Thursday, 15th May 2025

ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ನ್ಯೂಜಿಲೆಂಡ್‌ ಪ್ರಧಾನಿ ಜೆಸಿಂದಾ

ಆಕ್ಲೆಂಡ್‌: ಜೆಸಿಂದಾ ಅರ್ಡರ್ನ್ ಅವರು ನ್ಯೂಜಿಲೆಂಡ್‌ ಪ್ರಧಾನಿಯಾಗಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಚುನಾವಣೆಯಲ್ಲಿ ಶೇ 49ರಷ್ಟು ಮತಗಳು ಜೆಸಿಂದಾ ಅವರ ಲಿಬರಲ್‌ ಲೇಬರ್‌ ಪಕ್ಷದ ಪರವಾಗಿದ್ದು, ಕನ್ಸರ್ವೇಟಿವ್‌ ರಾಷ್ಟ್ರೀಯ ಪಕ್ಷವು ಶೇ 27ರಷ್ಟು ಮತಗಳನ್ನಷ್ಟೇ ಪಡೆದಿದೆ. 24 ವರ್ಷಗಳ ಬಳಿಕ ಸಂಸತ್‌ನಲ್ಲಿ ಲೇಬರ್ ಪಕ್ಷವು ಏಕಾಂಗಿಯಾಗಿ ಬಹುಮತ ಪಡೆದಿದ್ದು, ಯಾವುದೇ ಮೈತ್ರಿ ಇಲ್ಲದೇ ಆಡಳಿತದ ಚುಕ್ಕಾಣಿ ಹಿಡಿಯಲಿದೆ.

ಉಪಪ್ರಧಾನಿ ವಿನ್‌ಸ್ಟನ್‌ ಪೀಟರ್‌ ಅವರ ನ್ಯೂಜಿಲೆಂಡ್‌ ಫಸ್ಟ್‌ ಪಕ್ಷ ಠೇವಣಿ ಕಳೆದುಕೊಂಡಿದ್ದು, ಲಿಬರಿಟೇರಿಯನ್‌ ಆಕ್ಟ್‌ ಪಕ್ಷವು ಶೇ 8ರಷ್ಟು ಹಾಗೂ ಗ್ರೀನ್‌ ಪಕ್ಷವು ಶೇ 7.5ರಷ್ಟು ಮತವನ್ನು ಪಡೆದಿದೆ.

ಜಯಭೇರಿ ಬಾರಿಸಿದ ಜೆಸಿಂದಾ ಅವರನ್ನು ‘ರಾಕ್‌ಸ್ಟಾರ್‌’ ರೀತಿ ಅಭಿನಂದಿಸಿದ ಜನರು, ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

2017ರಲ್ಲಿ ಎರಡು ಪಕ್ಷಗಳ ಜೊತೆಗೂಡಿ ಲೇಬರ್‌ ಪಕ್ಷವು ಆಡಳಿತದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಜೆಸಿಂದಾ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಮಾದರಿಯಾಗಿ ಜೆಸಿಂದಾ ಅವರು ಗುರುತಿಸಿಕೊಂಡಿದ್ದಾರೆ. 2019 ರಲ್ಲಿ ನಡೆದ ಕ್ರೈಸ್ಟ್‌ಚರ್ಚ್‌ ಮಸೀದಿ ದಾಳಿಯ ನಂತರ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಎಲ್ಲರೂ ಶ್ಲಾಘಿಸಿದ್ದರು. ಈ ದಾಳಿಯಲ್ಲಿ 51 ಮುಸ್ಲಿಮರು ಮೃತಪಟ್ಟಿದ್ದರು. ಘಟನೆ ನಂತರ ಸೆಮಿ-ಆಟೊಮ್ಯಾಟಿಕ್‌ ಶಸ್ತ್ರಗಳನ್ನು ರಾಷ್ಟ್ರದಲ್ಲಿ ನಿಷೇಧಿಸುವ ಹೊಸ ಕಾನೂನನ್ನು ಅವರು ಜಾರಿಗೊಳಿಸಿದ್ದರು.

Leave a Reply

Your email address will not be published. Required fields are marked *