ಉತ್ತರಕನ್ನಡ: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪೂರ ತಾಲೂಕಿನಲ್ಲಿ ಮಂಗನ ಕಾಯಿಲೆ ಆತಂಕ ಹೆಚ್ಚಾಗಿದೆ. ಮಂಗನ ಕಾಯಿಲೆಯಿಂದ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜಿಡ್ಡಿ ಗ್ರಾಮದ 65 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 43 ಜನರಲ್ಲಿ ಮಂಗಳ ಕಾಯಿಲೆ ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಸೂಕ್ತ ಲಸಿಕೆ ಇಲ್ಲದಿರುವುದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಆತಂಕದಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆ ಮನೆಗೆ ತೆರಳಿ ಮುಂಜಾಗ್ರತೆ ಮೂಡಿಸುತ್ತಿದ್ದಾರೆ. ಆದರೆ ಮಂಗನ ಕಾಯಿಲೆಯಿಂದ ಭಯಭೀತರಾಗಿರುವ ಜನರು ನಿಮ್ಮ ಮುಂಜಾಗ್ರತೆ ಬೇಡ, ಲಸಿಕೆ ಕೊಡಿ ಎನ್ನುತ್ತಿದ್ದಾರೆ.
ರಾಜ್ಯದಲ್ಲಿ ಈಗಾಗಲೆ ಒಟ್ಟು 49 ಮಂಗನ ಖಾಯಿಲೆ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಇಲಾಖೆ ಜನವರಿ 1ರಿಂದ ಫೆ.2ರವರೆಗೆ ರಾಜ್ಯದಲ್ಲಿ 258 ಕೆ.ಎಫ್.ಡಿ.ಪರೀಕ್ಷೆ ನಡೆಸಿದೆ. ಈ ವೇಳೆ ಮೂರು ಜಿಲ್ಲೆಗಳಿಂದ ಒಟ್ಟು 49 ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗ (12), ಉತ್ತರ ಕನ್ನಡ (34) ಹಾಗೂ ಚಿಕ್ಕಮಗಳೂರು (3) ಪ್ರಕರಣ ಪತ್ತೆಯಾಗಿದೆ.
ರಾಜ್ಯದಲ್ಲಿ ಮಂಗನ ಖಾಯಿಲೆ ಆತಂಕ ಶುರುವಾಗಿದೆ. ನವೆಂಬರ್ ನಿಂದ ಮೇ ತಿಂಗಳ ಅವಧಿಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಹಠಾತ್ ಜ್ವರ, ಶರೀರದಲ್ಲಿ ತೀವ್ರ ಸ್ನಾಯುಗಳ ನೋವು, ತಲೆ ನೋವು ಇತ್ಯಾದಿ ರೋಗ ಲಕ್ಷಣಗಳಾಗಿವೆ.