Wednesday, 14th May 2025

ಬಾನಾಡಿಗೆ ಹಾರಿದ ಕನ್ನಡ ಕಹಳೆ

ಕೊಲ್ಹಾರ: ಮುಗಿಲೆತ್ತರಕ್ಕೆ ಹಾರಾಡಿದ ಕನ್ನಡದ ಕಹಳೆ, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಮೊಳಗಿದ ಜಯಘೋಷ ಕನ್ನಡ ರಥ ಯಾತ್ರೆಗೆ ಅದ್ಧೂರಿಯಾಗಿ ಸ್ವಾಗತ ಕೋರಿದ ತಾಲೂಕ ಆಡಳಿತ ಮಂಡಳಿ ಹಾಗೂ ಪಟ್ಟಣದ ನಾಗರೀಕರು.

ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ರಥಯಾತ್ರೆ ಯನ್ನು ಪಟ್ಟಣದಲ್ಲಿ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ತಹಶೀಲ್ದಾರ್ ಎಸ್.ಎಸ್ ನಾಯಕಲಮಠ ಅಲಂಕೃತಗೊಂಡ ಕನ್ನಡಾಂಬೆ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪುಷ್ಪಮನ ನಮನ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಿದರು. ಪಟ್ಟಣದ ದಿಗಂಬರೇಶ್ವರ ಮಠದಿಂದ ಹೊರಟ ಮೆರವಣಿಗೆ ಶಿವಾಜಿ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಬಸ್ ನಿಲ್ದಾಣ, ಮಹಾತ್ಮ ಗಾಂಧೀಜಿ ವೃತ್ತ, ಆಜಾದ್ ವೃತ್ತ, ಅಂಬೇಡ್ಕರ್ ವೃತ್ತ ಮೂಲಕ ಸರ್ಕಾರಿ ಪ್ರಾಥಮಿಕ ಶಾಲೆಗೆ ಆಗಮಿಸಿ ಅದ್ಧೂರಿ ಕಾರ್ಯಕ್ರಮವಾಗಿ ಪರಿವರ್ತನೆಗೊಂಡಿತು.

ಪೂರ್ಣಕುಂಭ ಮೆರವಣಿಗೆ, ಡೊಳ್ಳು ಕುಣಿತ, ಬೊಂಬೆಯಾಟ, ವಿವಿಧ ಕಲಾ ತಂಡಗಳ ಭಾಗವಹಿಸುವಿಕೆ ಸಹಿತ ವಿದ್ಯಾರ್ಥಿಗಳು ನೃತ್ಯವನ್ನು ಪ್ರಚುರ ಪಡಿಸಿದರು.

ಪ.ಪಂ ಮುಖ್ಯಾಧಿಕಾರಿ ಉಮೇಶ್ ಛಲವಾದಿ, ಕೃಷಿ ಅಧಿಕಾರಿ ಎಂ.ಕೆ ಪುರೋಹಿತ, ಶಿರಸ್ತೇದಾರ್ ಕೃಷ್ಣ ಗುಡೂರ, ಪ ಪಂ ಸದಸ್ಯರಾದ ಸಿ.ಎಸ್ ಗಿಡ್ಡಪ್ಪ ಗೋಳ, ಕರವೇ ಜಿಲ್ಲಾ ಉಪಾಧ್ಯಕ್ಷ ಕಲ್ಲು ಸೊನ್ನದ, ತಾಲೂಕ ಅಧ್ಯಕ್ಷ ಮಹಾಂತೇಶ ಗಿಡ್ಡಪ್ಪಗೋಳ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಮಲ್ಲಪ್ಪ ಗಣಿ, ಚಾಲಕರ ಸಂಘದ ತಾಲೂಕ ಅಧ್ಯಕ್ಷ ಸಿದ್ದು ಗಣಿ ಸಹಿತ ಪ ಪಂ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯುದ್ದಕ್ಕೂ ಸಂಭ್ರಮದಿಂದ ಭಾಗಿಯಾದರು.

Leave a Reply

Your email address will not be published. Required fields are marked *