Wednesday, 14th May 2025

ಅಮರಾವತಿ ರಾಜ್ಯದ ರಾಜಧಾನಿ: ಎನ್ ಚಂದ್ರಬಾಬು ನಾಯ್ಡು ಘೋಷಣೆ

ವದೆಹಲಿ: ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮಂಗಳವಾರ ಅಮರಾವತಿ ರಾಜ್ಯದ ರಾಜಧಾನಿಯಾಗಲಿದೆ ಎಂದು ಘೋಷಿಸಿದ್ದಾರೆ.

ವಿಜಯವಾಡದಲ್ಲಿ ನಡೆದ ಎನ್ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಅವರನ್ನು ಮೈತ್ರಿಕೂಟದ ಸದನದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಜನಸೇನಾ ಪಕ್ಷದ ಮುಖ್ಯಸ್ಥ ಕೆ.ಪವನ್ ಕಲ್ಯಾಣ್ ಅವರ ಹೆಸರನ್ನು ಪ್ರಸ್ತಾಪಿಸಿದರು ಮತ್ತು ಇದನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಮತ್ತು ಹೊಸದಾಗಿ ಆಯ್ಕೆ ಯಾದ ಸಂಸದೆ ಡಿ.ಪುರಂದೇಶ್ವರಿ ಬೆಂಬಲಿಸಿದರು.

“ಅಮರಾವತಿ ನಮ್ಮ ರಾಜ್ಯದ ರಾಜಧಾನಿಯಾಗಲಿದೆ. ನಾವು ಕೇವಲ ಕೆಲವು ಸ್ಥಳಗಳನ್ನು ಮಾತ್ರವಲ್ಲ, ಇಡೀ ರಾಜ್ಯವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ” ಎಂದು ನಾಯ್ಡು ಹೇಳಿದರು.

ಆಂಧ್ರಪ್ರದೇಶದಲ್ಲಿ ಟಿಡಿಪಿ, ಜೆಎಸ್ಪಿ ಮತ್ತು ಬಿಜೆಪಿಯನ್ನು ಒಳಗೊಂಡ ಎನ್ಡಿಎ, ಏಕಕಾಲದಲ್ಲಿ ನಡೆದ ರಾಜ್ಯ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ವೈಎಸ್‌ಆರ್ಸಿಪಿಯನ್ನು ಸಮಗ್ರವಾಗಿ ಸೋಲಿಸಿತು.

ವಿಶಾಖಪಟ್ಟಣಂ ಅನ್ನು ಆಡಳಿತಾತ್ಮಕ ರಾಜಧಾನಿಯಾಗಿ ಅಭಿವೃದ್ಧಿಪಡಿಸುವುದಾಗಿ ಮತ್ತು ಅಲ್ಲಿ ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿದ್ದ ನಿರ್ಗಮಿತ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡ ನಾಯ್ಡು, ವಿಶಾಖಪಟ್ಟಣಂನಲ್ಲಿ ವೈಎಸ್‌ಆರ್ಸಿಪಿಯನ್ನು ಸೋಲಿಸುವ ಮೂಲಕ ಜನರು ಈ ಕಲ್ಪನೆಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *