Wednesday, 14th May 2025

ತಿರುಮಲದಲ್ಲಿ ನೂತನ ಕರ್ನಾಟಕ ಭವನದ “ಹಂಪಿ ಬ್ಲಾಕ್’’ ಉದ್ಘಾಟನೆ

• 176 ಕೊಠಡಿಗಳ ಮೊದಲ ಬ್ಲಾಕ್ ಲೋಕಾರ್ಪಣೆ
• ಚುನಾವಣೆ ಬಳಿಕ ಕಲ್ಯಾಣ ಮಂಟಪವೂ ಕನ್ನಡಿಗರ ಸೇವೆಗೆ ಲಭ್ಯ

ಬೆಂಗಳೂರು: ತಿರುಪತಿ ತಿರುಮಲದಲ್ಲಿ ಕರ್ನಾಟಕದ ಭಕ್ತರಿಗೆ ತಂಗಲು ಅನುಕೂಲ ಮಾಡಿಕೊಡುವ ವಸತಿ ಗೃಹಗಳ ಸಮುಚ್ಚಯದ ಮೊದಲ ಹಂತದ ಕಟ್ಟಡ “ಹಂಪಿ ಬ್ಲಾಕ್ ’’ ಅನ್ನು ಸಾರಿಗೆ ಮತ್ತು ಮುಜುರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಯಲಹಂಕ ಶಾಸಕರೂ ಆಗಿರುವ ಟಿಟಿಡಿ ಸದಸ್ಯ ಎಸ್.ಆರ್.ವಿಶ್ವನಾಥ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಣ ಮಂಜೂರು ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕರ್ನಾಟಕದ ಭಕ್ತರಿಗೆ ಉಳಿದುಕೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಸ್.ಆರ್.ವಿಶ್ವನಾಥ್ ಅವರು ವಿಶೇಷ ಆಸಕ್ತಿ ವಹಿಸಿ ಇಲ್ಲೊಂದು ಸುಸಜ್ಜಿತ ವಸತಿ ಸಮುಚ್ಚಯವನ್ನು 236 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುವಲ್ಲಿ ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.

ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ಹಣಕಾಸು ನೆರವನ್ನು ನಮ್ಮ ಸರ್ಕಾರ ನೀಡಲಿದೆ. ಆದಷ್ಟೂ ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ರಾಜ್ಯದ ಭಕ್ತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಎಸ್.ಆರ್.ವಿಶ್ವನಾಥ್ ಅವರು ಮಾತನಾಡಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹಕಾರ ಮತ್ತು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶೇಷ ಆಸಕ್ತಿ ವಹಿಸಿ ಸುಸಜ್ಜಿತ ಕೊಠಡಿಗಳ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದ್ದರು. ಇದರಿಂದಾಗಿಯೇ ಕರ್ನಾಟಕದಿಂದ ಆಗಮಿಸುವ ಭಕ್ತರಿಗೆ ಉಳಿದುಕೊಳ್ಳಲು ಸಹಕಾರಿಯಾದಂತಾಗಿದೆ ಎಂದರು.

ಇಂದು ಲೋಕಾರ್ಪಣೆಗೊಂಡ ಮೊದಲ ಬ್ಲಾಕ್ ನಲ್ಲಿ ಒಟ್ಟು 176 ಕೊಠಡಿಗಳಿದ್ದು, ಈ ಕೊಠಡಿಗಳ ಸೌಲಭ್ಯ ಪಡೆಯಲು ಭಕ್ತರು ಆನ್ ಲೈನ್ ನಲ್ಲಿ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ. ಸದ್ಯದಲ್ಲಿಯೇ ಈ ಸೇವೆಯನ್ನು ಆರಂಭಿಸಲಾಗುವುದು. ಇದಲ್ಲದೇ, ಎರಡನೇ ಬ್ಲಾಕ್ ಮತ್ತು ಹಳೆಯ ಕಟ್ಟಡದ ಕೊಠಡಿಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಲೋಕಸಭೆ ಚುನಾವಣೆ ಬಳಿಕ ಈ ಕೊಠಡಿಗಳನ್ನೂ ಲೋಕಾರ್ಪಣೆ ಮಾಡಲಾಗುವುದು ಮತ್ತು ಬೃಹತ್ ಕಲ್ಯಾಣಮಂಟಪವನ್ನೂ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಮುಜರಾಯಿ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಸೇರಿದಂತೆ ಅನೇಕ ಹಿರಿಯ ಅ‍‍ಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *