Tuesday, 13th May 2025

ಕೆಫೆ ಸ್ಫೋಟ ಪ್ರಕರಣ: ಶೋಭಾ ಹೇಳಿಕೆಗೆ ಸ್ಟಾಲಿನ್ ಆಕ್ರೋಶ

ಚೆನ್ನೈ: ಮಾರ್ಚ್‌ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ತಮಿಳುನಾಡು ಮೂಲದ ವ್ಯಕ್ತಿ ಕಾರಣ ಎಂದು ಆರೋಪಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಇದೊಂದು ಬೇಜವಾಬ್ದಾರಿ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಮಾಜಿಕ ತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಎನ್‌ಐಎ ಅಥವಾ ಪ್ರಕರಣದ ತನಿಖೆಗೆ ಸಂಬಂಧಿಸಿದ ವ್ಯಕ್ತಿಗಳು ಮಾತ್ರ ಈ ಬಗ್ಗೆ ಹೇಳಿಕೆ ನೀಡಬೇಕು’ ಎಂದಿದ್ದಾರೆ.

‘ಇಂತಹ ಹೇಳಿಕೆ ನೀಡಲು ಅವರಿಗೆ ಯಾವುದೇ ಅಧಿಕಾರ ಇಲ್ಲ. ತಮಿಳರು ಮತ್ತು ಕನ್ನಡಿಗರು ಬಿಜೆಪಿಯ ಈ ವಿಭಜನೆಯ ಮಾತುಗಳನ್ನು ತಿರಸ್ಕರಿಸು ತ್ತಾರೆ. ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟು ಮಾಡಿರುವ ಶೋಭಾ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿ ಸುತ್ತೇನೆ’ ಎಂದು ಹೇಳಿದ್ದಾರೆ.

‘ಪ್ರಧಾನಿಯಿಂದ ಹಿಡಿದು ಕಾರ್ಯಕರ್ತರವರೆಗೆ ಬಿಜೆಪಿಯ ಎಲ್ಲರೂ ಈ ಕೊಳಕು ವಿಭಜಕ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಚುನಾವಣಾ ಆಯೋಗವು ಈ ದ್ವೇಷದ ಭಾಷಣವನ್ನು ಗಮನಿಸಬೇಕು. ತಕ್ಷಣವೇ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಅಗ್ರಹಿಸಿದ್ದಾರೆ.

‘ತಮಿಳುನಾಡಿನಿಂದ ಬಂದ ವ್ಯಕ್ತಿಯೊಬ್ಬರು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ. ದೆಹಲಿಯಿಂದ ಬಂದ ವ್ಯಕ್ತಿಯೊಬ್ಬ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ. ಕೇರಳದ ವ್ಯಕ್ತಿಯೊಬ್ಬ ವಿದ್ಯಾರ್ಥಿಗಳ ಮೇಲೆ ಆಯಸಿಡ್‌ ಎರಚಿದ್ದ’ ಎಂದು ಶೋಭಾ ಕರಂದ್ಲಾಜೆ ಮಂಗಳವಾರ ಹೇಳಿದ್ದರು.

Leave a Reply

Your email address will not be published. Required fields are marked *