌ನಲ್ಲೇ ರಾಹುಲ್ ತ್ರಿಪಾಠಿ (1) ಅವರನ್ನು ಡಗೌಟ್‌ಗೆ ಅಟ್ಟುವ ಮೂಲಕ ಮೊಹಮದ್ ಸಿರಾಜ್ ಕೆಕೆಆರ್ ಕುಸಿತಕ್ಕೆ ಮುನ್ನುಡಿ ಬರೆದರು. ಮರು ಎಸೆತದಲ್ಲಿಯೇ ನಿತೀಶ್ ರಾಣಾ ಕೂಡ ಬೌಲ್ಡ್. ಸೈನಿ ಎಸೆತವನ್ನು ಪುಲ್ ಮಾಡಲು ಯತ್ನಿಸಿದ ಶುಭಮಾನ್ ಗಿಲ್ (1) ಮಾರಿಸ್‌ಗೆ ಕ್ಯಾಚ್ ನೀಡಿದರು. ಕೇವಲ 3 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಕೆಕೆಆರ್ ಸಂಕಷ್ಟದ ಸುಳಿಗೆ ಸಿಲುಕಿತು.

ಮಾಜಿ ನಾಯಕ ದಿನೇಶ್ ಕಾರ್ತಿಕ್ (4) ವೈಫಲ್ಯ ಮುಂದುವರಿಸಿದರೆ, ನಾಯಕ ಇವೊಯಿನ್ ಮಾರ್ಗನ್ (30 ರನ್, 34ಎಸೆತ, 3 ಬೌಂಡರಿ, 1 ಸಿಕ್ಸರ್) ಕೆಲಕಾಲ ರನ್‌ ಗಳಿಸಲು ಹೋರಾಡಿದರು. ಆರ್‌ಸಿಬಿ ಬೌಲರ್‌ಗಳ ಸಂಘಟಿತ ಯತ್ನದ ಫಲವಾಗಿ ಕೆಕೆಆರ್ ಬ್ಯಾಟ್ಸ್‌ಮನ್‌ಗಳು ಮಂಡಿಯೂರಿದರು. ಕಡೇ ಹಂತದಲ್ಲಿ ಕುಲದೀಪ್ ಯಾದವ್ (12) ಹಾಗೂ ಲಾಕಿ ರ್ಗ್ಯುಸನ್ (19*) ಉಪಯುಕ್ತ ರನ್ ಗಳಿಸಿದ ಫಲವಾಗಿ ಕೆಕೆಆರ್ ತಂಡ 80ರ ಗಡಿ ದಾಟಿತು.

Leave a Reply

Your email address will not be published. Required fields are marked *