Wednesday, 14th May 2025

ಗೌರವ ಡಾಕ್ಟರೇಟ್ ಪಡೆದರೂ ಹೆಸರಿನ ಮುಂದೆ ‘ಡಾ.’ ಹಾಕಿಕೊಳ್ಳುವಂತಿಲ್ಲ: ಎಂ.ಸಿ. ಸುಧಾಕ‌ರ್

ವಿಧಾನಪರಿಷತ್ತು: ಗೌರವ ಡಾಕ್ಟರೇಟ್ ಪಡೆದಿದ್ದರೂ ತಮ್ಮ ಹೆಸರಿನ ಮುಂದೆ ‘ಡಾ.’ ಎಂದು ಹಾಕಿಕೊಳ್ಳುವಂತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕ‌ರ್ ತಿಳಿಸಿದರು.

ಪ್ರಶೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗೌರವ ಡಾಕ್ಟರೇಟ್ ಕೊಡುವುದಕ್ಕೂ ನಿಯಮ ಇದೆ. ಗೌರವ ಡಾಕ್ಟರೇಟ್ ಪಡೆದವರು ಹೆಸರಿನ ಮೊದಲು ‘ಡಾ.’ ಎಂದು ಹಾಕಿಕೊಳ್ಳುವಂತಿಲ್ಲ. ಈ ಬಗ್ಗೆ ಸುಪ್ರಿಂ ಕೋರ್ಟ್‌ ಆದೇಶವೇ ಇದೆ ಎಂದರು.

ಇತ್ತೀಚಿನ ದಿನಗಳಲ್ಲಿ ಯಾವ್ಯಾವುದೋ ವಿವಿಗಳು ಅರ್ಹರಲ್ಲದವರಿಗೂ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿವೆ. ಇದರಿಂದಾಗಿ ಗೌರವ ಡಾಕ್ಟರೇಟ್ ನೀಡಲು ಸರ್ಕಾರಿ, ಖಾಸಗಿ ವಿವಿಗಳಿಗೆ ಏಕರೂಪ ನಿಯಮ ಜಾರಿಗೆ ತರಲಾಗುವುದು. ಈ ಕುರಿತಂತೆ ಕರ್ನಾಕಟ ಉನ್ನತ ಶಿಕ್ಷಣ ಪರಿಷತ್ತಿನ ಮೂಲಕ ಗೌರವ ಡಾಕ್ಟರೇಟ್ ಕೊಡುವ ಬಗ್ಗೆ ನಿಯಮ ರೂಪಿಸುತ್ತೇವೆ. ಖಾಸಗಿ ಸೇರಿದಂತೆ ಎಲ್ಲ ವಿವಿಗೆ ಏಕರೂಪ ನಿಯಮ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.

ವಿವಿಗಳು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡುವುದು, ಯಾಂಕ್ ನೀಡುವ ವಿಷಯದಲ್ಲಿ ಒಂದೊಂದು ಮಾದರಿ ಅನುಸರಿಸುತ್ತಿವೆ. ಖಾಸಗಿ ವಿವಿಗಳು ತಮ್ಮದೇ ನಿಲುವನ್ನು ತೆಗೆದುಕೊಳ್ಳುತ್ತವೆ. ಮೌಲ್ಯಮಾಪನವನ್ನೂ ಅವರೇ ಮಾಡುವುದರಿಂದ ಅಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಬರುವಂತಾಗಿದೆ. ಇದಕ್ಕಾಗಿ ಎಲ್ಲ ವಿವಿಗಳು ಅಂಕಗಳ ಬದಲು ಗ್ರೇಡಿಂಗ್ ನೀಡುವ ಕುರಿತು ಚಿಂತನೆ ಮಾಡಲಾಗುವುದು ಎಂದರು.

Leave a Reply

Your email address will not be published. Required fields are marked *