Wednesday, 14th May 2025

ಹಿರಿಯರ ಆಚಾರ ವಿಚಾರ ಬದುಕಿಗೆ ಮಾರ್ಗದರ್ಶಿ: ಆಶು ಕವಿ ಸಿದ್ದಣ್ಣ ಬಿದರಿ

ಕೊಲ್ಹಾರ: ದೇಶ ಸುತ್ತು ಕೋಶ ಓದು ಎಂಬಂತೆ ಹಿರಿಯರ ಆಚಾರ ವಿಚಾರಗಳು, ಜೀವನ ಪದ್ಧತಿಗಳು ನಮ್ಮ ಬದುಕಿಗೆ ದಾರಿ ತೋರುವ ಮಾರ್ಗಗಳಿವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಶು ಕವಿ, ಜನಪದ ಸಾಹಿತ್ಯದ ಗಾರುಡಿಗ ಸಿದ್ದಣ್ಣ ಬಿದರಿ ಹೇಳಿದರು.

ಪಟ್ಟಣದಲ್ಲಿ ಎಸ್.ಕೆ.ಎಂ ಶಿಕ್ಷಣ ಸಂಸ್ಥೆಯ ನವ ಚೈತನ್ಯ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಬದುಕಿನ ಪ್ರತಿ ತಿರುವಿನಲ್ಲೂ ಕೂಡ ಕಲಿಕೆ ಇದ್ದೆ ಇರುತ್ತದೆ ಎಂದು ತಮ್ಮ ಕವಿಶೈಲಿಯಲ್ಲಿ ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಅಧ್ಯಕ್ಷ ಸ್ಥಾನ‌ ವಹಿಸಿದ್ದ ಶಂಕರ್ ಕಲ್ಯಾಣಿ ಮಾತನಾಡುತ್ತಾ ಅತಿ ವೇಗವಾಗಿ ಪ್ರಗತಿ ಹೊಂದುತ್ತಿರುವ ಜಗತ್ತಿನಲ್ಲಿ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ಶಿಕ್ಷಣದಿಂದ ಅನೇಕ ಕ್ರಾಂತಿಕಾರಿ ಅನ್ವೇಷಣೆಗಳಾಗಿ ಜಗತ್ತು ಶರವೇಗದಲ್ಲಿ ಮುನ್ನುಗ್ಗುತ್ತಿದೆ ಹಾಗಾಗಿ ಶಿಕ್ಷಣಕ್ಕೆ ತನ್ನದೇ ಆದಂತಹ ವಿಶೇಷ ಮಹತ್ವವಿದೆ ಎಂದು ಅವರು ಹೇಳಿದರು.

ಅತಿಥಿಗಳಾಗಿ ಶಿಕ್ಷಣ ಸಂಯೋಜಕರಾದ ಜಿ.ಎಸ್ ಗಣಿ, ವಲಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಜಿ.ಆಯ್ ಗೋಡ್ಯಾಳ, ಮಂಜುನಾಥ ಮಟ್ಟಿಹಾಳ, ಬಸವರಾಜ ಅಪ್ಪಣ್ಣವರ, ಹಾಗೂ ಇತರರು ಇದ್ದರು. ಶ್ರೀಮತಿ ಪುಷ್ಪ ಪರಗೊಂಡು ನಿರೂಪಿಸಿದರು, ಶ್ರೀಮತಿ ಬಸಮ್ಮ ಹಿರೇಮಠ ಸ್ವಾಗತಿಸಿದರು. ವಿದ್ಯಾಶ್ರೀ ಕೊಬ್ಬಣ್ಣವರ ವಂದಿಸಿದರು.

Leave a Reply

Your email address will not be published. Required fields are marked *