Wednesday, 14th May 2025

ರಾಜಕಾರಣದಲ್ಲಿ ಎಲ್ಲ ಮುಗಿದು ಹೋಯ್ತು ಎಂಬುದು ಇಲ್ಲವೇ ಇಲ್ಲ !

ನೂರೆಂಟು ವಿಶ್ವ

vbhat@me.com

ಜಾತಿ ಮತ್ತು ಹಣದ ಹೊರತಾಗಿ ಈ ದಿನಗಳಲ್ಲಿ ರಾಜಕಾರಣ ಮಾಡುವುದು ಸಾಧ್ಯವೇ ಇಲ್ಲ. ಈ ಪೈಕಿ ಎರಡೂ ಇದ್ದರೆ ಬಹಳ ಬೇಗ ಮೇಲಕ್ಕೇರಬಹುದು. ಬರೀ ಹಣವೊಂದೇ ಇದ್ದು, ಜಾತಿ ಇರದಿದ್ದರೆ ಪ್ರಯೋಜನವಿಲ್ಲ. ಇಂದಿನ ರಾಜಕಾರಣದಲ್ಲಿ ಸಿದ್ಧಾಂತ, ಮೌಲ್ಯಗಳಿಗೆಲ್ಲ ಅರ್ಥವೇ ಇಲ್ಲ. ಅಧಿಕಾರ ಗಿಟ್ಟಿಸಿಕೊಳ್ಳುವ ಹಾದಿಯಲ್ಲಿ ಏನೇ ಮಾಡಿದರೂ ಮಾಫ್!

ದಿವಂಗತ ಪ್ರಧಾನಿ ಮತ್ತು ಬಿಜೆಪಿ ಜ್ಯೇಷ್ಠ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ನಾಲ್ಕು ದಶಕಗಳ ಕಾಲ ಸಂಸತ್ತಿನಲ್ಲಿ ಮಾಡಿದ ಭಾಷಣವನ್ನು ಸಂಗ್ರಹಿಸಿ, ಅವರ ಬಹುಕಾಲದ ಸ್ನೇಹಿತರಾಗಿದ್ದ ಎನ್.ಎಂ.ಘಟಾಟೆ ಅವರು, ‘Atal Bihari Vajpayee : Four Decades in Parliament’ ಎಂಬ ಶೀರ್ಷಿಕೆಯಲ್ಲಿ ನಾಲ್ಕು ಸಂಪುಟಗಳ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಈ ಕೃತಿಯ ಆರಂಭದಲ್ಲಿ ವಾಜಪೇಯಿ ಅವರು ಅರ್ಥಪೂರ್ಣವಾದ ಪ್ರಾಸ್ತಾವಿಕ ಮಾತು ಗಳನ್ನು ಬರೆದಿದ್ದಾರೆ.

ವಾಜಪೇಯಿ ಅವರು ಬರೆದ ಆ ಮಾತುಗಳು ಇಂದಿನ ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ತೋರುದೀಪವಾಗಿದೆ. ವಾಜಪೇಯಿ ಅವರು ಒಂದೆಡೆ ಹೀಗೆ ಹೇಳುತ್ತಾರೆ – ‘ರಾಜಕೀಯ ಪ್ರವೇಶಿಸಿದ ಎಲ್ಲರಿಗೂ ಅಧಿಕಾರದ ಆಕಾಂಕ್ಷೆಗಳಿರುತ್ತವೆ. ಅದು ಪಕ್ಷದಲ್ಲಿ ಸ್ಥಾನಮಾನವಿರ ಬಹುದು, ಶಾಸಕ-ಸಂಸದರಾಗುವುದಿರಬಹುದು ಅಥವಾ ಸರಕಾರದಲ್ಲಿ ಯಾವುದಾದರೂ ಹುದ್ದೆಯನ್ನು ಗಿಟ್ಟಿಸುವುದಿರಬಹುದು. ಒಟ್ಟಾರೆ ಏನಾದರೂ ಆಗಬೇಕು ಎಂಬುದು ಬಹುತೇಕರ ಆಸೆಯಾಗಿರುತ್ತದೆ. ಅದು ತಪ್ಪಲ್ಲ. ಅಂಥವರಿಗೆ ನಾನು ಹೇಳುವುದಿಷ್ಟೇ, ಯಾವುದಾದರೂ ಸ್ಥಾನಕ್ಕೆ ನೀವು ಅರ್ಹರಾಗಿದ್ದರೆ, ಆ ಸ್ಥಾನವೇ ನಿಮ್ಮನ್ನು ಅರಸಿಕೊಂಡು ಬರುತ್ತದೆ. ಅದಕ್ಕಾಗಿ ಹೋರಾಡಬೇಕಿಲ್ಲ. ರಾಜಕಾರಣದಲ್ಲಿ ಪ್ರತಿಯೊಬ್ಬರಿಗೂ ಸ್ಥಾನವಿದೆ. ಅಧಿಕಾರ ರಾಜಕಾರಣದಲ್ಲಿ ಕೆಲವೇ ಕೆಲವು ಕುರ್ಚಿಗಳಿವೆ, ಹುzಗಳಿವೆ. ಎಲ್ಲರೂ ಆಸೆಪಡುತ್ತಾರೆ. ಆದರೆ ಅದು ಕೆಲವರಿಗೆ ಮಾತ್ರ ಸಿಗುತ್ತದೆ.

ಅಷ್ಟಕ್ಕೇ ಉಳಿದವರು ನಿರಾಶರಾಗಬೇಕಿಲ್ಲ. ಅಂಥವರಿಗೆ ಯಾವುದೋ ಹುದ್ದೆ ಅರಸಿಕೊಂಡು ಬರುತ್ತದೆ. ಅಲ್ಲಿಯ ತನಕ ಸಮಾಧಾನಚಿತ್ತರಾಗಿ ಇರಬೇಕು. ಪಕ್ಷದ ಕೆಲಸವನ್ನು ಸಾಮಾನ್ಯ ಕಾರ್ಯಕರ್ತನಂತೆ ಮಾಡುತ್ತಿರಬೇಕು. ನೀವು ಮಾಡಿದ ಕೆಲಸವನ್ನು ಯಾರೂ ನೋಡುವುದಿಲ್ಲ ಎಂದು ಭಾವಿಸಬಾರದು. ನಿಮ್ಮ
ಪ್ರತಿ ಕೆಲಸವನ್ನು ಗಮನಿಸುವವರು ಇದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.’

ಚುನಾವಣೆಯಲ್ಲಿ ಟಿಕೆಟ್ ವಂಚಿತರಾದವರು, ಮಂತ್ರಿ ಸ್ಥಾನ ಸಿಗದವರು ವಾಜಪೇಯಿ ಅವರ ಈ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ವಾಜಪೇಯಿ ಅವರು ಆಪಸ್ನಾತಿಯಲ್ಲಿ ನಾನಾಜಿ ದೇಶಮುಖ್ ನಿದರ್ಶನವನ್ನು ನೀಡುತ್ತಿದ್ದರು. ಆರೆಸ್ಸೆಸ್ಸಿನ ಎರಡನೇ ಸರಸಂಘಚಾಲಕರಾದ ಗೋಲವಾಲಕರ್ ಅವರ ಸೂಚನೆ ಮೇರೆಗೆ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಉತ್ತರ ಪ್ರದೇಶಕ್ಕೆ ಹೋದರು. ಹನ್ನೆರಡು ವರ್ಷಗಳ ಕಾಲ ಇಡೀ ಉತ್ತರ ಪ್ರದೇಶದಲ್ಲಿ ಪ್ರವಾಸ ಮಾಡಿದ ನಾನಾಜಿ ದೇಶಮುಖ್, ಉತ್ತರ ಪ್ರದೇಶದ ಪ್ರತಿ ತಾಲೂಕಿನಲ್ಲೂ ಜನಸಂಘದ ಘಟಕವನ್ನು ಸ್ಥಾಪಿಸಿದರು. ಆ ದಿನಗಳಲ್ಲಿ
ಉತ್ತರ ಪ್ರದೇಶವನ್ನು ಬಿಟ್ಟು ಹೊರಬಂದಿದ್ದು ಅಪರೂಪ.

ಡಾ.ರಾಮಮನೋಹರ ಲೋಹಿಯಾ ಜತೆಗೆ ಉತ್ತಮ ಸಂಬಂಧ ಹೊಂದಿದ್ದ ನಾನಾಜಿ, ೧೯೬೭ ರಲ್ಲಿ ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣರಾದರು. ವಾಜಪೇಯಿ ಅವರು ‘ರಾಷ್ಟ್ರಧರ್ಮ’ ಮತ್ತು ‘ಪಾಂಚಜನ್ಯ’ ಪತ್ರಿಕೆಗಳ ಸಂಪಾದಕರಾಗಿದ್ದಾಗ ನಾನಾಜಿ ಆ ಎರಡೂ ಪತ್ರಿಕೆಗಳಿಗೆ ಮ್ಯಾನೇಜರ್ ಆಗಿದ್ದರು. ಅವರಿಗೆ ಯಾವುದಾದರೂ ಜವಾಬ್ದಾರಿ ವಹಿಸಿದರೆ, ಅದು ಈಡೇರುವ ತನಕ ವಿರಮಿಸುತ್ತಿರಲಿಲ್ಲ.

ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಜನತಾ ಪಕ್ಷದ ಸರಕಾರ ಅಽಕಾರಕ್ಕೆ ಬಂದಿತು. ಖುದ್ದು ಮೊರಾರ್ಜಿಯವರು ನಾನಾಜಿಯವರನ್ನು ಭೇಟಿ ಮಾಡಿ, ‘ನಿಮ್ಮನ್ನು ಕೈಗಾರಿಕೆ ಖಾತೆ ಮಂತ್ರಿಯಾಗಿ ಮಾಡಬೇಕೆಂದಿದ್ದೇನೆ’ ಎಂದು ಹೇಳಿದರು. ನಾನಾಜಿ ಅವರು ಬಲರಾಮಪುರ ಕ್ಷೇತ್ರದಿಂದ ಆರಿಸಿ ಬಂದಿದ್ದರು. ‘ನನಗೆ ಪಕ್ಷ ವಹಿಸಿದ ಜವಾಬ್ದಾರಿಯನ್ನು ಮಾಡುವುದಷ್ಟೇ ಗೊತ್ತು. ಮಂತ್ರಿಯಾಗುವಂತೆ ನನಗೆ ಪಕ್ಷ ಸೂಚಿಸಿಲ್ಲ. ನನಗೆ ಬೇರೆ ಹೊಣೆಗಾರಿಕೆಯಿದೆ. ಹೀಗಾಗಿ ನಿಮ್ಮ ಆಹ್ವಾನವನ್ನು ನಾನು ಸ್ವೀಕರಿಸುವುದಿಲ್ಲ’ ಎಂದು ನೇರಾನೇರ ಹೇಳಿಬಿಟ್ಟರು.

ಅದಾಗಿ ಇಪ್ಪತ್ತೆರಡು ವರ್ಷಗಳ ಬಳಿಕ, ವಾಜಪೇಯಿ ಪ್ರಧಾನಿಯಾದಾಗ, ೧೯೯೯ ರಲ್ಲಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಅದನ್ನು ಅವರು ಒಲ್ಲದ ಮನಸ್ಸಿನಿಂದ, ವಾಜಪೇಯಿ ಅವರ ಒತ್ತಾಯಕ್ಕೆ ಕಟ್ಟುಬಿದ್ದು ಒಪ್ಪಿಕೊಂಡರು. ಮನಸ್ಸು ಮಾಡಿದ್ದರೆ ವಾಜಪೇಯಿ ಸರಕಾರದಲ್ಲಿ ಅವರು ಕೇಳಿದ ಖಾತೆ ಮಂತ್ರಿ ಆಗಬಹುದಿತ್ತು, ಯಾವ ರಾಜ್ಯಕ್ಕೆ ಬೇಕಾದರೂ ರಾಜ್ಯಪಾಲರಾಗಬಹುದಿತ್ತು, ಆಸೆ ಪಟ್ಟಿದ್ದರೆ ರಾಷ್ಟ್ರಪತಿಯೂ ಆಗಬಹುದಿತ್ತು. ಆದರೆ ಬಿಜೆಪಿ ಅಽಕಾರಕ್ಕೆ ಬಂದಾಗ ನಾನಾಜಿ ಸರ್ವಸ್ಥಾನ ಪರಿತ್ಯಾಗಿಯಾಗಿ ಇದ್ದುಬಿಟ್ಟರು. (೨೦೧೯ ರಲ್ಲಿ ಅವರಿಗೆ ಮರಣೋತ್ತರ ‘ಭಾರತ ರತ್ನ’ ನೀಡಿ
ಗೌರವಿಸಲಾಯಿತು.)

‘ಇಂಥ ಅವೆಷ್ಟೋ ಲಕ್ಷಾಂತರ ಕಾರ್ಯಕರ್ತರು ಬಿಜೆಪಿಯನ್ನು ಕಟ್ಟಿದ್ದಾರೆ. ಅಧಿಕಾರಕ್ಕೆ ಆಸೆ ಪಟ್ಟು ಸಣ್ಣವರಾಗಿದ್ದಕ್ಕಿಂತ, ಅಧಿಕಾರದಿಂದ ದೂರ ಉಳಿದು ದೊಡ್ಡವರಾದ ದೊಡ್ಡ ದಂಡು ಪಕ್ಷದಲ್ಲಿದೆ. ಅವರಲ್ಲಿ ಅನೇಕರು ಪೂರ್ಣಾವಧಿ ಕಾರ್ಯಕರ್ತರು, ಮನೆ-ಮಠ ತೊರೆದು, ವಿವಾಹವಾಗದೇ ಪಕ್ಷಕ್ಕಾಗಿ ಜೀವ ಸವೆಸಿದವರು. ಇಂಥವರು ಕಟ್ಟಿದ ಪಕ್ಷ ಬಿಜೆಪಿ. ಪಕ್ಷದ ಕೆಲಸ ಅಂದ್ರೆ ರಾಷ್ಟ್ರಸೇವೆ ಎಂದು ಭಾವಿಸಿದ ಜನಗಳಿಂದ ರೂಪಿತವಾದ ಪಕ್ಷವಿದು’ ಎಂದು ವಾಜಪೇಯಿ ಲಖನೌದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಗದ್ಗದಿತರಾಗಿ ಹೇಳಿದ್ದರು.

ಈ ದಿನಗಳಲ್ಲಿ ಇಂಥ ಮಾತುಗಳಿಗೆ ಯಾವ ಅರ್ಥವೂ ಇಲ್ಲ. ಅಂದು ವಾಜಪೇಯಿ ಹೇಳಿದ ಮಾತುಗಳನ್ನು ಬಿಜೆಪಿಯ ಯಾವ ಸದಸ್ಯನೂ ನೆನಪಿಸಿಕೊಳ್ಳಲೂ ಬಯಸುವುದಿಲ್ಲ. ಒಂದು ವೇಳೆ ವಾಜಪೇಯಿ ಮಾತುಗಳನ್ನು ಬಿಜೆಪಿ ನಾಯಕ ಅಥವಾ ಕಾರ್ಯಕರ್ತರ ಮುಂದೆ ಹೇಳಿದರೆ, ನಿಮ್ಮನ್ನು ಕನಿಕರದಿಂದ, ಯಕಃಶ್ಚಿತವಾಗಿ, ಕ್ಯಾಕರಿಸಿ ನೋಡಬಹುದು. ಕಾರಣ ಬಿಜೆಪಿಯನ್ನು ಕಟ್ಟಿದ, ವಾಜಪೇಯಿ ಮತ್ತು ಆಡ್ವಾಣಿಯವರನ್ನು ಪಕ್ಷ ಮರೆತುಬಿಟ್ಟಿದೆ. ಪಕ್ಷದ ವೇದಿಕೆಗಳಲ್ಲೂ ಆ ಇಬ್ಬರು ನಾಯಕರ ಫೋಟೋ ಸಹ ಕಣ್ಮರೆಯಾಗಿವೆ. ಇನ್ನು, ಅವರು ಎಂದೋ ಹೇಳಿದ ಮಾತುಗಳನ್ನು ಯಾರು ನೆನಪಿಟ್ಟುಕೊಂಡಾರು? ಇಂದು ರಾಜಕಾರಣ ಅಂದ್ರೆ ಅಽಕಾರ ರಾಜಕಾರಣವಾಗಿದೆ. ಪಕ್ಷಕ್ಕೆ ಬರುವಾಗಲೇ ಹುz ಮೇಲೆ ಕಣ್ಣಿಟ್ಟೇ ಟವೆಲ್ ಹಾಸಿಯೇ ಬರುತ್ತಾರೆ. ಸಂಘಟನೆ ಕೆಲಸ ಮಾಡುವುದಕ್ಕಿಂತ ಮೊದಲೇ ಟಿಕೆಟ್ ಮೇಲೆ ಹೊಂಚು ಹಾಕಿರುತ್ತಾರೆ. ಹಣವಿದ್ದವರು ಮಾತ್ರ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರೆ. ಅದಕ್ಕೆ ಕಾರಣ ಚುನಾವಣೆಯಲ್ಲಿ ಡಿಜ್ಞ್ಞಿZಚಿಜ್ಝಿಜಿಠಿqs ಮಾತ್ರ ಮುಖ್ಯ. ಜಾತಿ ಮತ್ತು ಹಣದ ಹೊರತಾಗಿ ಈ ದಿನಗಳಲ್ಲಿ ರಾಜಕಾರಣ ಮಾಡುವುದು ಸಾಧ್ಯವೇ ಇಲ್ಲ. ಈ ಪೈಕಿ ಎರಡೂ ಇದ್ದರೆ ಬಹಳ ಬೇಗ ಮೇಲಕ್ಕೇರಬಹುದು. ಬರೀ ಹಣವೊಂದೇ ಇದ್ದು, ಜಾತಿ ಇರದಿದ್ದರೆ ಪ್ರಯೋಜನವಿಲ್ಲ.

ಇಂದಿನ ರಾಜಕಾರಣದಲ್ಲಿ ಸಿದ್ಧಾಂತ, ಮೌಲ್ಯಗಳಿಗೆಲ್ಲ ಅರ್ಥವೇ ಇಲ್ಲ. ಅಧಿಕಾರ ಗಿಟ್ಟಿಸಿಕೊಳ್ಳುವ ಹಾದಿಯಲ್ಲಿ ಏನೇ ಮಾಡಿದರೂ ಮಾಫ್! ಅದೇ ರಾಜಕಾರಣದ ನೀತಿ, ಚಾಣಕ್ಯ ತಂತ್ರ ಮತ್ತು ಸಿದ್ಧಾಂತ. ಟಿಕೆಟ್ ಕೊಡದಿದ್ದರೆ, ಬೇರೆ ಪಕ್ಷ ಸೇರುವ ಧಮಕಿ ಹಾಕಿ, ಟಿಕೆಟ್ ಗಿಟ್ಟಿಸಿಕೊಂಡು, ಆರಿಸಿ ಬಂದವರು
ಈಗಿನ ಕೇಂದ್ರ ಸರಕಾರದಲ್ಲಿ ಮಂತ್ರಿ ಸ್ಥಾನ ಹೊಡೆದುಕೊಂಡಿದ್ದಾರೆ. ಇನ್ನು ಸಮ್ಮಿಶ್ರ ಸರಕಾರದ ಮಾತು ಬಂತೆಂದರೆ ಅಲ್ಲಿ ಯಾರು ಯಾರ ಜತೆ ಬೇಕಾದರೂ ಸಂಬಂಧ ಕುದುರಿಸಿದರೂ ಸರಿಯೇ. ಅದೊಂಥರಾ ಶ್ವಾನಗಳ ಸಂಸಾರ!

ಯಾರು ತಾಯಿ-ಮಗ, ತಂದೆ-ಮಗ ಎಂಬುದು ಗೊತ್ತಾಗುವುದಿಲ್ಲ. ಈ ದಿನಗಳಲ್ಲಿ ರಾಜಕಾರಣದಲ್ಲಿ ಸಿದ್ಧಾಂತದ ಬಗ್ಗೆ ಮಾತಾಡುವವರಷ್ಟು ಮೂರ್ಖರು ಯಾರೂ ಇಲ್ಲ. ಯಾರ ತಲೆ ಒಡೆದಾದರೂ ಸರಿಯೇ, ಅಽಕಾರ ಗಿಟ್ಟಿಸುವವರಿಗೆ ಮಾತ್ರ ಜೈ. ಅಧಿಕಾರಣ ರಾಜಕಾರಣದ ಡೈನಾಮಿಕ್ಸ್ ಸಂಪೂರ್ಣ ಬದಲಾಗಿ ಬಿಟ್ಟಿದೆ. ವಿಚಿತ್ರವೆಂದರೆ ಈ ಬಗ್ಗೆ ಯಾರಿಗೂ ವಿಷಾದ, ಪಶ್ಚಾತ್ತಾಪ ಇದ್ದಂತಿಲ್ಲ. ಈ ವಿಷಯದಲ್ಲಿ ಯಾವ ಪಕ್ಷವೂ ಭಿನ್ನವಾಗಿ ಉಳಿದಿಲ್ಲ. ಪಕ್ಷಗಳ ನಡುವಿನ ಗೋಡೆಯೂ ತೆಳುವಾಗಿದೆ ಅಥವಾ ಗೋಡೆಯೇ ಇಲ್ಲವಾಗಿದೆ. ಯಾರು ಬೇಕಾದರೂ, ಯಾವ ರಾಜಕೀಯ ಪಕ್ಷಕ್ಕೆ ಬೇಕಾದರೂ ಸಲ್ಲುತ್ತಾರೆ. ಹಾಗಂತ ಎಲ್ಲ ರಾಜಕೀಯ ಪಕ್ಷಗಳು ಸಿದ್ಧಾಂತದ ಬಗ್ಗೆ ಮಾತಾಡುವುದನ್ನು ನಿಲ್ಲಿಸುವುದಿಲ್ಲ. ಕೆಲವೊಮ್ಮೆ ಸಿದ್ಧಾಂತಗಳು ಇರುವುದೇ ಎಳ್ಳು-ನೀರು ಬಿಡಲಾ ಎಂಬ ಜಿಜ್ಞಾಯೂ ಮೂಡುವುದುಂಟು.

ಈ ಸಂಗತಿಗಳನ್ನೆಲ್ಲ ನೆನಪಿಸಿಕೊಳ್ಳುವಾಗ ಮತ್ತೆ ಮತ್ತೆ ನೆನಪಾಗುವುದು ವಾಜಪೇಯಿ ಅವರು ಹೇಳಿದ ಮಾತುಗಳು. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡುತ್ತಾ, ‘ಪಕ್ಷದಲ್ಲಿ ಯಾವ ಹುzಯನ್ನೂ ಬಯಸದ ದೀನದಯಾಳ ಉಪಾಧ್ಯಾಯ ಮತ್ತು ನಾನಾಜಿ ದೇಶಮುಖ್ ನಿದರ್ಶನ ಹೇಳಿದರೆ ಅನೇಕ ಕಾರ್ಯಕರ್ತರಿಗೆ ರುಚಿಸುವುದಿಲ್ಲ ಎಂಬುದು ಗೊತ್ತು. ಆದರೆ ರಾಜಕಾರಣ ಅದೆಂಥ ಅದ್ಭುತ ಆಟವೆಂದರೆ, ಇಲ್ಲಿ ಆಟ ಮುಗಿಯುವುದು ನಾವು ತೀರಿಕೊಂಡಾಗ ಮಾತ್ರ. ಅಲ್ಲಿಯ ತನಕವೂ ಆಟ ಚಾಲ್ತಿಯಲ್ಲಿರುತ್ತದೆ.

ಹೀಗಾಗಿ ಇಂದು ನನಗೆ ಯಾವುದೋ ಹುದ್ದೆ ಕೈತಪ್ಪಿ ಹೋಯಿತು ಎಂದು ಬೇಸರಿಸಿಕೊಳ್ಳಬೇಕಿಲ್ಲ. ಕಾರಣ ಅಸಲಿಗೆ ಆಟವೇ ಮುಗಿದಿರುವುದಿಲ್ಲ. ಹೀಗಾಗಿ
ನೀವು ಏನೂ ಸಿಗಲಿಲ್ಲ ಎಂದು ಖಿನ್ನಮನಸ್ಕರಾಗಬೇಕಿಲ್ಲ. ಆದರೆ ಅದು ಒಲಿದು ಬರುವ ತನಕ ಸಮಾಧಾನಚಿತ್ತ ರಾಗಿರಬೇಕು’ ಎಂದು ಹೇಳಿದ್ದರು. ಬಿಜೆಪಿಯ ಕಾರ್ಯಕರ್ತರೆಲ್ಲ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಮಾತುಗಳಿವು. ಮೊನ್ನೆ ಬಿಜೆಪಿಯ ಸಿ.ಎಚ್.ವಿಜಯಶಂಕರ ಮೇಘಾಲಯದ ರಾಜ್ಯಪಾಲರಾಗಿ ನೇಮಕ ವಾದರಂತೆ ಎಂಬ ಸುದ್ದಿ ಬಿತ್ತರವಾದಾಗ ತಕ್ಷಣ ನೆನಪಾಗಿದ್ದು ವಾಜಪೇಯಿ ಹೇಳಿದ ಆ ಮಾತುಗಳು. ಕಳೆದ ಐದು ವರ್ಷಗಳಿಂದ ವಿಜಯಶಂಕರ
ರಾಜಕಾರಣದಲ್ಲಿ ಅಷ್ಟೇನೂ ಸಕ್ರಿಯರಾಗಿರಲಿಲ್ಲ. ಅವರಿಗೆ ಯಾವ ಮಹತ್ವದ ಜವಾಬ್ದಾರಿಯೂ ಇರಲಿಲ್ಲ. ಯಾವ ವಿಧಾನಸಭೆ, ವಿಧಾನ ಪರಿಷತ್ ಮತ್ತು ಸಂಸತ್ತಿನ ಉಭಯ ಸದನಗಳ ಸದಸ್ಯರೂ ಆಗಿರಲಿಲ್ಲ.

೨೦೧೭ ರಲ್ಲಿ ಬೇಸರಗೊಂಡು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದರು. ಎರಡು ವರ್ಷಗಳ ನಂತರ, ವಾಪಸ್ ಬಿಜೆಪಿಗೆ ಮರಳಿದ್ದರು. ಮೂಲತಃ ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡಿದ್ದ ವಿಜಯಶಂಕರ, ನಂತರ ಬಿಜೆಪಿ ಸೇರಿದರು. ೧೯೯೪ ರಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ
ಗೆದ್ದಿದ್ದರು. ೧೯೯೮ ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ೨೦೦೪ ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸೋಲಿಸಿ
ಪುನರಾಯ್ಕೆಯಾಗಿದ್ದರು. ೨೦೧೪ ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಅವರಿಗೆ ಟಿಕೆಟ್ ನಿರಾಕರಿಸಿ ಪ್ರತಾಪ ಸಿಂಹ ಅವರಿಗೆ ಕೊಡಲಾಯಿತು.
ಆಗ ವಿಜಯಶಂಕರ ಕಣ್ಣೀರು ಹಾಕಿದ್ದರು. ನಂತರ ಅವರನ್ನು ಹಾಸನದಲ್ಲಿ ದೇವೇಗೌಡರ ವಿರುದ್ಧ ನಿಲ್ಲಿಸಿ ಬಲಿಪಶು ಮಾಡಲಾಗಿತ್ತು.

೨೦೧೦ ರಲ್ಲಿ ವಿಧಾನಪರಿಷತ್ ಸದಸ್ಯರಾದ ವಿಜಯಶಂಕರ ಅವಧಿ ೨೦೧೬ ಕ್ಕೆ ಮುಗಿದಿತ್ತು. ಮುಂದಿನ ಎಂಟು ವರ್ಷ ಅವರಿಗೆ ರಾಜಕೀಯದಲ್ಲಿ ಸುದೀರ್ಘ
ಗ್ರಹಣ! ಕಾಂಗ್ರೆಸ್ಸಿಗೆ ಹೋಗಿ ತಪ್ಪು ಮಾಡಿದೆ ಎಂಬುದು ಅವರಿಗೆ ಬಹುಬೇಗ ಮನವರಿಕೆಯಾಯಿತು. ಕಳೆದ ಎಂಟು ವರ್ಷಗಳಿಂದೀಚೆ ನಡೆದ ಎಲ್ಲ ಚುನಾವಣೆಗಳಲ್ಲಿ ಟಿಕೆಟ್‌ಗಾಗಿ ವಿಫಲ ಯತ್ನ ನಡೆಸಿ ಜಿಗುಪ್ಸೆ ಹೊಂದಿದ್ದರು. ಸದ್ಯದ ಭವಿಷ್ಯತ್ತಿನಲ್ಲಿ ಅವರಿಗೆ ಯಾವುದೇ ಆಶಾದಾಯಕ ವಾತಾವರಣ ಇರಲಿಲ್ಲ. ಎಲ್ಲ ದಾರಿಗಳು ಬಂದ್ ಆಗಿದ್ದವು.

ಹಾಗಂತ ಎಲ್ಲರೂ ಭಾವಿಸಿದ್ದರು. ಆದರೆ ಹಠಾತ್ತನೆ ಪ್ರಧಾನಿ ಕಾರ್ಯಾಲಯದಿಂದ ಸಿಹಿ ಸುದ್ದಿ ಬಂದಿತು. ಪಕ್ಷದಲ್ಲಿ ಯಾರಿಗೂ ಗೊತ್ತಿರಲಿಲ್ಲ. ವಿಜಯಶಂಕರಗೆ
ರಾಜ್ಯಪಾಲ ಹುದ್ದೆ ಒಲಿಯಬಹುದು ಎಂಬ ಸಣ್ಣ ಸುಳಿವು ಯಾರಿಗೂ ಇರಲಿಲ್ಲ. ಸ್ವತಃ ವಿಜಯಶಂಕರ ಅವರಿಗೂ ಈ ಸುಳಿವು ಇತ್ತೋ ಇಲ್ಲವೋ, ಗೊತ್ತಿಲ್ಲ. ವಿಜಯಶಂಕರ ಅವರ ರಾಜಕೀಯ ಆಟ ಮುಗಿದೇ ಹೋಯಿತು ಎಂದು ಎಲ್ಲರೂ ಅಂದುಕೊಂಡಿದ್ದರು. ಹಾಂ.. ರಾಜಕಾರಣದಲ್ಲಿ ಎಲ್ಲ ಮುಗಿದು ಹೋಯ್ತು
ಎಂಬುದು ಇಲ್ಲವೇ ಇಲ್ಲ! ವಾಜಪೇಯಿ ಹೇಳಿದ್ದು ನಿಜ.

Leave a Reply

Your email address will not be published. Required fields are marked *